ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಬಜತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು ದೇವಸ್ಥಾನದ ಆಡಳಿತಾಧಿಕಾರಿಯಾಗಿ ನೇಮಿಸಿ, ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ, ಬಜತ್ತೂರು ಪಿಡಿಒ ಪ್ರವೀಣ್ ಕುಮಾರ್ ಡಿ. ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪ್ರವರ್ಗ ‘ಸಿ’ಗೆ ಸೇರಿದ ಧಾರ್ಮಿಕ ಸಂಸ್ಥೆ. ಇಲ್ಲಿನ ವ್ಯವಸ್ಥಾಪನ ಸಮಿತಿ ರಚನೆಯ ವಿರುದ್ಧ ಬೆಂಗಳೂರಿನ ರಾಜ್ಯ ಧಾರ್ಮಿಕ ಪರಿಷತ್ ನ್ಯಾಯಾಲಯದಲ್ಲಿ ಉಡುಪಿ ಪಲಿಮಾರು ಮಠದಿಂದ ಪ್ರಕರಣ ದಾಖಲಿಸಲಾಗಿತ್ತು (ಆರ್.ಡಿ.ಐ/ಟಿಆರ್ ಐ/58/2012). ಇದೀಗ ಪ್ರಕರಣದ ಮೇಲ್ಮನವಿದಾರರಾಗಿದ್ದ ಪಲಿಮಾರು ಮಠದವರು ಕೇಸ್ ಹಿಂಪಡೆದಿದ್ದಾರೆ. ಹೀಗಾಗಿ, ಪ್ರಕರಣವನ್ನು ವಜಾಗೊಳಿಸಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ವ್ಯವಸ್ಥಾಪನ ಸಮಿತಿ ರಚಿಸಲು ಕಾಲಾವಕಾಶ ಬೇಕಿದ್ದು, ಸುಗಮ ಆಡಳಿತಡ ದೃಷ್ಟಿಯಿಂದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಘಟನೋತ್ತರ ಅನುಮೋದನೆ ಪಡೆಯುವ ಮೇರೆಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ 1997ರ ಕಾಯ್ದೆಯ ವಿಧಿ 29ರಂತೆ ಮುಂದಿನ 6 ತಿಂಗಳ ವರೆಗೆ ಅಥವಾ ಹೊಸದಾಗಿ ವ್ಯವಸ್ಥಾಪನ ಸಮಿತಿ ರಚಿ ಸುವ ವರೆಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಅಧಿಕಾರ ಸ್ವೀಕಾರ
ಇಲಾಖೆಯ ಆದೇಶದಂತೆ ಬಜತ್ತೂರು ಗ್ರಾ.ಪಂ. ಪಿಡಿಒ ಪ್ರವೀಣ್ ಕುಮಾರ್ ಅವರು ಶುಕ್ರವಾರ ದೇವಸ್ಥಾನದ ಅರ್ಚಕ, ಪ್ರಸ್ತುತ ಆಡಳಿತದಾರ ಸೂರ್ಯಪ್ರಕಾಶ ಉಡುಪ ಅವರಿಗೆ ಆದೇಶ ಪತ್ರವನ್ನು ನೀಡಿ, ದೇವಸ್ಥಾನದ ಸಂಪೂರ್ಣ ಪ್ರಭಾರ ವಹಿಸಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಸದಸ್ಯರಾದ ಆನಂದ ಕೆ.ಎಸ್., ತಾ.ಪಂ. ಸದಸ್ಯ ಮುಕುಂದ, ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ಪ್ರಮುಖರಾದ ಧನಂಜಯ ಗೌಡ ಮುದ್ಯ, ಶ್ರೀಧರ ಗೌಡ ಮುದ್ಯ, ಹರಿಶ್ಚಂದ್ರ ಮುದ್ಯ, ದಾಮೋದರ ಗೌಡ ಪಡ್ಪು , ತಿಮ್ಮಪ್ಪ ಗೌಡ ಉಪಾತಿಪಾಲು, ಲಿಂಗಪ್ಪ ಗೌಡ ಬಾರಿಕೆ, ಸದಾನಂದ ಶಿಬಾರ್ಲ, ಮಹೇಂದ್ರ ವರ್ಮ ಪಡ್ಪು , ವಸಂತ ಗೌಡ ಪಿಜಕ್ಕಳ, ರೋಹಿತಪ್ಪ ಗೌಡ ಬಾರಿಕೆ, ಭಾಸ್ಕರ ಪೂಜಾರಿ, ಮನೋಜ್ ಪೂಜಾರಿ, ಗುಡ್ಡಪ್ಪ ಗೌಡ ಟಪಾಲುಕೊಟ್ಟಿಗೆ, ಪೂವಪ್ಪ ಪೂಜಾರಿ ಕೊಡಿಪಾನ, ಕೇಶವ ಗುಡ್ಡೆತ್ತಡ್ಕ, ಯಾದವ ಗೌಡ ನೆಕ್ಕರೆ, ರಮೇಶ ಪಿ. ಪಿಜಕ್ಕಳ, ದಯಾನಂದ ಆರಳ, ಕುಶಾಲಪ್ಪ ಎಸ್. ಬೆದ್ರೋಡಿ, ವಾಸು ಡಿ. ದಡ್ಡು, ಉಮೇಶ ದಡ್ಡು, ವಿಶ್ವನಾಥ ಗೌಡ ಪುಣಿಕೆದಡಿ, ಕೊರಗಪ್ಪ ಗೌಡ ದಡ್ಡು, ರಾಮಣ್ಣ ಗೌಡ ದಡ್ಡು, ರಮೇಶ ಗೌಡ, ರುಕ್ಮಯ ಪುಯಿಲ, ಪೂವಪ್ಪ, ಕೊಡಿಪಾನ, ಮೋನಪ್ಪ ಗೌಡ ಉಪಸ್ಥಿತರಿದ್ದರು.
ಶೀಘ್ರ ಭಕ್ತರ ಸಭೆ
ಇಲಾಖೆ ಆದೇಶದಂತೆ ದೇವಸ್ಥಾನದ ಸಂಪೂರ್ಣ ಪ್ರಭಾರ ವಹಿಸಿಕೊಂಡಿದ್ದೇನೆ. ಒಂದು ವಾರದೊಳಗೆ ಭಕ್ತರ ಸಭೆ ಕರೆದು ಇಲ್ಲಿನ ಪೂಜಾವಿಧಿ ವಿಧಾನ, ಹಬ್ಬಗಳ ಆಚರಣೆ ಕುರಿತಂತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.
– ಪ್ರವೀಣ್ ಕುಮಾರ್ ಡಿ.,
ಆಡಳಿತಾಧಿಕಾರಿ, ಮುದ್ಯ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ