ಬಂಟ್ವಾಳ : ಭಜನೆಯಲ್ಲಿ ಹಾಕುವ ತಾಳದ ಶಬ್ದ ಮಾನಸಿಕ ನೆಮ್ಮದಿ ನೀಡುವುದು. ಧರ್ಮ ಉಳಿಸುವ ಕೆಲಸ ಮನಸ್ಸಿನಿಂದ ಆಗಬೇಕು. ಇಂದು ನಮ್ಮ ಧರ್ಮಕ್ಕೆ ಅಪಾಯ ಇರುವುದು ಅನ್ಯರಿಂದಲ್ಲ. ನಾವು ಜಾಗೃತರಾಗಿ ಧಾರ್ಮಿಕ ಶಿಸ್ತನ್ನು ಪಾಲಿಸಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿ ಹೇಳಿದರು.
ಅವರು ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀರಾಮ ಭಜನ ಮಂದಿರದ 47ನೇ ವರ್ಷದ ಏಕಾಹ ಭಜನ ಮಹೋತ್ಸವ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿ, ಧರ್ಮದ ಚೌಕಟ್ಟಿನಲ್ಲಿ ಬದುಕುವುದು ಧರ್ಮವೇ ಆಗಿದೆ. ಪರಸ್ಪರ ನಮ್ಮೊಳಗೆ ವೈರತ್ವ ಮಾಡಿ ಕೊಂಡರೆ ಅದುವೇ ನಮ್ಮ ಅವನತಿಗೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಆರು ಪಥಗಳಾಗಿ ಪರಿವರ್ತನೆ ಆಗುವಾಗ ಇಲ್ಲಿನ ಟೋಲ್ ಸಂಗ್ರಹ ಸ್ಥಳಾಂತರ ಆಗಲಿದೆ. ಊರಿನ ಹೆಸರು ಬ್ರಹ್ಮರಕೂಟ್ಲು ಎಂದಿಗೂ ಬದಲಾಗದ ಉಳಿಯಲಿದೆ ಎಂದು ಸಾರ್ವಜನಿಕ ಪೂರಕ ಅಪೇಕ್ಷೆಗೆ ಉತ್ತರಿಸಿ ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಟ್ರಸ್ಟಿ ರವಿಶಂಕರ್ ಮಿಜಾರ್, ನಿವೃತ್ತ ಮುಖ್ಯ ಶಿಕ್ಷಕ ಸೇಸಪ್ಪ ಮೂಲ್ಯ, ಉದ್ಯಮಿ ಸಂತೋಷ ಕುಮಾರ್ ಬ್ರಹ್ಮರಕೂಟ್ಲು, ಟಿ. ತಾರಾನಾಥ ಕೊಟ್ಟಾರಿ, ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಪೂಂಜ ಉಪಸ್ಥಿತರಿದ್ದರು.
ಏಕಾಹ ಭಜನ ಮಹೋತ್ಸವ ಅಧ್ಯಕ್ಷ ಉಮೇಶ್ ರೆಂಜೋಡಿ ಸ್ವಾಗತಿಸಿ, ಮನೋಜ್ ಕನಪಾಡಿ ವಂದಿಸಿದರು. ನವೀನ್ ಪೆರಿಯೋಡಿ ನಿರೂಪಿಸಿದರು.