Home ಧಾರ್ಮಿಕ ಸುದ್ದಿ ಸಂಗಮ ಸ್ಥಳದಲ್ಲಿ ಮುಕ್ತಿಧಾಮಕ್ಕೆ ಶಂಕುಸ್ಥಾಪನೆ

ಸಂಗಮ ಸ್ಥಳದಲ್ಲಿ ಮುಕ್ತಿಧಾಮಕ್ಕೆ ಶಂಕುಸ್ಥಾಪನೆ

2335
0
SHARE

ಉಪ್ಪಿನಂಗಡಿ : ಗಯಾಪದ ಕ್ಷೇತ್ರ, ದಕ್ಷಿಣ ಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಸನ್ನಿಧಿ ಮುಂದೆ, ಸಂಗಮ ತಾಣದಲ್ಲಿ ಮುಕ್ತಿಧಾಮ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮ ಮಾ. 9ರಂದು ಜರಗಿತು.

ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ರಘುನಾಥ ರೈ ಶಂಕುಸ್ಥಾಪನೆ ನೆರವೇರಿಸಿದರು. ಆಸ್ತಿಕ ಬಂಧುಗಳ ಅಪರ ಕ್ರಿಯೆ ಸಲುವಾಗಿ ನದಿ ಸಂಗಮದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಮುಕ್ತಿಧಾಮ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 1 ಕೋಟಿ ರೂಪಾಯಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಭಾರತದ ಉತ್ತರದಲ್ಲಿ ಕಾಶೀ ವಿಶ್ವನಾಥ, ವೀರಭದ್ರ ಸನ್ನಿಧಿಯಿದ್ದು, ಉತ್ತರ ಕಾಶಿಯೆಂದೇ ಪ್ರಸಿದ್ಧಿಯಾಗಿದೆ. ದಕ್ಷಿಣದಲ್ಲಿ ಸಹಸ್ರಲಿಂಗೇಶ್ವರ, ಮಹಾ ಕಾಳಿ, ಕಾಲಭೈರವ ಇದ್ದು ದಕ್ಷಿಣ ಕಾಶಿಯೆಂದೇ ಪ್ರಖ್ಯಾತವಾಗಿದೆ. ಗಂಗೆ- ಯಮುನೆಯವರ ಸಂಗಮವಾಗಿ ಪ್ರಯಾಗವೆಂದು ಉತ್ತರ ಕಾಶಿ ಪ್ರಸಿದ್ಧವಾಗಿದೆ.

ಉಪ್ಪಿನಂಗಡಿಯಲ್ಲಿ ಕುಮಾರಧಾರಾ-ನೇತ್ರಾವತಿ ಹಾಗೂ ಗುಪ್ತಗಾಮಿನಿಯಗಿ ಸರಸ್ವತಿ ನದಿ ಹರಿಯುತ್ತಿದ್ದಾಳೆ ಎಂದು ಐಹಿತ್ಯ ಇದ್ದು, ತ್ರಿವೇಣಿ ಸಂಗಮವೆನಿಸಿದೆ. ಭಕ್ತಿ, ಮುಕ್ತಿ ಎರಡನ್ನೂ ಕರುಣಿಸುವ ಸಹಸ್ರಲಿಂಗೇಶ್ವರನ ಸನ್ನಿಧಿ ಸದ್ಗತಿದಾ ಯಕ ಕ್ರಿಯೆಗಳ ಮೂಲಕ ಮೋಕ್ಷಧಾಮ ವೆನಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮುಕ್ತಿ ಧಾಮ ನಿರ್ಮಾಣ ಮಾಡಬೇಕು ಎನ್ನುವ ಬಹುಕಾಲದ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ ಎಂದರು.

ದೇವಸ್ಥಾನದ ಅರ್ಚಕ ಹರೀಶ್‌ ಉಪಾಧ್ಯಾಯ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಸಮಿತಿ ಸದಸ್ಯರಾದ ಜಿ. ಕೃಷ್ಣ ರಾವ್‌ ಅರ್ತಿಲ, ಬೆಳ್ಳಿಪ್ಪಾಡಿ ಪ್ರಕಾಶ್‌ ರೈ, ಸೋಮನಾಥ, ರಾಧಾಕೃಷ್ಣ ನಾೖಕ್‌, ಡಾ| ರಾಜಾರಾಮ, ಅನಿತಾ ಕೇಶವ್‌, ಸವಿತಾ ಹರೀಶ್‌, ಮಾಜಿ ಅಧ್ಯಕ್ಷ ಸಂಜೀವ ಗಾಣಿಗ, ಸ್ಥಳೀಯ ಪ್ರಮುಖರಾದ ಯು. ರಾಮ, ಕಂಗ್ವೆ ವಿಶ್ವನಾಥ ಶೆಟ್ಟಿ, ಕೆ. ಗಣೇಶ್‌ ಭಟ್‌ ಎನ್‌. ಉಮೇಶ್‌ ಶೆಣೈ ಉಪಸ್ಥಿತರಿದ್ದರು. ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ಸ್ವಾಗತಿಸಿ, ವ್ಯವಸ್ಥಾಪಕ ವೆಂಕಟೇಶ್‌ ವಂದಿಸಿದರು. ಪ್ರಸಾದ್‌, ದಿವಾಕರ ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಸಂಗಮ ಸ್ಥಳದಲ್ಲಿ ಮುಕ್ತಿಧಾಮ
ಪ್ರತಿ ವರ್ಷ ಮಳೆಗಾಲ ಆರಂಭವಾದಂತೆ ವರ್ಷದ 4 ತಿಂಗಳು ನೇತ್ರವಾತಿ ಹಾಗೂ ಕುಮಾರಧಾರ ನದಿಗಳು ತುಂಬಿ ಹರಿಯುತ್ತಿದ್ದು, ಎರಡು ನದಿಗಳ ಜೋಡಣೆಯಾಗುವಲ್ಲಿ ಪಿಂಡ ಪ್ರದಾನ ನಡೆಸಿದರೆ ಮೃತರಿಗೆ ಸದ್ಗತಿ ದೊರೆಯುವ ಭಾವನೆಯಿದ್ದು, ಮಳೆಗಾಲದಲ್ಲಿ ಅಲ್ಲಿಗೆ ತೆರಳಲು ತುಂಬಿ ಹರಿಯುತ್ತಿದ್ದ ನದಿಗಳ ನೀರಿನಿಂದ ಅಸಾಧ್ಯವಾಗಿತ್ತು.

ಪಿಂಡ ಪ್ರದಾನಕ್ಕೆ ತೆರಳಿದ್ದ ಕೆಲವು ಭಕ್ತರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಈ ಅಪಾಯ ತಪ್ಪಿಸಲು ಹಾಗೂ ಭಕ್ತರ ನಂಬಿಕೆಯಂತೆ ಪಿಂಡ ಪ್ರದಾನ ನೆರವೇರಿಸಲು ಅನುಕೂಲವಾಗುವಂತೆ ಎರಡು ನದಿಗಳ ಸಂಗಮದಲ್ಲಿ ಈ ಮುಕ್ತಿಧಾಮ ರಚಿಸುವ ಪ್ರಯತ್ನ ನಡೆಸಲಾಗಿದೆ. ಸರಕಾರದ ಅನುದಾನಕ್ಕಾಗಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಈಗಲೂ ಪ್ರಯತ್ನ ಮುಂದುವರಿಸಿದ್ದಾರೆ. ನೀಲಿ ನಕಾಶೆಯನ್ನು ಮುಜರಾಯಿ ಇಲಾಖೆಗೆ ತಲುಪಿಸಲಾಗಿದೆ. ದೇವಸ್ಥಾನದ ಸ್ವಂತ ನಿಧಿ,ಸಾರ್ವಜನಿಕ ದೇಣಿಗೆಯನ್ನು ಮುಕ್ತಿಧಾಮ ಕಾರ್ಯಕ್ಕೆ ಅಣಿಯಾಗಿದ್ದೇವೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here