ಮಹಾನಗರ : ಧರ್ಮ ಮತ್ತು ಸಂಸ್ಕೃತಿ ಮಾನವನ ಮೌಲ್ಯವನ್ನು ಹೆಚ್ಚಿಸುತ್ತದೆ. ಗುರು ಹಿರಿಯರನ್ನು ಗೌರವಿಸುತ್ತಾ ಸನ್ಮಾರ್ಗದಲ್ಲಿ ನಡೆದರೆ ಅದೇ ಮೋಕ್ಷಕ್ಕೆ ದಾರಿ. ಪ್ರತಿಯೊಬ್ಬರೂ ತಮ್ಮ ಕೆಟ್ಟ ಗುಣಗಳನ್ನು ಒಂದೊಂದಾಗಿ ಬಿಡುತ್ತಾ ಬಂದಲ್ಲಿ ಸತ್ಯ ಕಂಡುಕೊಳ್ಳಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಬೋಳೂರಿನ ಶ್ರೀ ಭ್ರಮರಾಂಬಿಕಾ ದೇವಸ್ಥಾನದ ಬ್ರಹ್ಮಕಲಶದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣ ವಹಿಸಿದ್ದರು. ಧಾರ್ಮಿಕ ಉಪನ್ಯಾಸ
ಡಾ| ಎಸ್.ಪಿ. ಗುರುದಾಸ್ ಅವರು ಸಂತರು ಮತ್ತು ವಚನಕಾರರು ಸಾರಿದ ಜೀವನ ಮೌಲ್ಯಗಳ ಕುರಿತಾಗಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಮಹಿಳಾ ಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೆ.ಎ. ರೋಹಿಣಿ ಅವರನ್ನು ಅಭಿನಂದಿಸಲಾಯಿತು.
ಶ್ರೀ ಭಮರಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂಚಲಮ್ಮ, ಎಸ್.ಬಿ.ಐ. ನಿವೃತ್ತ ಮ್ಯಾನೇಜರ್ ಎನ್.ಎಸ್. ಕೀರ್ತಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ನರೇಂದ್ರನಾಥ ನಾಯಕ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ವಿದುಷಿ ಸುಮಂಗಲಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಭೆಯ ಮುನ್ನ ಗೀತಾದತ್ ನಾಯಕ್ ಮತ್ತು ಬಳಗದವರಿಂದ ಭಜನೆ, ಶ್ರದ್ಧಾ ಗುರುದಾಸ್ ಅವರಿಂದ ಹರಿಕಥಾಮೃತ ಹಾಗೂ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.