ಬದಿಯಡ್ಕ: ಭಕ್ತಿ ಎನ್ನುವುದು ಕೇವಲ ತೋರಿಕೆಗೆ ಮಾತ್ರ ವಾಗದೆ ಅಂತರಾಳದ ಶಕ್ತಿಯಾಗ ಬೇಕು. ಆ ಮೂಲಕ ಅಂತಃಶಕ್ತಿ ಜಾಗೃತಗೊಂಡು ಪ್ರಜ್ಞಾವಂತ ಸಮಾಜ ಸೃಷ್ಟಿಯಾಗಬೇಕು. ಒಳ್ಳೆಯ ಆಲೋಚನೆಗಳು ನಮ್ಮ ಜೀವನದ ದಾರಿದೀಪವಾದಾಗ ನಮ್ಮ ಯುವಜನಾಂಗ ಈ ದೇಶದ ಅರ್ಥಪೂರ್ಣ ಆಸ್ತಿಯಾಗಲು ಸಾಧ್ಯ. ಅದು ದೇಶದ ಆಭಿವೃದ್ಧಿಯ ಸೂಚಕವೂ ಹೌದು. ಆದುದರಿಂದ ಭಯ ಭಕ್ತಿ ಜೀವನದಲ್ಲಿ ಸದಾ ಇರಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು.
ಅವರು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದ್ರವ್ಯಕಲಶದ ಅಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಧಾರ್ಮಿಕ ಸಭೆಯಲ್ಲಿ ಮಲ್ಲ ಶ್ರೀ ಕ್ಷೇತ್ರದ ಮೊಕ್ತೇಸರರಾದ ವಿಷ್ಣು ಭಟ್ ಆನೆಮಜಲು ಅಧ್ಯಕ್ಷತೆ ವಹಿಸಿದರು. ಹಾಗೂ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆರಿಕ್ಕಾಡಿ ವೇ|ಮೂ| ಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಬೆಂಗಳೂರು ದ್ವಾರಕಾ ಗ್ರೂಪ್ ಆಫ್ ಹೊಟೇಲ್ಸ್ ನ ಎನ್. ರಾಘವೇಂದ್ರ ರಾವ್, ಬೆಂಗಳೂರಿನ ಉದ್ಯಮಿಗಳಾದ ಜೆ.ಎಸ್. ಪುತ್ತೂರು, ಶ್ರೀ ಕೇದಾರನಾಥ್ನ ಟ್ರಸ್ಟಿಗಳಾದ ಗಂಗಾಧರ ಕುಷ್ಟಗಿ, ಮುಂಡೋಳು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಟ್ರಸ್ಟಿ ರಘುರಾಮ ಬಲ್ಲಾಳ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ರಹ್ಮ ಶ್ರೀ ರಾಘವೇಂದ್ರ ಭಟ್ ಉಡುಪುಮೂಲೆ ಸ್ವಾಗತಿಸಿ, ಮುರಳೀಕೃಷ್ಣ ವಂದಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಯಕಮಲಾ ಪಾಂಡ್ಯನ್ ಚೆನ್ನೈ ಅವರ ಶಿಷ್ಯೆ ಸುಪ್ರಿಯಾ ಹೊಸಮನೆಯವರಿಂದ ಭರತನಾಟ್ಯ, ಕಣ್ಣೂರು ಅಳಿಕ್ಕೋಡ್ ನಟರಾಜ ಮಂಟಪಂ ಇವರಿಂದ ಮಲೆಯಾಳ ಪುರಾಣ ನೃತ್ಯ ಸಂಗೀತ ನಾಟಕ ಕಡಾಂಕೋಟ್ಟ್ ಮಾಕ್ಕಂ ಭಗವತಿ ಪ್ರದರ್ಶನಗೊಂಡಿತು.
ಭಕ್ತಿಮಾರ್ಗದಲ್ಲಿ ನಡೆದಾಗ ಬದುಕು ಸಾರ್ಥಕ್ಯ ಹೊಂದುತ್ತದೆ. ಪರಸ್ಪರ ಪ್ರೀತಿ ಸೌಹಾರ್ದ ಮನಸು ಗಳನ್ನು ಬೆಸೆದು ಸಮಾಜದಲ್ಲಿ ಶಾಂತಿ ಸಮಾಧಾನವನ್ನು ಉಂಟು ಮಾಡು ತ್ತದೆ. ಮಾನವನಲ್ಲಿ ಉತ್ತಮ ವಿಚಾರಧಾರೆಗಳೊಂದಿಗೆ ಉನ್ನತ ವಾದ ಆಚಾರ ಮತ್ತು ಅಭಿರುಚಿ ಜಾಗೃತವಾದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಮುಂದಿನ ಜನಾಂಗವನ್ನು ಭಕ್ತಿ ಮತ್ತು ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿ ಬೆಳೆಸಬೇಕು. ಮೋಹದ ಬಲೆಯಿಂದ ವಾಸ್ತವ ಸತ್ಯದ ಅರಿವನ್ನು ಮೂಡಿಸುವ ಕಾರ್ಯಮಾಡಬೇಕು. ಭಗವಂತನ ಮೇಲಿನ ಭಕ್ತಿ ಮತ್ತು ಬಲವಾದ ನಂಬಿಕೆಯಿಂದ ಮಾಡುವ ಕಾರ್ಯ ಯಾವತ್ತೂ ಯಶಸ್ಸಿನೆಡೆಗೆ ಮುಖಮಾಡಿರುತ್ತದೆ ಎಂದು ಶ್ರೀಗಳು ಹೇಳಿದರು.