Home ನಂಬಿಕೆ ಸುತ್ತಮುತ್ತ ಶ್ರೀಕೃಷ್ಣನಲ್ಲಿ ಐಕ್ಯವಾದ ಮೀರಬಾಯಿ; ದೇವಭೂಮಿ ದ್ವಾರಕೆ ಮುಳುಗಿ ಹೋಗಿದ್ದು ಹೇಗೆ?

ಶ್ರೀಕೃಷ್ಣನಲ್ಲಿ ಐಕ್ಯವಾದ ಮೀರಬಾಯಿ; ದೇವಭೂಮಿ ದ್ವಾರಕೆ ಮುಳುಗಿ ಹೋಗಿದ್ದು ಹೇಗೆ?

6427
0
SHARE

ದ್ವಾರಕೆ ದೇವಭೂಮಿ. ದ್ವಾಪರ ಯುಗದಲ್ಲಿ ಭಗವಾನ್ ಶ್ರೀಕೃಷ್ಣನ ರಾಜಧಾನಿ. ಕುಶಸ್ಥಲಿ, ಮೋಕ್ಷಪುರಿ, ದ್ವಾರಾವತಿ ಎಂಬೆಲ್ಲ ಹೆಸರುಗಳಲ್ಲಿ ಶತಶತಮಾನಗಳಿಂದ ಸುಪ್ರಸಿದ್ದವಾಗಿರುವ ನಗರಿ ಇದು. ಭಗವಂತನ ಕರ್ಮಭೂಮಿಯಾಗಿ ಹಿಂದೂಧರ್ಮದ ಸಪ್ತಪುರಿಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ತೀರ್ಥಕ್ಷೇತ್ರ.

ಜೀವಮಾನದಲ್ಲಿ ಒಮ್ಮೆಯಾದರೂ ನೋಡಬೇಕಾದ ದೇವಾಲಯ ಇಲ್ಲಿನ ದ್ವಾರಕಾಧೀಶ ಮಂದಿರ. ಶ್ರೀಕೃಷ್ಣನಿಂದ ದೂರವಾಗಿ ತಪಸ್ಸಿಗೆ ಕುಳಿತ ರುಕ್ಮಿಣಿಯ ದೇಗುಲ, ಮಾಧವನಲ್ಲಿ ಐಕ್ಯವಾದ ಮೀರಾಬಾಯಿಯ ಸನ್ನಿಧಾನ, ನಂದಗೋಪಾಲನ ಜೊತೆಗೆ ನಾಟ್ಯವಾಡಲು ಬಂದು ಮರಳಿ ಹೋಗದೆ ಗೋಪಿಯರ ಕೊಳ, ಪಾಂಡವರು ಪ್ರಾಯಶ್ಚಿಚಿತ್ತಕ್ಕೆ ಕುಳಿತಲ್ಲಿ ಉದ್ಭವವಾದ ಬಾವಿಗಳು….ದಿವ್ಯ ಸುಂದರ ಗೋಮತೀ ನದಿಯ ಸುತ್ತಮುತ್ತ ಪುರಾಣಕಾಲದ ಅಪರೂಪದ ಕ್ಷೇತ್ರಗಳಿವೆ. ಇಲ್ಲಿನ ಸಮುದ್ರ ತಳದಲ್ಲಿ ಮಾನವ ಇತಿಹಾಸದ ಪುರಾತನ ಪಟ್ಟಣದ ಅವಶೇಷಗಳಿವೆ.

ಗೋಕುಲಾಷ್ಟಮಿಯ ಪವಿತ್ರ ಪರ್ವದಂದು ಸ್ವರ್ಗದ ಬಾಗಿಲು ಎಂದೇ ಭಾರತೀಯ ಪುರಾಣಗಳು ವರ್ಣಿಸುವ ಭವ್ಯಭೂಮಿ ದ್ವಾರಕೆಯ ದಿವ್ಯದರ್ಶನ ನಮ್ಮ ಓದುಗರಿಗಾಗಿ.

ಹಲವು ಹೆಸರುಗಳ ಊರು ದ್ವಾರಕೆ. ‘ಕಾ’ ಎಂದರೆ ಬ್ರಹ್ಮಲೋಕ, ದ್ವಾರಕಾ ಎಂದರೆ ಸ್ವರ್ಗದ ದ್ವಾರ ಎಂದು ಅರ್ಥ. ಹಲವು ಬಾಗಿಲುಗಳ ಪಟ್ಟಣ ಎಂಬ ಅರ್ಥದಲ್ಲಿ ಇದು ದ್ವಾರಾವತಿ.

ಮಹಾಭಾರತದ ಪ್ರಕಾರ ಈ ಜಾಗದ ಪೂರ್ವನಾಮ ಕುಶಸ್ಥಲಿ. ಹಿಂದೂ ಸಂಪ್ರದಾಯದ ಪವಿತ್ರ ಸಪ್ತಪುರಿಗಳಲ್ಲಿ ಒಂದಾಗಿರುವ ಕಾರಣ ಇದು ಮೋಕ್ಷಪುರಿ.
ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳಲ್ಲಿ ಪಾಶ್ಚಾತ್ಯ ಶಾರದಾ ಪೀಠ ಇರುವುದು ಇಲ್ಲಿ. ಹಿಂದೂ ಧರ್ಮಿಯರಿಗೆ ಮಾತ್ರವೇ ಅಲ್ಲ, ಜೈನ ಮತ್ತು ಬೌದ್ಧ ಧರ್ಮದವರ ಪಾಲಿಗೂ ಪವಿತ್ರವಾಗಿರುವ ಕ್ಷೇತ್ರ ದ್ವಾರಕೆ.

ಎಲ್ಲಕ್ಕಿಂತ ಹೆಚ್ಚಾಗಿ ದ್ವಾರಕೆ ಶ್ರೀಕೃಷ್ಣನ ರಾಜಧಾನಿ. ಸಾಕ್ಷಾತ್ ಭಗವಂತನ ಕರ್ಮಭೂಮಿ!
ಮಥುರೆಯಿಂದ ಬಂದ ಭಗವಂತ; ಇದು ದ್ವಾಪರ ಯುಗದ ಕಥೆ
ಮಗಧ ರಾಜ ಜರಾಸಂಧ ಆಸ್ತಿ ಮತ್ತು ಪ್ರಾಪ್ತಿ ಎಂಬ ತನ್ನ ಇಬ್ಬರು ಪುತ್ರಿಯರನ್ನು ಮಥುರೆಯ ರಾಜ ಕಂಸನಿಗೆ ಮದುವೆ ಮಾಡಿ ಕೊಟ್ಟಿದ್ದ. ಕಂಸನನ್ನು ಶ್ರೀಕೃಷ್ಣ ಕೊಂದು ಹಾಕಿದಾಗ ಅವನ ಮಕ್ಕಳು ವಿಧವೆಯಾದರು.

ಜರಾಸಂಧನ ಪರಮ ಮಿತ್ರ ಶಿಶುಪಾಲನಿಗೆ ರುಕ್ಮಿಣಿಯನ್ನು ಮದುವೆ ಮಾಡಿಕೊಡುತ್ತೇನೆಂದು ಅವಳ ಸೋದರ ರುಕ್ಮಿ ವಾಗ್ದಾನ ಮಾಡಿದ್ದ. ಆದರೆ ದೇವಾಲಯಕ್ಕೆ ಹೋದ ರುಕ್ಮಿಣಿಯನ್ನು ಶ್ರೀಕೃಷ್ಣ ಅಪಹರಿಸಿಕೊಂಡು ಹೋಗಿದ್ದ. ಬಲರಾಮ ಶಿಶುಪಾಲನನ್ನು ಯುದ್ಧದಲ್ಲಿ ಹೊಡೆದೋಡಿಸಿದ್ದ. ಹೀಗಾಗಿ ಜರಾಸಂಧ ಶ್ರೀಕೃಷ್ಣ, ಬಲರಾಮರ ಮೇಲೆ ಸೇಡು ತೀರಿಸಿಕೊಳ್ಳುವ ಛಲ ತೊಟ್ಟಿದ್ದ.

ಈ ಛಲದಿಂದಲೇ ಜರಾಸಂಧ ಹದಿನಾರು ಬಾರಿ ಮಥುರೆಯ ಮೇಲೆ ದಂಡೆತ್ತಿ ಹೋಗಿದ್ದ. ಹದಿನೇಳನೆಯ ಬಾರಿ ಮಥುರೆಯ ಮೇಲೆ ದಾಳಿ ಮಾಡಲು ಒಂದು ಬಲಾಢ್ಯ ಸೈನ್ಯ ಕಟ್ಟುತ್ತಿದ್ದ. ಅದೇ ವೇಳೆಗೆ ವಾಯುವ್ಯದ ಪರ್ವತಗಳ ಆಚೆಗಿಂದ ಕಾಲಯವನ ಎಂಬ ಮಹಾಬಲಿ ದೊಡ್ಡ ಸೈನ್ಯದೊಡನೆ ಮಥುರೆಗೆ ದಂಡೆತ್ತಿ ಬರುತ್ತಿದ್ದಾನೆ ಎಂಬ ಸುದ್ದಿ ತಲುಪಿತ್ತು.

ಸತತ ಯುದ್ಧಗಳಿಂದ ಮಥುರೆಯ ಸ್ಥಿತಿ ಕೆಟ್ಟಿತ್ತು. ಎರಡು ಬಲಾಢ್ಯ ಸೈನ್ಯಗಳನ್ನು ಎದುರಿಸುವ ಬದಲು ಯಾದವರ ರಾಜಧಾನಿಯನ್ನೆ ಬೇರೊಂದು ಜಾಗಕ್ಕೆ ಸ್ಥಳಾಂತರಿಸಲು ಶ್ರೀ ಕೃಷ್ಣ ನಿರ್ಧರಿಸಿದ.

ದಕ್ಷಿಣದಲ್ಲಿ ಸಮುದ್ರ ತೀರದ ಕುಶಸ್ಥಲಿ ಎಂಬಲ್ಲಿದ್ದ ದ್ವೀಪ ಇದಕ್ಕೆ ಪ್ರಶಸ್ತವಾಗಿತ್ತು. ಆ ಕಾಲದಲ್ಲಿ ಇದು ಅನರ್ತ ರಾಜ್ಯದ ಒಂದು ಭಾಗವಾಗಿತ್ತು. ಬಲರಾಮನ ಪತ್ನಿ ರೇವತಿ ಇದೇ ಊರಿನವಳಾಗಿದ್ದ ಕಾರಣ ಯಾದವರಿಗೆ ಅಲ್ಲಿ ಸ್ವಾಗತ ಸಿಕ್ಕಿತು.

ದ್ವಾರಕೆಯ ರಚನೆಗೆ ಶ್ರೀಕೃಷ್ಣ 12 ಯೋಜನ (96 ಚದರ ಕಿಲೋಮೀಟರ್) ಭೂಮಿಯನ್ನು ಸಮುದ್ರದಿಂದ ಎರವಲು ಪಡೆದಿದ್ದ. ವಿಶ್ವಕರ್ಮ ಶ್ರೀಕೃಷ್ಣನಿಗಾಗಿ ಇಲ್ಲೊಂದು ಸುಂದರ ಪಟ್ಟಣವನ್ನು ನಿರ್ಮಿಸಿಕೊಟ್ಟ.

ದ್ವಾರಕಾಪುರಿ ಅಥವಾ ದ್ವಾರಾವತಿಯನ್ನು ವಿಶ್ವಕರ್ಮ ಹಿಂದೆಯೇ ಸಾಗರ ತಳದಲ್ಲಿ ನಿರ್ಮಾಣ ಮಾಡಿದ್ದ, ಶ್ರೀಕೃಷ್ಣನ ಆದೇಶದಂತೆ ಅದನ್ನು ಮೇಲೆತ್ತಿದ್ದ ಎಂದೂ ಹೇಳುತ್ತಾರೆ.

ದ್ವಾರಕೆಯ ರಾಜಧಾನಿ ತಯಾರಾದ ಬಳಿಕ ಶ್ರೀ ಕೃಷ್ಣ ತನ್ನ ಪ್ರಜೆಗಳನ್ನು ಅಲ್ಲಿಗೆ ಕಳುಹಿಸಿದ. ಅವರು ಹೋಗುತ್ತಿರುವಾಗಲೇ ಕಾಲಯವನನ ಸೈನ್ಯ ಮಥುರೆಯ ಹೊರಗೆ ಬಂದು ಯುದ್ಧದ ಆಹ್ವಾನ ಕಳಿಸಿತು.

ಶ್ರೀಕೃಷ್ಣ ಕಾಲಯವನನ್ನು ಉಪಾಯವಾಗಿ ಮಥುರೆಯಿಂದ ತುಸು ದೂರದ ಒಂದು ಗುಡ್ಡದ ಮೇಲೆ ಒಯ್ದು. ಅಲ್ಲಿ ಯುಗಾಂತರದಿಂದ ಮಿಶ್ರಮಿಸುತ್ತಿದ್ದ ಮುಚುಕುಂದ ಎಂಬ ಮಹಾಬಲಿಯ ಕೈಯಲ್ಲಿ ಕಾಲಯನನನ್ನು ಕೊಲ್ಲಿಸಿದ್ದ. ನಾಯಕನಿಲ್ಲದ ಕಾಲಯನನ ಸೈನ್ಯ ಕೃಷ್ಣ ಬಲರಾಮರ ಕೈಯಲ್ಲಿ ಸೋತು ಪರಾರಿಯಾಯಿತು.
ಅದೇ ವೇಳೆಗೆ ಜರಾಸಂಧ ಸೈನ್ಯದೊಡನೆ ಮಥುರೆಯ ದ್ವಾರಕ್ಕೆ ಆಗಮಿಸಿದ.

ಜರಾಸಂಧನ ಸೈನ್ಯ ದ್ವಾರಕೆಯತ್ತ ಸಾಗುತ್ತಿದ್ದ ಯಾದವರನ್ನು ತಲುಪಿದರೆ ಅನಾಹುತ ಆಗಬಹುದಿತ್ತು. ಶ್ರೀಕೃಷ್ಣ ಬಲರಾಮರು ಜರಾಸಂಧನನ್ನು ದಿಕ್ಕು ತಪ್ಪಿಸಲು ಬೇರೊಂದು ದಿಕ್ಕಿನತ್ತ ಪಲಾಯನ ಮಾಡಿದರು.

ಕೃಷ್ಣ ತನಗೆ ಹೆದರಿ ಯುದ್ಧ ಬಿಟ್ಟು ಓಡಿದ ಎಂದು ಜರಾಸಂಧ ಹೀಯಾಳಿಸಿ ರಣಛೋಡ್ (ಯುದ್ಧ ಬಿಟ್ಟು ಓಡಿದವನು) ಎಂದು ಹೆಸರಿಟ್ಟ. ಈ ಹೆಸರು ಶ್ರೀಕೃಷ್ಣನಿಗೆ ಅಂಟಿಕೊಂಡಿತು. ತನ್ನ ಬಂಧುಗಳ ರಕ್ಷಣೆಗಾಗಿ ಯುದ್ಧದಿಂದ ಪಲಾಯನ ಮಾಡಿದವನೆಂಬ ಅಪಕೀರ್ತಿಯನ್ನು ತನ್ನದಾಗಿಸಿಕೊಂಡ ಶ್ರೀಕೃಷ್ಣನನ್ನು ಇಂದಿಗೂ ಭಕ್ತರು ರಣಛೋಡ್ ದಾಸ್ (ಯುದ್ಧ ಬಿಟ್ಟು ಓಡಿದವನು) ಎಂಬ ಹೆಸರಿನಲ್ಲಿ ಅಭಿಮಾನದಿಂದ ಕರೆಯುತ್ತಾರೆ.

ಜರಾಸಂಧ ಶ್ರೀಕೃಷ್ಣ ಬಲರಾಮರ ಬೆನ್ನು ಬಿಡದೆ ಅಟ್ಟಿಸಿಕೊಂಡು ಹೋದ. ಕೊನೆಗೊಂದು ಬೆಟ್ಟದ ಮೇಲೆ ಶ್ರೀಕೃಷ್ಣ, ಬಲರಾಮರು ಸಿಕ್ಕಿಬಿದ್ದರು. ಅವರನ್ನು ಕೊಲ್ಲಲು ಜರಾಸಂಧ ಬೆಟ್ಟಕ್ಕೆ ಬೆಂಕಿ ಹಚ್ಚಿಸಿದ್ದ.

ಬೆಟ್ಟ ಉರಿದು ಸುಟ್ಟು ಬಿತ್ತು. ತನ್ನ ಶತ್ರುಗಳು ತೀರಿ ಹೋದರು ಎಂದು ಸಂತೋಷದಿಂದ ಜರಾಸಂಧ ಮಗಧಕ್ಕೆ ಮರಳಿದ. ಉರಿಯುತ್ತಿರುವ ಬೆಂಕಿಯ ನಡುವೆ ಶ್ರೀಕೃಷ್ಣ ಮತ್ತು ಬಲರಾಮನು ಯೋಗಮಾಯೆಯಿಂದ ಬೆಟ್ಟ ಹಾರಿ ಸುರಕ್ಷಿತವಾಗಿ ದ್ವಾರಕೆ ತಲುಪಿದ್ದು ಅವನಿಗೆ ತಿಳಿದಾಗ ತಡವಾಗಿತ್ತು.
ಸಮುದ್ರದ ನಡುವೆ ಇರುವ ದ್ವಾರಕೆಯ ರಕ್ಷಣೆಯನ್ನು ಭೇದಿಸಲು ಅಸಾಧ್ಯ ಎಂದು ಗೂಢಚಾರರಿಂದ ತಿಳಿದ ಜರಾಸಂಧ ದ್ವಾರಕೆಯ ಮೇಲೆ ಎಂದೂ ದಾಳಿ ಮಾಡಲಿಲ್ಲ.

ಪುರಾಣಗಳ ದ್ವಾರಕೆ!
ಪುರಾಣ ಕಾಲದ ದ್ವಾರಕೆ ಹೇಗಿತ್ತು? ಇದರ ವರ್ಣನೆ ಹರಿವಂಶದಲ್ಲಿ ಸಿಗುತ್ತದೆ.
ಹರಿವಂಶದ ಪ್ರಕಾರ ಸಮುದ್ರದೊಳಗೆ ಮುಳುಗಿದ್ದ ಭೂಭಾಗವನ್ನು ಎತ್ತಿ ದ್ವಾರಕೆಯನ್ನು ನಿರ್ಮಿಸಲಾಗಿತ್ತು. ಹಿಂದೆ ಈ ಪ್ರದೇಶ ರೈವತಕ ಎಂಬ ರಾಜನ ಆಟದ ಮೈದಾನವಾಗಿತ್ತು. ಇದು ಚದುರಂಗದ ಮಣೆಯಂತೆ ಚೌಕಾಕಾರದಲ್ಲಿತ್ತು. ದೇವತೆಗಳ ವಾಸಸ್ಥಾನವಾಗಿದ್ದ ಇದಕ್ಕೆ ದ್ವಾರಾವತಿ ಎಂದು ಹೆಸರಿತ್ತು. ಇದನ್ನು ಬ್ರಾಹ್ಮಣರು ಅಳೆದಿದ್ದರು. ಇದರ ಅಡಿಪಾಯಗಳನ್ನು ಯಾದವರು ಕಟ್ಟಿದ್ದರು, ವಿಶ್ವಕರ್ಮ ಇದನ್ನು ಒಂದೇ ದಿನದಲ್ಲಿ ಮಾನಸಿಕವಾಗಿ ನಿರ್ಮಿಸಿದ್ದ.

ದ್ವಾರಕಾಪುರಿಯ ಸುತ್ತಲೂ ಗೋಡೆಗಳಿದ್ದು, ನಾಲ್ಕೂ ಮಹಾದ್ವಾರಗಳಿದ್ದವು. ನೇರ ಬೀದಿಗಳ ಇಕ್ಕೆಲಗಳಲ್ಲಿ ಬಂಗಾರದಲ್ಲಿ ನಿರ್ಮಾಣವಾದ ಶ್ರೀ ಮದ್ಭಾಗವತದಲ್ಲಿ ಶ್ರೀಕೃಷ್ಣನ ರಾಜಧಾನಿ ದ್ವಾರಕೆಯನ್ನು ನಾರದ ಹೀಗೆ ವರ್ಣಿಸುತ್ತಾನೆ: ದ್ವಾರಕೆಯಲ್ಲಿ ಒಂಭತ್ತು ಲಕ್ಷ ಅರಮನೆಗಳಿವೆ.ಎಲ್ಲವನ್ನೂ ಸ್ಫಟಿಕ ಮತ್ತು ಬಂಗಾರದಿಂದ ಕಟ್ಟಲಾಗಿದ್ದು, ವಜ್ರ ವೈಢೂರ್ಯಗಳಿಂದ ಅಲಂಕರಿಸಲಾಗಿದೆ. ಅರಮನೆಗಳ ಒಳಗೆ ಪೀಠೋಪಕರಣಗಳನ್ನು ಬಂಗಾರ ಮತ್ತು ಮುತ್ತು ರತ್ನಗಳಿಂದ ಅಲಂಕರಿಸಲಾಗಿದೆ.

ಪಟ್ಟಣದ ನಡುವೆ ಅಗಲದ ವ್ಯವಸ್ಥಿತ ರಸ್ತೆಗಳಲ್ಲಿ ರಥಗಳು ಸಲೀಸಾಗಿ ಸಾಗುತ್ತವೆ. ಅಲ್ಲಲ್ಲಿ ಕೂಡುದಾರಿಗಳಲ್ಲಿ ಮಾರುಕಟ್ಟೆಗಳು ಮತ್ತು ದೇವಾಲಯಗಳಿವೆ.
ಪಟ್ಟಣದ ಒಳಗೆ ಸುಂದರ ಉದ್ಯಾನಗಳಿವೆ. ಹಕ್ಕಿಗಳು ಮತ್ತು ದುಂಬಿಗಳ ಕಲರವ ಪಟ್ಟಣವನ್ನು ತುಂಬಿವೆ. ಇಂದೀವರ, ಅಂಭೋಜ, ಕಹ್ಲಾರ, ಕುಮುದ ಮತ್ತು ಉತ್ಪಲ ತಾವರೆಗಳು ಅರಳುವ ಇಲ್ಲಿನ ಕೆರೆಗಳಲ್ಲಿ ಹಂಸಗಳು ಮತ್ತು ಕೊಕ್ಕರೆಗಳು ತಿರುಗುತ್ತಿವೆ.

ದ್ವಾರಕೆಯ ನಡುವೆ ದೇವತೆಗಳು ಆರಾಧಿಸುವ ಭಗವಂತನ ನಿವಾಸ ಇದೆ. ಇದರ ರಚನೆಯಲ್ಲಿ ವಿಶ್ವಕರ್ಮ ತನ್ನ ಎಲ್ಲಾ ಕೌಶಲ್ಯವನ್ನು ತೋರಿಸಿದ್ದಾನೆ. ಶ್ರೀಕೃಷ್ಣನ ಹದಿನಾರು ಸಾವಿರ ಪತ್ನಿಯರು ಈ ಭವನವನ್ನು ಸುಂದರವಾಗಿ ಅಲಂಕರಿಸುತ್ತಾರೆ.

ಅರಮನೆಯ ಒಳಗೆ ಹವಳದ ಸ್ತಂಭಗಳು ವಜ್ರವೈಢೂರ್ಯಗಳ ಅಲಂಕಾರದಲ್ಲಿ ಕಂಗೊಳಿಸುತ್ತಿವೆ. ತ್ವಸ್ಥ ನಿರ್ಮಿಸಿದ ಮುತ್ತಿನ ಹಾರಗಳ ಛತ್ರದ ಕೆಳಗೆ ಅಂಗರಕ್ಷಕರು ಮತ್ತು ಅಲಂಕೃತ ದಾಸಿಯರು ನಿಂತಿರುತ್ತಾರೆ.

ವಜ್ರಾಲಂಕೃತ ದೀಪಗಳು ಭವನದೊಳಗೆ ಕತ್ತಲು ಕಾಲಿರಿಸದಂತೆ ನೋಡಿಕೊಳ್ಳುತ್ತಿವೆ. ಸೂರಿನ ಮೇಲೆ ನಾಟ್ಯವಾಡುತ್ತಿರುವ ನವಿಲುಗಳು ಗವಾಕ್ಷಿಗಳ ಜಾಲರಿಯಿಂದ ಮೇಲೆದ್ದು ಬರುವ ಪರಿಮಳ ದೃವ್ಯಗಳ ಹೊಗೆಯನ್ನು ಮೋಡಗಳೆಂದೇ ಭ್ರಮಿಸುತ್ತವೆ.

ಮಹಾಭಾರತದ ಪ್ರಕಾರ ದ್ವಾರಕೆಯಲ್ಲಿ ನಡೆದ ಮುಖ್ಯ ಘಟನೆಗಳು ಹೀಗಿವೆ:
• ಪಾಂಡುವಿನ ಮಕ್ಕಳು ತಮ್ಮ ವನವಾಸದ ವೇಳೆ ಇಲ್ಲಿ ಒಂದು ವರ್ಷ ಕಾಲ ವಾಸವಾಗಿದ್ದರು.
• ಬಲರಾಮ ಸರಸ್ವತೀ ನದಿಯ ತೀರ್ಥಯಾತ್ರೆಗೆ ಹೋಗುವ ಮುನ್ನ ದ್ವಾರಕೆಯಲ್ಲಿ ಒಂದು ಯಜ್ಞ ನೆರವೇರಿಸಿದ್ದ.
• ದ್ವಾರಕೆಗೆ ತೀರ್ಥಯಾತ್ರೆ ಹೋಗುವವರು ಕಟ್ಟುನಿಟ್ಟಾದ ವ್ರತ ಹಿಡಿಯಬೇಕು. ಇಲ್ಲಿನ ಪಿಂಡಾರಕ ತೀರ್ಥದಲ್ಲಿ ಮಿಂದವರಿಗೆ ಧನಕನಕ ಸಂಪತ್ತು ಪ್ರಾಪ್ತವಾಗುತ್ತದೆ.
• ನೃಗ ರಾಜ ತನ್ನ ಯಾವುದೋ ತಪ್ಪಿನ ಪ್ರಾಯಶ್ಚಿತವಾಗಿ ದ್ವಾರಾವತಿಗೆ ಬಂದು ನೆಲೆಸಿದ್ದ. ಶ್ರೀಕೃಷ್ಣ ಅವನ ಪಾಪಮುಕ್ತಿ ಮಾಡಿದ್ದ.
• ದೂರ್ವಾಸ ಮುನಿ ದ್ವಾರಾವತಿಯಲ್ಲಿ ಬಹುಕಾಲ ನೆಲೆಸಿದ್ದ.
• ಕುರುಕ್ಷೇತ್ರದ ಯುದ್ಧದ ಬಳಿಕ ಅರ್ಜುನ ದ್ವಾರಾವತಿಗೆ ಭೇಟಿ ನೀಡಿದ್ದ. ಅದೇ ದ್ವಾರಕೆಯ ಕೊನೆಗಾಲವಾಗಿತ್ತು.
ಮಹಾಭಾರತದ ಮೌಸಲ ಪರ್ವದಲ್ಲಿ ಗಾಂಧಾರಿಯ ಶಾಪದ ಫಲವಾಗಿ ಯುದುಕುಲ ವಿನಾಶವಾದ ವೃತ್ತಾಂತ ಇದೆ. ದ್ವಾರಕೆಯ ನಾಶಕ್ಕೆ ಸ್ವಯಂ ಅರ್ಜುನನೇ ಸಾಕ್ಷಿಯಾಗಿದ್ದ.
“ಸಮುದ್ರ ತೀರಕ್ಕೆ ಅಪ್ಪಳಿಸುತ್ತಿದ್ದ ಸಮುದ್ರ ಒಮ್ಮೆಗೇ ಎಲ್ಲ ಪ್ರಕೃತಿ ನಿಯಮಿತ ಸೀಮೆಗಳನ್ನು ಮೀರಿ ಮೇಲೆದ್ದು ಬಂತು. ಪಟ್ಟಣದೊಳಗೆ ಸಮುದ್ರ ತುಂಬಿತು. ಸುಂದರ ಪಟ್ಟಣದ ಬೀದಿಗಳ ನಡುವೆ ಧಾವಿಸಿತು. ಸಮುದ್ರ ಎಲ್ಲವನ್ನೂ ಮುಳುಗಿಸಿ ಹಾಕಿತು. ಸುಂದರ ಭವನಗಳನ್ನು ಸಮುದ್ರ ಒಂದೊದಾಗಿ ಮುಳುಗಿಸಿ ಹಾಕುವುದನ್ನು ನೋಡಿದೆ. ಕೆಲವೇ ನಿಮಿಷಗಳಲ್ಲಿ ಎಲ್ಲ ಮುಗಿದು ಹೋಗಿತ್ತು. ಸಮುದ್ರ ಕೆರೆಯಂತೆ ಶಾಂತವಾಗಿತ್ತು. ದ್ವಾರಕಾಪುರಿಯ ಯಾವುದೇ ಕುರುಹು ಉಳಿದಿರಲಿಲ್ಲ. ದ್ವಾರಕೆ ಕೇವಲ ಒಂದು ಹೆಸರು, ಒಂದು ನೆನಪಾಗಿ ಉಳಿದಿತ್ತು”  ಎಂದು ಈ ಮಹಾ ಉತ್ಪಾತವನ್ನು ವರ್ಣಿಸುತ್ತಾನೆ ಅರ್ಜುನ.
• ಪಾಂಡವರು ಸಂನ್ಯಾಸಿ ದೀಕ್ಷೆ ತೊಟ್ಟು ಹಿಮಾಲಯಕ್ಕೆ ಹೋಗುವಾಗ ದಾರಿಯಲ್ಲಿ ದ್ವಾರಕೆ ಇದ್ದ ಜಾಗಕ್ಕೆ ಬಂದಿದ್ದರು. ಆಗ ದ್ವಾರಕೆ ಸಮುದ್ರದ ಕೆಳಗೆ ಮುಳುಗಿ ಹೋಗಿತ್ತು.

LEAVE A REPLY

Please enter your comment!
Please enter your name here