ಮೂಡುಬಿದಿರೆ: ಕೋಟೆ ಬಾಗಿಲು ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮಾರಿಪೂಜಾ ಮಹೋತ್ಸವ ಅನಂತಪದ್ಮನಾಭ ಅಸ್ರಣ್ಣರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಮರ ಮುಹೂರ್ತ, ಸಂಜೆ ಚೆಂಡು ನಡೆಯಿತು. ಕೋಟೆ ಬಾಗಿಲು ವೀರಮಾರುತಿ ದೇವಸ್ಥಾನ ಬಳಿಯ ಕಟ್ಟೆಯಲ್ಲಿ ಮಹ ಮ್ಮಾಯಿ ದೇವಿಯ ಬೊಂಬೆ ಪ್ರತಿಷ್ಠೆ, ಮಧ್ಯಾಹ್ನ ಮಹಮ್ಮಾಯಿ ದೇವಸ್ಥಾನದ ಬಳಿಯ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರಗಿತು.
ರಾತ್ರಿ ದೈವದ ದರ್ಶನ ಸಹಿತ ಮಹಮ್ಮಾಯಿ ದೇವಿಯ ಬಿಂಬವನ್ನು ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಬಳಿಯ ಕಟ್ಟೆಯಿಂದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ಅನಂತರ ರಾಶಿ ಹಾಕುವುದು, ಶ್ರೀದೇವಿ ಉಚ್ಚಂಗಿ ದರ್ಶನ, ಮಹಾಪೂಜೆ ನಡೆಯಿತು. ಬುಧವಾರ ಸಂಜೆ ಮೈಸಂದಾಯ ಮತ್ತು ಪಿಲಿಚಾಮುಂಡಿ ದೈವಗಳ ಕೋಲ ನಡೆದು ಬಳಿಕ ಮಹಮ್ಮಾಯಿ ಬೊಂಬೆಯನ್ನು ವಿಸರ್ಜಿಸಲಾಯಿತು.
ದೇವಸ್ಥಾನದ ಮೊಕ್ತೇಸರ ನಾರಂಪಾಡಿಗುತ್ತು ಸೇಸಪ್ಪ ಹೆಗ್ಡೆ, ಮಹಾಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಹವಾಲ್ದಾರ್ ಆನಂದ ಕುಮಾರ್ ಮೊದಲಾದವರ ಮುಂದಾಳತ್ವದಲ್ಲಿ ಮಹೋತ್ಸವ ನಡೆಯಿತು.