Home ಧಾರ್ಮಿಕ ಸುದ್ದಿ ಮರವಂತೆ: ಅಮಾವಾಸ್ಯೆ ಜಾತ್ರೆಗೆ ಮಾರಸ್ವಾಮಿ ಸಜ್ಜು

ಮರವಂತೆ: ಅಮಾವಾಸ್ಯೆ ಜಾತ್ರೆಗೆ ಮಾರಸ್ವಾಮಿ ಸಜ್ಜು

2772
0
SHARE

ಉಪ್ಪುಂದ: ಮರವಂತೆಯ ನದಿ-ಕಡಲು ಸಾಮೀಪ್ಯದ ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನ ಕೇಂದ್ರಿತವಾಗಿ ಆ. 1ರಂದು ಕರ್ಕಾಟಕ ಅಮಾವಾಸ್ಯೆಯಂದು ನಡೆಯುವ ಬೃಹತ್‌ ಜಾತ್ರೆಗೆ ಸಕಲ ಸಿದ್ಧತೆಗಳು ಸಾಗಿದೆ.

ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ವರಾಹ ದೇವರಿಗೆ, ಹತ್ತಿರದ ಗಂಗಾಧರೇಶ್ವರ ದೇವರಿಗೆ ಅಭಿಷೇಕ, ಅರ್ಪಣೆ ಸಲ್ಲಿಸುತ್ತಾರೆ. ತೀರ್ಥ, ಪ್ರಸಾದ ಸ್ವೀಕರಿಸುತ್ತಾರೆ. ದೇವಸ್ಥಾನದ ಹೊರಗೆ ಸಾಲುಗಟ್ಟುವ ತಾತ್ಕಾಲಿಕ ಸರಕಿನ ಮಳಿಗೆಗಳಲ್ಲಿ ತಿಂಡಿ, ಮಕ್ಕಳ ಆಟಿಕೆ, ಮಹಿಳೆಯರ ಕೃತಕ ಶ್ರಂಗಾರ ಸಾಧನಗಳನ್ನು ಖರೀದಿಸುತ್ತಾರೆ. ತಾತ್ಕಾಲಿಕ ಅಂಗಡಿಗಳ ನಿರ್ಮಾಣ ಈಗಾಗಲೇ ಮುಗಿದಿದೆ.

ದೇವಸ್ಥಾನದ ಒಳಗೂ ಅಮಾವಾಸ್ಯೆಯ ಜಾತ್ರೆ ಎದುರಿಸಲು, ಬಂದವರಿಗೆ ಸೌಲಭ್ಯ ಕಲ್ಪಿಸಲು ಸಿದ್ಧತೆಗಳಾಗುತ್ತಿವೆ. ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗುತ್ತಿದೆ. ಪೂಜಾ ಕೈಂಕರ್ಯಕ್ಕೆ ಅಗತ್ಯ ವಸ್ತುಗಳನ್ನು ಶೇಖರಿಸಲಾಗುತ್ತಿದೆ. ವಿತರಣೆಗೆ ಪ್ರಸಾದ ತಯಾರಿಯಾಗುತ್ತಿದೆ. ಜನ ಸರತಿಯ ಸಾಲಿನಲ್ಲಿ ಒಳಬಂದು ಹೋಗಲು ಬೇಲಿ ಕಟ್ಟಲಾಗುತ್ತಿದೆ. ಜಾತ್ರೆಯ ಸಕಲ ಸಿದ್ಧತೆಗಳು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಟಾರ್‌ ನೇತೃತ್ವದಲ್ಲಿ ಸದಸ್ಯರು, ಅರ್ಚಕ ಉಪಾಧಿವಂತರು, ಸಿಬಂದಿ, ಸ್ವಯಂ ಸೇವಕರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಸಹಾಯ ದಿಂದ ನಡೆಯುತ್ತಿದೆ.

ಮುಂಜಾಗ್ರತೆ ಕ್ರಮ ಅಗತ್ಯ
ನದಿ-ಕಡಲಿನ ನಡುವೆ, ದೇವ ಸ್ಥಾನದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ವಾಹನ ಮತ್ತು ಜನದಟ್ಟಣೆಯನ್ನು ನಿಯಂತ್ರಿಸಲು, ನದಿ, ಸಮುದ್ರದ ಬದಿಯಲ್ಲಿ ಅಪಾಯ ಸಂಭವಿಸುವುದನ್ನು ತಡೆಯಲು ದೊಡ್ಡಸಂಖ್ಯೆಯ ಪೊಲೀಸ್‌ ವ್ಯವಸ್ಥೆ ಹಾಗೂ ಸ್ವಯಂ ಸೇವಕರು ಜಾತ್ರೆಯಲ್ಲಿ ಹಾಗೂ ರಸ್ತೆ, ನದಿ, ಸಮುದ್ರ ದಡದಲ್ಲಿ ಕಾರ್ಯನಿರತವಾಗಿರುವುದು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here