Home ನಂಬಿಕೆ ಸುತ್ತಮುತ್ತ ಮಾತೆ ಮೇರಿ ರೋಸರಿ ನೀಡಿದ್ದು ಯಾರಿಗೆ, ಏನಿದು ಹೋಲಿ ರೋಸರಿ ?

ಮಾತೆ ಮೇರಿ ರೋಸರಿ ನೀಡಿದ್ದು ಯಾರಿಗೆ, ಏನಿದು ಹೋಲಿ ರೋಸರಿ ?

3799
0
SHARE

ದೇವರ ನಾಮ ಅಥವಾ ಸ್ತ್ರೋತ್ರ ಅಥವಾ ನಿರ್ದಿಷ್ಟ ಮಂತ್ರಗಳನ್ನು ಜಪಿಸುವಾಗ ಅತ್ತಿತ್ತ ಓಡುವ ಮನಸ್ಸನ್ನು ಹಿಡಿದಿಡಲು ಹಾಗೂ ಅವುಗಳನ್ನು ಎಣಿಸಲು ಉಪಯೋಗಿಸುವ ಸಾಧನವೇ ಜಪಮಾಲೆ. ಆದರೆ ಅದು ಕೇವಲ ಸಾಧನವಾಗಿ ಉಳಿಯದೆ ತಾನೇ ಒಂದು ಪವಿತ್ರ ದೈವಿಕ ಕುರುಹು ಆಗಿದೆ, ಆಧ್ಯಾತ್ಮಿಕ ಸಹವರ್ತಿಯೂ ಆಗಿದೆ. ಬಹುಶಃ ಜಗತ್ತಿನ ಎಲ್ಲ ಧರ್ಮಗಳಲ್ಲಿ ಜಪಮಾಲೆ ಬಳಕೆಯಲ್ಲಿದೆ. ಮಾಲೆಯೋಗಿ, ಉಂಗುರವಾಗಿ, ಮುಂಗೈಗೆ ಹಾಕುವ ಬ್ರೆಸ್ ಲೆಟ್ ಆಗಿ ಹೀಗೆ ಬೇರೆ ಬೇರೆ ರೂಪದಲ್ಲಿ ಭಕ್ತ ಹೃದಯಕ್ಕೆ ಹತ್ತಿರವಾಗಿದೆ. ಜಪಮಾಲೆ ಒಂದು ರೀತಿಯಲ್ಲಿ ದೇವರೊಂದಿಗೆ ನೇರಸಂವಾದಕ್ಕಿರುವ ಸುಲಭದ ದಾರಿ.

ಹಿಂದುಗಳು ಬಳಸುವ ಜಪಮಾಲೆಯಂತೆಯೇ ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಹಾಗೂ ಜಪಕ್ಕಾಗಿ ಬಳಸುವ ಮಾಲೆಗೆ ರೋಸರಿ ಎಂದು ಹೆಸರು.
ಪ್ರಪಂಚದ ದುರಿತಗಳ ನಾಶಕ್ಕೆ, ಮಾನವನನ್ನು ಕೆಡುಕಿನಿಂದ ಒಳಿತಿಗೆ ಸಾಗಿಸುವ ಸಾಧನ ಪ್ರಕ್ರಿಯೆಗೆ ಸುಲಭಸೂತ್ರವಾಗಿ ಒದಗುವ ರೀತಿಯಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರವೇ ‘ರೋಸರಿ’. ಈ ಪವಿತ್ರ ಮಾಲೆಯಿಂದಾಗಿ ಮಾತೆಯನ್ನು ಕೂಡ ’ರೋಸರಿ’ಮಾತೆ ಎಂದೇ ಸ್ತುತಿಸುತ್ತಾರೆ. ಇದು ರೋಸರಿಯ ಇತಿಹಾಸದ ಮೇಲೊಂದು ಕಿರುನೋಟ.
‘ನಮೋ ಮರಿಯಾ’ ‘ಆವೆ ಮರಿಯಾ’‘ಹೆಯಿಲ್ ಮೇರಿ…’

ಪ್ರಾರ್ಥನೆಯ ಶಬ್ದಗಳ ಬೇರೆ ಬೇರೆ, ಉದ್ದೇಶ ಒಂದೇ. ಮಾತೆಗೆ ನಮನ. ದೇವಪುತ್ರನಾದ ಯೇಸುಕ್ರಿಸ್ತನಿಗೆ ಜನ್ಮವಿತ್ತ ಕನ್ಯಾ ಮೇರಿಯನ್ನು ಕೆಥೊಲಿಕ್ ಕ್ರಿಶ್ವಿಯನ್ನರು ಜಪಿಸುವುದು ಹೀಗೆ.

ಆಕೆ ದೇವಪುತ್ರನಿಗೂ ಮಾತೆ, ಸಾಮಾನ್ಯ ಜನರಿಗೂ ಮಾತೆ, ಮಾರ್ಗದರ್ಶಕಿ. ಕಷ್ಟಗಳು ಕಾಡಿ ಕಂಗೆಟ್ಟಾಗ, ಮುಂದಿನ ದಾರಿ ತೋರದೆ ಗೊಂದಲವುಂಟಾದಾಗ, ಮಾನಸಿಕ ವ್ಯಥೆ ಉಲ್ಬಣಗೊಂಡಾಗ, ರೋಗ ಶಮನವಾಗದಿದ್ದಾಗ, ಧರ್ಮಕ್ಕೆ ಸಂಕಟವೊದಗಿದಾಗ, ನಿಂತ ನೆಲದಲ್ಲೇ ದೋಷಗಳು ಕಂಡುಬಂದಾಗ ಆಕೆ ದಾರಿ ತೋರುವಳು ಎಂಬುದು ಕೆಥೊಲಿಕ್ ಕ್ರಿಶ್ಚಿಯನ್ನರ ನಂಬಿಕೆ. ಅವಳನ್ನೇ ಪ್ರಾರ್ಥಿಸುವುದು ಒಂದು ಕ್ರಮವಾದರೆ, ಅವಳು ಹೇಳಿಕೊಟ್ಟ ಪ್ರಾರ್ಥನೆಯನ್ನು ಜಪಿಸುತ್ತಾ ಸ್ತುತಿಸುವುದು ಇನ್ನೊಂದು ಕ್ರಮ. ಹಾಗಾಗಿ ವಿಶ್ವದ ಕೋಟ್ಯಂತರ ಕೆಥೊಲಿಕ್ ಕ್ರಿಶ್ಚಿಯನ್ನರ ಹೃದಯಾಂತರಾಳದ ಪ್ರಾರ್ಥನೆಯ ಮೂರ್ತ ರೂಪ ಮರಿಯಾ. ಸಂತೋಷ-ದುಃಖ, ಬಡತನ-ಸಿರಿತನ ಎಲ್ಲ ಕಾಲದಲ್ಲೂ ಜತೆಯಾಗುವ ಆಧ್ಯಾತ್ಮಿಕ ಶಕ್ತಿಯೆಂದರೆ ಆಕೆಯೇ! ‘ಇನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂಬಂಥ ಸಂದರ್ಭದಲ್ಲಿ, ನಮ್ಮ ಪ್ರಾರ್ಥನೆಗೆ ಇನ್ನಷ್ಟು ಬಲಬೇಕು ಎಂಬ ಸಂದರ್ಭದಲ್ಲಿ ಆರ್ತನಾದದಂತೆ ಮೂಡಿಬರುವ ಪ್ರಾರ್ಥನೆಯೆಂದರೆ ‘ಓ ಮೇರಿ, ಪರಿಶುದ್ಧಳಾಗಿ ಹುಟ್ಟಿದಾಕೆ, ನಮಗಾಗಿ ಪ್ರಾರ್ಥನೆ ಮಾಡು!

ನಿಜವೆಂದರೆ ತಮಗೆ ಪ್ರಾರ್ಥನೆ ಮಾಡಲು ಕಲಿಸಿದವಳೇ ಮೇರಿ ಮಾತೆ ಎನ್ನುತ್ತಾರೆ ಕೆಥೊಲಿಕರು. ಮೇರಿ ಮೊದಲಿಗೆ ರೋಸರಿ (ಜಪಮಾಲೆ) ಕೊಟ್ಟ ಸಂದರ್ಭ ಅವರ ಧಾರ್ಮಿಕ ಇತಿಹಾಸದ ಸುವರ್ಣ ಕ್ಷಣ.

ರೋಸರಿಯ ಹುಟ್ಟು ಹೀಗಿರಬಹುದೇ?ಜಪಮಾಲೆಯ ಹುಟ್ಟಿನ ಹಿನ್ನೆಲೆಯನ್ನು ಹೀಗೆ ಊಹಿಸಲಾಗಿದೆ.
ರೊಸಾರಿಯೋ ಕೆಥೆಡ್ರಲ್ ನ ಫಾದರ್ ಜೆ.ಬಿ. ಕ್ರಾಸ್ತಾ ಅವರು ಹೇಳುವಂತೆ, ಹಿಂದೆಲ್ಲ ಚರ್ಚಿನ ಫಾದರ್ ಗಳ ಕೈಯಲ್ಲಿರುವ ಶಾಸ್ತ್ರ ಪುಸ್ತಕ ಎಲ್ಲರಿಗೂ ಸಿಗುತ್ತಿರಲಿಲ್ಲ. ಅಲ್ಲದೆ, ಬೈಬಲ್ ನಲ್ಲಿರುವ 150 ಕೀರ್ತನೆಗಳನ್ನು ಪಠಿಸುವ ಸಂದರ್ಭದಲ್ಲಿ ಎಲ್ಲರಿಗೂ ಅವುಗಳನ್ನು ಲೆಕ್ಕ ಇಡುವುದಕ್ಕಾಗುತ್ತಿರಲಿಲ್ಲ.

ಹಾಗಾಗಿ ಉದ್ದನೆಯ ಹಗ್ಗಕ್ಕೆ ಕಲ್ಲುಗಳನ್ನು ಕಟ್ಟಿ ಕೊಂಡು ಲೆಕ್ಕಮಾಡಲಾಗುತ್ತಿತ್ತು. ಬಳಿಕ ಕಲ್ಲುಗಳ ಬದಲಿಗೆ ಇತರ ಸಾಧನಗಳಾದ ಮಣಿಗಳು, ಮರದ ತುಂಡುಗಳು ಮೊದಲಾದ ವಸ್ತುಗಳನ್ನು ಬಳಸುವ ಕ್ರಮ ರೂಢಿಗೆ ಬಂತು. ಕೀರ್ತನೆಗಳನ್ನು ಹೇಳಲು ಅಥವಾ ಓದಲು ಸಾಧ್ಯವಾಗದಿದ್ದವರು ‘ನಮೋ ಮೇರಿ’ ಅಥವಾ ‘ನಮೋ ಮರಿಯಾ’ ಎಂದು ಜಪ ಮಾಡುವ ಪದ್ಧತಿ ಬೆಳೆಯಿತು. ಅದಕ್ಕಾಗಿ ಎಣಿಕೆ ಮಾಡುವ ಹಗ್ಗವನ್ನೇ ಮಣಿಮಾಲೆಯಾಗಿ ರೂಪಿಸಲಾಯಿತು. ಈ ಮಾಲೆಯಲ್ಲಿ 54+5 ಮಣಿಗಳು ಹಾಗೂ ಒಂದು ಪದಕದಂತೆ ತೂಗಲಾಗಿರುವ ಶಿಲುಬೆ ಇರುತ್ತದೆ. ಇದನ್ನು ಬಳಸಿಕೊಂಡು ಒಂದು ಹೊತ್ತಿನ ಪ್ರಾರ್ಥನೆ ಮಾಡುವುದು ಕಡ್ಡಾಯ. ದಿನಕ್ಕೆ ಮೂರು ಬಾರಿ ಹೀಗೆ ಪ್ರಾರ್ಥಿಸಿ, 150 ಬಾರಿ ‘ನಮೋ ಮರಿಯಾ’ ಹೇಳುವವರೂ ಇದ್ದಾರೆ. ವಯಸ್ಸಾದವರಂತೂ ದಿನವಿಡೀ ಈ ಜಪಮಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿರುವುದನ್ನೂ ಕಾಣಬಹುದು.

‘ರೋಸರಿ’ ತನ್ನ ಅಚ್ಚುಮೆಚ್ಚಿನ ಪ್ರಾರ್ಥನೆ ಎನ್ನುವ ಕ್ರೈಸ್ತರ ಹಿಂದಿನ ಜಗದ್ಗುರುಗಳಾಗಿದ್ದ ಪೋಪ್ ಎರಡನೆಯ ಜಾನ್ ಪಾಲ್ ಅವರು, ಈ ಪ್ರಾರ್ಥನೆಗಳು ಬೈಬಲನ್ನೇ ಆಧರಿಸಿದ್ದೇ ಆಗಿವೆ ಎನ್ನುತ್ತಾರೆ. ‘ಅವರ್ ಫಾದರ್’ (ಪರಮ ಪಿತನೆ ಅಥವಾ ಸ್ವರ್ಗದಲ್ಲಿರುವ ತಂದೆಯೇ) ಹಾಗೂ ‘ಹೆಯಿಲ್ ಮೇರಿ’ (ನಮೋ ಮರಿಯಾ/ಆವೆ ಮರಿಯಾ) ಪ್ರಾರ್ಥನೆಗಳು ಕ್ರಿಸ್ತನ ಬದುಕಿನ ‘ಸುವಾರ್ತೆ’ ಗಳೇ ಆಗಿವೆ. ಹಾಗಾಗಿ ರೋಸರಿ ಪ್ರಾರ್ಥನೆ ನಮ್ಮನ್ನು ಕ್ರಿಸ್ತನಿಗೆ ಹೆಚ್ಚು ಆಪ್ತರನ್ನಾಗಿಸುತ್ತದೆ. ಈ ರೀತಿಯಾಗಿ ಪ್ರಾರ್ಥಿಸುವವರು ಯೇಸು ಮತ್ತು ಮೇರಿಯ ಪ್ರಿಯ ದೂತರಾಗುತ್ತಾರೆ ಎನ್ನುತ್ತಾರೆ.

ರೋಸರಿಯ ಹಿನ್ನೆಲೆ
ಕ್ರೈಸ್ತ ಜಪಮಾಲೆಯ ಇತಿಹಾಸವನ್ನು ನಮಗೆ ಕಟ್ಟಿ ಕೊಡುವುದು ಜನಪದ ಕಥನಗಳು ಹಾಗೂ ಕ್ರೈಸ್ತ ಧಾರ್ಮಿಕ ದಾಖಲೆಗಳು. ಮಧ್ಯ ಕಾಲೀನ ಯುಗದಲ್ಲಿ ಮರಿಯಾ ಮಾತೆಯ ಭಕ್ತರ ಸಂಖ್ಯೆ ಹೆಚ್ಚಿದಂತೆ ಈ ಜಪಮಾಲೆಯ/ಮಾತೆಯ ಕುರಿತ ಕಥೆಗಳು ಮತ್ತು ಪವಾಡಗಳ ಕುರಿತ ದಾಖಲೆಗಳ ಪ್ರಮಾಣವೂ ಹೆಚ್ಚಿತು ಎಂಬ ವಾದವಿದೆ. ಆಗಾಗ ರೋಸರಿ ಹಿಡಿದ ಮೇರಿ, ಶಿಲುಬೆ ಹಿಡಿದ ಮೇರಿ ಅಥವಾ ಅಭಯಹಸ್ತದ ಮೇರಿ ಸ್ಥಳೀಯ ಜನರಿಗೆ ದರ್ಶನ ನೀಡಿ, ‘ಮಕ್ಕಳೇ ಪ್ರಾರ್ಥಿಸಿ’ ಎಂದು ಸೂಚಿಸಿದ್ದಳೆಂಬ ಕತೆಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹಲವಾರಿವೆ. ಮೊದಲನೆಯ ಶತಮಾನ ಅಂದರೆ, ಕ್ರಿ.ಶ.40 ರಲ್ಲಿ ಮೇರಿಮಾತೆ ದರ್ಶನ ನೀಡಿ ಹೀಗೊಂದು ಕರೆ ನೀಡಿದ್ದು ಈ ಕತೆಗಳ ಪೈಕಿ ಮೊದಲನೆಯದ್ದು.

ರೋಸರಿಯ ಉಗಮದ ಬಗ್ಗೆ ‘ಇದು ಹೀಗೆಯೇ’ ಎಂದು ಹೇಳುವ ಮಾಹಿತಿ ದೊರಕುವುದಿಲ್ಲ. ಆರಂಭದ ಶತಮಾನಗಳ ದಾಖಲೆಗಳನ್ನು ಗಮನಿಸಿದರೆ ಆಗ ಪ್ರಾರ್ಥನೆಗಾಗಿ ಗಂಟು ಹಾಕಿದ ಹಗ್ಗ (ಪ್ರೇಯರ್ ರೋಪ್) ವನ್ನು ಬಳಸುತ್ತಿದ್ದರಂತೆ. ಸುಮಾರು ಮೂರನೆಯ ಶತಮಾನದಲ್ಲಿ ಈಜಿಪ್ತಿನ ಮರುಭೂಮಿಯಲ್ಲಿ ವಾಸಿಸುತ್ತಿದ್ದ ಕ್ರೈಸ್ತ ಸಂತರು ಈ ಹಗ್ಗಗಳನ್ನು ಬಳಸುತ್ತಿದ್ದರು. ಕ್ರೈಸ್ತ ಧರ್ಮದ ಬೆಳವಣಿಗೆಗೆ ಅವರ ಕೊಡುಗೆ ಬಹಳ ದೊಡ್ಡದು. ಸಂತ ಅಂಥೋಣಿಯ ನೇತೃತ್ವದಲ್ಲಿ ಅಲ್ಲೊಂದು ಸಂನ್ಯಾಸಿ ಮಠವಿತ್ತು. ಈ ಸಂನ್ಯಾಸಿ ಮಠ ಮುಂದೆ ಕ್ರೈಸ್ತ ಧರ್ಮದಲ್ಲಿ ಇಂಥ ಅನೇಕ ಮಠಗಳು ಹುಟ್ಟಿ ಕೊಳ್ಳಲು ನಾಂದಿ ಹಾಡಿತು.

ಮುಖ್ಯವಾಗಿ ಮಧ್ಯಕಾಲೀನ ಯುಗದಲ್ಲಿ ಸಂತರು ಮತ್ತು ಸಂನ್ಯಾಸಿನಿಯರು ವಾಸಿಸುವ ಮಠಗಳು ಪ್ರವರ್ಧಮಾನಕ್ಕೆ ಬರಲೂ. ಮರಿಯಾ ಮಾತೆಯ ಭಕ್ತರ ಸಂಖ್ಯೆ ಹೆಚ್ಚಾಗಲೂ, ಮರಿಯಾ ಪಾರ್ಥನೆ ಮಹತ್ತ್ವದ್ದೆಂದು ಗಣಿಸಲೂ ಇದೇ ಮೂಲ ಕಾರಣವಂತೆ. ಕ್ರೈಸ್ತ ಧರ್ಮ ಜಗತ್ತಿನ ಹಲವು ಕಡೆಗಳಲ್ಲಿ ಹಲವು ವೈವಿಧ್ಯಮಯ ವಿಧಿಯಾಚರಣೆಗಳನ್ನು ಹೊಂದಿದೆ. ಆದರೆ ಅವರೆಲ್ಲರೂ ಈ ಮೊದಲ ಸಂತರನ್ನು ಮೂಲಪುರುಷರೆಂದೂ, ಯೇಸುವಿನ ನಿಜಭಕ್ತರೆಂದೂ ಗೌರವಿಸುತ್ತಾರೆ.

ಈ ರೀತಿಯ ಪ್ರೇಯರ್ ರೋಪ್ ಗಳನ್ನು ಪೌರಾತ್ಯ ಕೆಥೊಲಿಕ್ ಸಂಪ್ರದಾಯ ಪಾಲಿಸುವ ಸಂತರು, ಸಂನ್ಯಾಸಿನಿಯರು ಹಾಗೂ ಅವರ ಅನುಯಾಯಿಗಳು ಈಗಲೂ ಬಳಸುತ್ತಾರೆ. ಇವುಗಳಲ್ಲಿ 10 ಗಂಟುಗಳಿರುವ, ಕೈಗೆ ಉಂಗುರದಂತೆ ಧರಿಸುವ ಹಗ್ಗಗಳಿಂದ ಆರಂಭಿಸಿ, 33, 50, 100, 500 ಗಂಟುಗಳಿರುವ ಹಗ್ಗಗಳ ವರೆಗೆ ಹಲವಾರು ವೈವಿಧ್ಯಗಳಿವೆ. ಇದು ಆಯಾ ಭಕ್ತರ ವಿಶ್ವಾಸವನ್ನು ಹಾಗೂ ಅನುಷ್ಠಾನದ ಕ್ರಮವನ್ನು ಅವಲಂಬಿಸಿದೆ. ಹೀಗೆ ರೋಸರಿಯ ಮೂಲ, ಪೌರಸ್ತ್ಯ ಮತ್ತು ಪಾಶ್ಚಾತ್ಯ ಕ್ರೈಸ್ತ ಸಂನ್ಯಾಸಿ ಮಠಗಳೆಂದೇ ಗುರುತಿಸಲಾಗುತ್ತದೆ. ಅವರು ಅದನ್ನು ಪಾಪದ ವಿರುದ್ಧ ಆಧ್ಯಾತ್ಮಿಕ ಆಯುಧದಂತೆ ಝಳಪಿಸುತ್ತಿದ್ದರು. ಈ ಕಲ್ಪನೆಯನ್ನು ಕೆಲವು ಪಾಶ್ಚಾತ್ಯ ಸಂತರು ಮೂರ್ತಗೊಳಿಸಿದ್ದೂ ಇದೆ. ರೋಸರಿಯನ್ನು ಸೊಂಟಕ್ಕೆ ಸುತ್ತಿ ಎಡಬದಿಯಲ್ಲಿ ಇಳಿ ಬಿಡುತ್ತಿದ್ದರಂತೆ. ಖಡ್ಗವನ್ನು ಎಡಬದಿಯಲ್ಲಿ ಇಳಿಬಿಡುವುದನ್ನು ಅನುಸರಿಸಿಯೇ ಈ ಕ್ರಮ ಚಾಲ್ತಿಗೆ ಬಂದಿರಬಹುದು ಎನ್ನುತ್ತಾರೆ ಕ್ರೈಸ್ತ ಧರ್ಮದ ಅಧ್ಯಯನಕಾರರು. ಈಗಲೂ ಕೆಲವೆಡೆ ಆ ಕ್ರಮ ಚಾಲ್ತಿಯಲ್ಲಿದೆ.

ರೋಸರಿ ಪ್ರಾರ್ಥನೆಯ ಮೊದಲ ಹಂತವನ್ನು ಹೀಗೆ ಗುರುತಿಸಬಹುದು. ಮೊದಲ ಎರಡು ಹಾಗೂ ಮೂರನೆಯ ಶತಮಾನದಲ್ಲಿ ಪಾದ್ರಿಗಳು ಹಳೆಯ ಒಡಂಬಡಿಕೆಯ ಸ್ತುತಿಗೀತೆಗಳನ್ನು ಪಠಿಸಲು ರೋಸರಿಯನ್ನು ಬಳಸುತ್ತಿದ್ದರಂತೆ. ಸಾಮೂಹಿಕವಾಗಿ 50,100 ಅಥವಾ 150 ಬಾರಿ ಪಠಿಸುವುದು ಕ್ರಮ. ಆಗ ಅವರ ಜತೆಗಿದ್ದವರು, ಫಾದರ್ ಗಳ ಅನಂತರದ ಹಂತದ ಪೂಜಕರು, ಸ್ತುತಿಗೀತೆಗಳ ಬದಲಾಗಿ ‘ಅಚರ್ ಫಾದರ್’ (ತಂದೆಯೇ ಅಥವಾ ಪರಮಪಿತನೇ ಎಂದು ಪಠಿಸುತ್ತಿದ್ದರು. ಯಾಕೆಂದರೆ ಅಥವಾ ಪರಮಪಿತನೇ) ಎಂದು ಪಠಿಸುತ್ತಿದ್ದರು. ಯಾಕೆಂದರೆ ಅವರಿಗೆ ಈ ಸ್ತುತಿಗೀತೆಗಳನ್ನು ಓದಲು ಬರುತ್ತಿರಲಿಲ್ಲ. ಜತೆಗೆ ಎಲ್ಲರಿಗೂ ಪುಸ್ತಕಗಳನ್ನು ಓದಲು ಬರುತ್ತಿರಲ್ಲಲ್ಲ. ಜತೆಗೆ, ಎಲ್ಲರಿಗೂ ಪುಸ್ತಕಗಳೂ ದೊರೆಯುತ್ತಿರಲಿಲ್ಲ. ಹೀಗಾಗಿ ಇದೊಂದು ಸಂಪ್ರದಾಯವೇ ಆಗಿತ್ತು. ಇದೇ ಪೂಜಕರು ತಮ್ಮ ಗುಂಪಿನಲ್ಲಿ ಯಾರಾದರೂ ಸತ್ತರೇ ಆಗ 50 ಬಾರಿ ‘ಪರಮಪಿತನೇ’ ಪ್ರಾರ್ಥನೆ ಪಠಿಸುವುದನ್ನು ಸಂಪ್ರದಾಯವಾಗಿ ಪಾಲಿಸುತ್ತಿದ್ದರು.

12ನೆಯ ಶತಮಾನದಲ್ಲಿದ್ದ ‘ನೈಟ್ಸ್ ಟೆಂಪ್ಲರ್’ ಎಂಬ ಇನ್ನೊಂದು ಪಂಗಡ (ಕ್ರೈಸ್ತ ಯಾತ್ರಿಗಳನ್ನು ರಕ್ಷಣೆ ಮಾಡುತ್ತಿದ್ದ ಕಾವಲು ಸಿಬ್ಬಂದಿ), ತಮ್ಮ ಗುಂಪಿನವರು ಸತ್ತರೆ ದಿನಕ್ಕೆ 150 ಬಾರಿಯಂತೆ, ಒಂದು ವಾರ ‘ಪರಮಪಿತನೇ’ ಪ್ರಾರ್ಥನೆಯನ್ನು ಪಠಿಸುತ್ತಿದ್ದರಂತೆ. ಹೀಗೆ ಈ ಪಠನ ಕ್ರಮ ಮುಂದುವರಿಯುತ್ತಿತ್ತು. ಈ ಕ್ರಮವೇ ಮುಂದೆ ‘ಪರಮಪಿತನೇ’ ಅಥವಾ ‘ನಮೋ ಮರಿಯಾ’ ಎಂದು ಪಠಿಸುವ ಸಂಪ್ರದಾಯವನ್ನು ಜನಸಾಮಾನ್ಯರಲ್ಲೂ ಹುಟ್ಟುಹಾಕಿರಬಹುದು ಎನ್ನುತ್ತಾರೆ ತಜ್ಞರು.

ಮಾತೆ ಮೇರಿ ರೋಸರಿ ನೀಡಿದ್ದು ಯಾರಿಗೆ?
ಹಲವಾರು ದಂತಕತೆಗಳ ಮೂಲಕ ಬಹುತೇಕ ಜೀವಂತವಾಗಿರುವ ಸಂತ ಡೊಮಿನಿಕ್, ಸುಮಾರು 12ನೆಯ ಶತಮಾನದಲ್ಲಿ ಜೀವಿಸಿದ್ದರು. ರೋಸರಿ ಪ್ರಾರ್ಥನೆಗೆ ಇವರ ಕೊಡುಗೆ ಬಹಳ ದೊಡ್ಡದು. ಈ ಸಂತನಿಗೆ ಕನ್ಯಾಮೇರಿ ಜಪಮಾಲೆ ದಯಾಪಾಲಿಸಿದಳು ಎಂಬ ಐತಿಹ್ಯವಿದೆ. ಆ ಬಳಿಕ ಡೊಮಿನಿಕ್ ಹಾಗೂ ಅವರ ಅನುಯಾಯಿಗಳು ಆ ಜಪಮಾಲೆಯನ್ನು ಬಳಸುವ ವಿಧಾನವನ್ನು ಜನಸಾಮ್ಯಾನರಿಗೆ ತಿಳಿಸಿಕೊಟ್ಟರು. ಡೊಮಿನಿಕ್ ಪಂಥದ ಇನ್ನೊಬ್ಬ ಸಂತ 15ನೆಯ ಶತಮಾನದಲ್ಲಿ ಜೀವಿಸಿದ್ದ ಅಲಾನಸ್ ಡರುಪೆ ಎಂಬ ಸಂತರಿಗೆ ‘ರೋಸರಿ ಪ್ರಾರ್ಥನೆಯನ್ನು ರೂಪಿಸಿದವರು’ ಎಂಬ ಹೆಗ್ಗಳಿಕೆ ಇದೆ. ಆದರೆ ಕ್ರೈಸ್ತ ಧರ್ಮದ ಕುರಿತು ಆಳವಾಗಿ ಅಭ್ಯಸಿಸಿದ್ದ, ಹರ್ಬರ್ಟ್ ಥರ್ಸ್ಟನ್ ಎಂಬ ತಜ್ಞರ ಪ್ರಕಾರ, ಡೊಮಿನಿಕರ ಜನಕ್ಕೆ ಪೂರ್ವದಲ್ಲೇ 10ರಿಂದ 150 ಬಾರಿ ‘ನಮೋ ಮರಿಯಾ’ ಎಂದು ಹೇಳುವ ಕ್ರಮ ಚಾಲ್ತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಕ್ರೈಸ್ತ ಧಾರ್ಮಿಕ ಗ್ರಂಥದ 20ನೆಯ ಶತಮಾನದ ಅವತರಣಿಕೆಯಲ್ಲಿ ಸಂತ ಡೊಮಿನಿಕರ ಕಥೆಯನ್ನು ದಂತಕಥೆ ಎನ್ನಲಾಗಿದೆ. ಆದರೆ ಡೊಮಿನಿಕ್ ಅವರು ಕಾಲವಾದ ಸುಮಾರು 250 ವರ್ಷಗಳ ಬಳಿಕ ಬಂದ ಸಂತ ಅಲೆನ್ ಅಥವಾ ಅಲಾನೆಸ್ ಅವರು ರೋಸರಿ ಪ್ರಾರ್ಥನೆಗೆ ನಿರ್ದಿಷ್ಟ ರೂಪ ಕೊಟ್ಟವರೆಂದು ಬಹಳಷ್ಟು ತಜ್ಞರು ಒಪ್ಪಿಕೊಳ್ಳುತ್ತಾರೆ. ಈ ಸಂತರಿಗೆ ಮಾತೆಯೇ ರೋಸರಿ ಕೊಟ್ಟಳೂ ಎಂಬ ಐತಿಹ್ಯವೂ ಜನಜನಿತವಾಗಿದೆ.
ಆ ಬಳಿಕ ಡೊಮಿನಿಕ್ ಪಂಥದವರೇ ಆದ, ಅಂದಿನ ಕ್ರೈಸ್ತ ಜಗದ್ಗುರು ಐದನೆಯ ಪಿಯಸರು ರೋಸರಿ ಪ್ರಾರ್ಥನೆಗೆ ಸೂಕ್ತ ಕ್ರಮವನ್ನು ಹೇಳಿಕೊಟ್ಟರು. 15ನೆಯ ಶತಮಾನ(1571) ದಲ್ಲಿ ನಡೆದ ಲೆಫಾಂತೋ ಯುದ್ದದ ಸಂದರ್ಭದಲ್ಲಿ ಕ್ರೈಸ್ತರೆಲ್ಲರೂ ಜಪಮಾಲೆ ಹಿಡಿದು ಗೆಲುವಿಗಾಗಿ ಪ್ರಾರ್ಥಿಸಬೇಕೆಂದು ಕರೆಯಿತ್ತರು.ಅವರ ಈ ಕರೆಯನ್ನು ಶಿರಸಾವಹಿಸಿ ಪಾಲಿಸಿದ್ದರಿಂದಲೇ ಆ ಯುದ್ದದಲ್ಲಿ ಕ್ರೈಸ್ತ ಶಕ್ತಿಗಳು ವಿಸ್ಮಯಕರ ರೀತಿಯಲ್ಲಿ ಗೆದ್ದವನು ಎಂದು ಕೆಥೊಲಿಕರ ನಂಬಿಕೆ.

ಬಹುಶಃ ಆ ಬಳಿಕ ಜಪಮಾಲೆ ಹಿಡಿದು ಪ್ರಾರ್ಥನೆ ಮಾಡುವ ಪದ್ಧತಿ ಹೆಚ್ಚು ಪ್ರಸಿದ್ಧಿಗೆ ಬಂದಿರಬಹುದು ಎನ್ನುತ್ತಾರೆ ರೋಸರಿ ಇತಿಹಾಸಕಾರರು. ಅನಂತರ ನಡೆದ ಅನೇಕ ಯುದ್ಧಗಳಲ್ಲಿ ಕ್ರೈಸ್ತರು ರೋಸರಿಯ ಬಲದಿಂದಲೇ ಗೆದ್ದ ಸಂಗತಿಯನ್ನು ಧಾರ್ಮಿಕ ಇತಿಹಾಸ ದಾಖಲಿಸುತ್ತದೆ. ಈ ಘಟನೆ ಐದನೆಯ ಪಿಯಸರಿಗೆ, ‘ಪೋಪ್ ಆಫ್ ರೋಸರಿ’ (ರೋಸರಿ ಜಗದ್ಗುರು) ಎಂಬ ಬಿರುದು ಬರಲು ಕಾರಣವಾಯಿತು.

ಬಳಿಕ ರೋಸರಿಯ ಮಹತ್ತ್ವ ಬಹಳಷ್ಟು ಹೆಚ್ಚಾಯಿತು. ಆಗಾಗ ಮಾತೆ ಕಾಣಿಸಿಕೊಳ್ಳುವುದೂ ಹೆಚ್ಚಾಯಿತು. ಅನಂತರ ಅನೇಕ ಸಂತರು, ಪೋಪರು ಸಂತ ಡೊಮಿನಿಕರು ತೋರಿದ ಪಥದಲ್ಲಿ ನಡೆದರು. ಸಂತ ಲೂಯಿಸ ಮೊಂಟೆಫೋರ್ಟ್, ಸಂತ ಫ್ರಾನ್ಸಿಸ್ ಝೇವಿಯರ್ ಮೊದಲಾದವರು ಇವರಲ್ಲಿ ಕೆಲವರು. ಅನಂತರ ಅನೇಕ ಪವಾಡಗಳೂ ನಡೆದವು. 1675ರಲ್ಲಿ ಫ್ರಾನ್ಸ್ ನಲ್ಲಿ ಜೀಸಸ್ ಕಾಣಿಸಿಕೊಂಡು, ಪ್ರಾರ್ಥಿಸಲು ಹೇಳಿದರೆಂಬ ಪ್ರತೀತಿ ಅವುಗಳಲ್ಲೊಂದು.

ರೋಸರಿಯ ಪ್ರಾಮುಖ್ಯತೆಯನ್ನು ಸಾರುವ ಐತಿಹ್ಯಗಳ ಸಂಖ್ಯೆಯೂ ಆ ಬಳಿಕ ಹೆಚ್ಚಾಗಿದೆ. ಒಂದೊಮ್ಮೆ ಜಪಾನ್ ನಲ್ಲಿ ಕ್ರೈಸ್ತ ಧರ್ಮಿಯರಿಗೇ ಬದುಕೇ ದುಸ್ತರವಾಗಿತ್ತು. ಆ ಸಂದರ್ಭದಲ್ಲಿ ಮಿಶನರಿಗಳಿಗೆ ಅಲ್ಲಿಗೆ ಹೋಗಲು ಅವಕಾಶವಿರಲಿಲ್ಲ. ಕೊನೆಗೆ ಅನೇಕ ಮಾತುಕತೆಗಳ ತರುವಾಯ, ಹಲವು ಶರತ್ತುಗಳೊಂದಿಗೆ ಜಪಾನ್ ಗೆ ಪ್ರವೇಶಿಸಲು ಪಾದ್ರಿಗಳಿಗೆ ಅನುಮತಿ ನೀಡಲಾಯಿತು.ಆಗ ಅವರನ್ನು ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳು, ‘ನೀನು ನಿಜವಾದ ಕ್ರೈಸ್ತ ಧರ್ಮಿಯನೇ?, ನಿನ್ನ ರೋಸರಿಯನ್ನು ತೋರಿಸು’ ಎನ್ನುತ್ತಿದ್ದರಂತೆ! ಹೀಗೆ ರೋಸರಿ ಕ್ರೈಸ್ತ ಧರ್ಮದ ಬೆಳವಣಿಗೆಗೆ ಹಾಗೂ ಪುನರುತ್ಥಾನದಲ್ಲೂ ಮಹತ್ತ್ವದ ಪಾತ್ರ ವಹಿಸಿದೆ.

LEAVE A REPLY

Please enter your comment!
Please enter your name here