ಗುರುಪುರ: ಗುರುಪುರಮೂಳೂರು ಶ್ರೀ ಮುಂಡಿ ತ್ತಾಯ (ವೈದ್ಯನಾಥ) ಧೂಮಾವತಿ, ಬಂಟ ಪರಿವಾರ ದೈವಗಳ ಸಂಪೂರ್ಣ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ರವಿವಾರ ಬೆಳಗ್ಗೆ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಹೋಮ-ಹವನಗಳೊಂದಿಗೆ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ ಆರಂಭಗೊಂಡಿತು.
ಫೆ. 7ರಂದು ಬ್ರಹ್ಮಕಲಶೋತ್ಸವ ಜರಗಲಿದ್ದು, ಪ್ರತಿ ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೈವಸ್ಥಾನದ ತಂತ್ರಿಗಳಾದ ಜಿ.ಟಿ. ಅಣ್ಣು ಭಟ್, ವಾಸುದೇವ ಭಟ್ ಉಪಸ್ಥಿತಿಯಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಪ್ರಮೋದ್ ಕುಮಾರ್ ರೈ ಮುಂದಾಳತ್ವದಲ್ಲಿ ತೋರಣ ಪೂಜೆ, ಉಗ್ರಾಣ ಪೂಜೆ ನೆರವೇರಿತು.
ದೈವಸ್ಥಾನದ ಪ್ರಧಾನ ದೈವ ಪಾತ್ರಿಗಳಾದ ಚಂದ್ರಹಾಸ ಪೂಜಾರಿ, ತನಿಯಪ್ಪ ಪೂಜಾರಿ ಉಪಸ್ಥಿತಿಯಲ್ಲಿ ದೈವಗಳ ಭಂಡಾರದ ಮನೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು. ಈ ಸಂದರ್ಭ ಡಾ| ರವಿರಾಜ ಶೆಟ್ಟಿ, ಪುರುಷೋತ್ತಮ ಮಲ್ಲಿ, ಕೋಶಾಧಿಕಾರಿ ಪುರಂದರ ಮಲ್ಲಿ, ಯಶವಂತ ಕೋಟ್ಯಾನ್, ಕಿಟ್ಟಣ್ಣ ರೈ, ರಾಜು ಎನ್.ಶೆಟ್ಟಿ, ಸುಧಾಕರ ಶೆಟ್ಟಿ, ಸದಾಶಿವ ಸಾಲ್ಯಾನ್, ರವೀಂದ್ರ ಶೆಟ್ಟಿ, ಶೆಡ್ಡೆ ಮಂಜು ನಾಥ ಭಂಡಾರಿ, ಉಮೇಶ ಮುಂಡ, ದಾಮೋದರ ನಿಸರ್ಗ, ಸದಾನಂದ ಗಾಂಭೀರ್, ಪ್ರೇಮನಾಥ ಮಾರ್ಲ, ಚಂದ್ರಹಾಸ ಕಾವ, ಸತೀಶ್ ಕಾವ, ನಳಿನಿ ಶೆಟ್ಟಿ, ರವಿ ಶಟ್ಟಿ ಕತಾರ್, ಯತಿರಾಜ ಶೆಟ್ಟಿ, ಸುದರ್ಶನ ಶೆಟ್ಟಿ ಪೆರ್ಮಂಕಿ ಉಪಸ್ಥಿತರಿದ್ದರು.
ಬಳಿಕ ಸಾವಿರಾರು ಮಂದಿ ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ಜರಗಿತು. ಸಂಜೆ ಗುರುಪುರದ ಜಂಗಮ ಮಠ, ಸದಾಶಿವ ದೇವಸ್ಥಾನ, ವರದರಾಜ ವೆಂಕಟರಮಣ ದೇವಸ್ಥಾನದಿಂದ ದೈವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಹಾಗೂ ವಾಮಂಜೂರು ಶ್ರೀರಾಮ ಭಜನ ಮಂದಿರದಿಂದ ಅದ್ಧೂರಿ ಮೆರವಣಿಗೆಯಲ್ಲಿ ದೈವಗಳ ಹೊಸ ಮಂಚ ಮೆರವಣಿಗೆ ತರಲಾಯಿತು.