ವೇಣೂರು : ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯದ ಮೂಲಕ ಸರ್ವ ಕರ್ಮಗಳ ಕ್ಷಯ ಮಾಡಿದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಉತ್ತಮ ಕಾರ್ಯಗಳ ಮೂಲಕ ಮನುಷ್ಯ ಜನ್ಮದಲ್ಲಿ ಮಾತ್ರ ಮೋಕ್ಷ ಸಾಧನೆ ಸಾಧ್ಯ ಎಂದು 108 ಶ್ರೀ ವೀರಸಾಗರ ಮುನಿಮಹಾರಾಜರು ನುಡಿದರು.
ರವಿವಾರ ನಾರಾವಿ ಬಸದಿಯಲ್ಲಿ ಜರಗಿದ ಸಾಮೂಹಿಕ ಶ್ರೀ ಜಿನಗುಣ ಸಂಪತ್ತಿ ಆರಾಧನೆ ಕಾರ್ಯಕ್ರಮದಲ್ಲಿ ಅವರು ಆಶೀವರ್ಚನ ನೀಡಿ, ಸುಜ್ಞಾನಿಗಳಾದ ಭಕ್ತರು ದೃಢ ಸಂಕಲ್ಪದಿಂದ ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದೆ ಶ್ರದ್ಧಾ-ಭಕ್ತಿಯಿಂದ ಭಗವಂತನ ಆರಾಧನೆ ಮಾಡಬೇಕು. “ವಂದೇ ತದ್ಗುಣ ಲಬ್ದಯೇ’ ಅಂದರೆ “ನನ್ನಲ್ಲಿರುವ ಅನಂತ ಗುಣಗಳು ಲಭಿಸಲಿ’ ಎಂದು ಪ್ರಾರ್ಥಿಸಬೇಕು ಎಂದು ಸಲಹೆ ನೀಡಿದರು.
ಆತ್ಮ ಮಾತ್ರ ಶಾಶ್ವತ
ಸಂಸಾರ ಎಂಬುದು ವಸತಿ ಛತ್ರ ಇದ್ದಂತೆ. ಯಾರೂ ಶಾಶ್ವತ ಅಲ್ಲ. ಎಲ್ಲರೂ ಬಂದು ಹೋಗುತ್ತಾರೆ. ಆತ್ಮ ಮಾತ್ರ ಶಾಶ್ವತ. ಶ್ರೀ ಜಿನಗುಣ ಸಂಪತ್ತಿ ಆರಾಧನೆಯಿಂದ ಪಾಪಗಳ ಕ್ಷಯವಾಗಿ ಆತ್ಮಕಲ್ಯಾಣದೊಂದಿಗೆ ಮೋಕ್ಷ ಪ್ರಾಪ್ತಿ ಯಾಗುತ್ತದೆ. 63 ದಿನ ಆರಾಧನೆ ಮಾಡಿ ಶಾಸ್ತ್ರದಾನ ಮಾಡಬೇಕು ಎಂದು ಅವರು ತಿಳಿಸಿದರು.
ಬೆಂಗಳೂರಿನ ಜಿನೇಂದ್ರ ಬಂಗ ಮಾರ್ಗದರ್ಶನ ನೀಡಿದರು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರ ಸುಶ್ರಾವ್ಯ ಜಿನ ಭಕ್ತಿಗೀತೆ ಗಾಯನ ವಿಶೇಷ ಮೆರುಗನ್ನು ನೀಡಿತು. ನಾರಾವಿ ಜೈನ್ ಮಿಲನ್ ಆಶ್ರಯದಲ್ಲಿ ಆಯೋಜಿಸಲಾದ ಸಾಮೂಹಿಕ ಆರಾಧನೆಯಲ್ಲಿ 80 ಜನ ಶ್ರಾವಕ-ಶ್ರಾವಕಿಯರು ಭಾಗವಹಿಸಿದರು.