Home ಧಾರ್ಮಿಕ ಸುದ್ದಿ ಮೇ 11-19: ಬೆಳಾಲು ಅನಂತ ಪದ್ಮನಾಭ ಕ್ಷೇತ್ರದ ಬ್ರಹ್ಮಕಲಶ

ಮೇ 11-19: ಬೆಳಾಲು ಅನಂತ ಪದ್ಮನಾಭ ಕ್ಷೇತ್ರದ ಬ್ರಹ್ಮಕಲಶ

937
0
SHARE

ಬೆಳ್ತಂಗಡಿ: ಸುಮಾರು 6 ಶತಮಾನಗಳ ಇತಿಹಾಸವುಳ್ಳ ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮೇ 11ರಿಂದ 19ರ ವರಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಹೇಳಿದರು.

ಅವರು ಸೋಮವಾರ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವೇ|ಮೂ| ನೀಲೇಶ್ವರ ಅಲಂಬಾಡಿ ವಾಸುದೇವ ತಂತ್ರಿಗಳ ಹಿರಿತನದಲ್ಲಿ, ವೇ|ಮೂ| ನೀಲೇಶ್ವರ ಅಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಅನಂತಪದ್ಮನಾಭ ದೇವರ ನೂತನ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ಮೇ 11ರಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಕಾರ್ಯಾಲಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಭುಜಬಲಿ ಬಿ. ಅವರು ಉಗ್ರಾಣ, ಉದ್ಯಮಿ ರಮಾನಂದ್‌ ಸಾಲ್ಯಾನ್‌ ಅನ್ನಛತ್ರ ಉದ್ಘಾಟಿಸಲಿದ್ದಾರೆ. ಹಸಿರುವಾಣಿ ಸಮರ್ಪಣೆ, ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮೇ 12ರಂದು ಬೆಳಗ್ಗೆ 10.30ರಿಂದ ಹಸುರುವಾಣಿ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ವಿಶೇಷ ಸೇವೆಯಾಗಿ ಮನ್ಯುಸೂಕ್ತ ಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಮೇ 13ರಂದು ಬೆಳಗ್ಗೆ ವೈದಿಕ ವಿಧಿವಿಧಾನ, ಹಸಿರುವಾಣಿ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.

ಮೇ 14ರಂದು ಬೆಳಗ್ಗೆ ವೈದಿಕ ವಿಧಿವಿಧಾನ, ಹಸುರುವಾಣಿ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಸಂಜೆ ವಿಶೇಷ ಸೇವೆಯಾಗಿ ಆಶ್ಲೇಷ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ, ಮೇ 15ರಂದು ಬೆಳಗ್ಗೆ ವೈದಿಕ ವಿಧಿವಿಧಾನ, ಹಸುರುವಾಣಿ ಸಮರ್ಪಣೆ, ಮಧ್ಯಾಹ್ನ ಭಕ್ತಿಗಾಯನ, ಮಹಾಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಮೇ 16ರಂದು ಬೆಳಗ್ಗೆ ವೈದಿಕ ವಿಧಿವಿಧಾನ, 11.09ಕ್ಕೆ ಪೀಠ ಪ್ರತಿಷ್ಠೆ, ಶ್ರೀ ಅನಂತಪದ್ಮನಾಭ ದೇವರ ನೂತನ ಬಿಂಬ ಪ್ರತಿಷ್ಠೆ, ಮಧ್ಯಾಹ್ನ ಭಜನೆ, ಸಂಜೆ ವಿಶೇಷ ಸೇವೆಯಾಗಿ ಪೂರ್ಣನವಗ್ರಹ ಶಾಂತಿ ಹೋಮ ನಡೆಯಲಿದೆ ಎಂದರು.

ಸಂಜೆ 6.30ರಿಂದ ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಉಜಿರೆ ದೇವಸ್ಥಾನದ ವಿಜಯರಾಘವ ಪಡ್ವೆಟ್ನಾಯ, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್‌ ಮೊದಲಾದವರು ಭಾಗವಹಿಸಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ಮೇ 17ರಂದು ಬೆಳಗ್ಗೆ ವೈದಿಕ ವಿಧಿ ವಿಧಾನ, ಸಂಜೆ ವಿಶೇಷ ಸೇವೆಯಾಗಿ ಶ್ರೀ ದುರ್ಗಾ ಚಂಡಿಕ ಹೋಮ, ಸಂಜೆ ಯಕ್ಷಗಾನ ಪ್ರದರ್ಶನ, ಮೇ 18ರಂದು ಬೆಳಗ್ಗೆ ವೈದಿಕ ವಿಧಿವಿಧಾನ, ಮಧ್ಯಾಹ್ನ ನಮಸ್ಕಾರ ಮಂಟಪದಲ್ಲಿ ಮಹಾಪೂಜೆ, ಸಂಜೆ ಮಹಾವಿಷ್ಣು ಯಾಗ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಮೇ 19ರಂದು ಬೆಳಗ್ಗೆ 10.56ರ ಕರ್ಕಾಟಕ ಲಗ್ನ ಸುಮೂರ್ತದಲ್ಲಿ ಶ್ರೀ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶಿರ್ವಚನ ನೀಡಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವೇ|ಮೂ| ಶ್ರೀವತ್ಸ ಕೆದಿಲಾಯ ಧಾರ್ಮಿಕ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್‌, ಸುಪ್ರಿಯಾ ಹರ್ಷೇಂದ್ರಕುಮಾರ್‌, ಸಂಸದ ನಳಿನ್‌ಕುಮಾರ್‌ ಕಟೀಲ್, ಮಾಜಿ ಶಾಸಕ ಕೆ. ವಸಂತ ಬಂಗೇರ ಮೊದಲಾದವರು ಭಾಗವಹಿಸಲಿದ್ದು, ವೇ|ಮೂ| ನೀಲೇಶ್ವರ ಅಲಂಬಾಡಿ ಪದ್ಮನಾಭ ತಂತ್ರಿಗಳು ಅಭಿವಂದನೆ ಮಾಡಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮೇ 20ರಂದು ಬೆಳಗ್ಗೆ ವೈದಿಕ ವಿಧಿವಿಧಾನ, ರಾತ್ರಿ ಶ್ರೀ ದೇವರಿಗೆ ಪ್ರಸನ್ನ ರಂಗಪೂಜೆ, ಪರಿವಾರ ದೈವಗಳ ನೇಮ ನಡೆಯಲಿದೆ.

ಪ್ರತೀ ದಿನ ಬೆಳಗ್ಗೆ ಊರ ಋತ್ವಿಕರಿಂದ ಒಂದುಮಂಡಲ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಆಡಳಿತ ಮೊಕ್ತೇಸರ ಜೀವಂಧರ ಕುಮಾರ್‌ ಜೈನ್‌ ಬೆಳಾಲುಗುತ್ತು, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜತ್ತಣ್ಣ ಗೌಡ ಎನ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ, ಜೀಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್‌ ಕೆರ್ಮುಣ್ಣಾಯ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ದಿನೇಶ್‌ ಪೂಜಾರಿ ಉಪ್ಪಾರು, ರಾಮಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here