Home ಧಾರ್ಮಿಕ ಸುದ್ದಿ ಮಣಿಕ್ಕಾರ ದೇವಸ್ಥಾನ ಬ್ರಹ್ಮಕಲಶ : ಧಾರ್ಮಿಕ ಸಭೆ ,ನಿಷ್ಕಲ್ಮಶ ಮನಸ್ಸಿನಿಂದ ದೇವರ ಸಾಮೀಪ್ಯ : ಒಡಿಯೂರು...

ಮಣಿಕ್ಕಾರ ದೇವಸ್ಥಾನ ಬ್ರಹ್ಮಕಲಶ : ಧಾರ್ಮಿಕ ಸಭೆ ,ನಿಷ್ಕಲ್ಮಶ ಮನಸ್ಸಿನಿಂದ ದೇವರ ಸಾಮೀಪ್ಯ : ಒಡಿಯೂರು ಶ್ರೀ

970
0
SHARE

ಸವಣೂರು : ನಿರಾಕಾರನಾಗಿರುವ ದೇವರನ್ನು ಕಾಣಲು ದೇವಸ್ಥಾನ ಬೇಕು. ಮನಸ್ಸಿನಲ್ಲಿರುವ ಕಲ್ಮಶವನ್ನು ತೊಡೆದು ಹಾಕಿದರೆ ಮಾತ್ರ ದೇವರನ್ನು ಕಾಣಲು ಸಾಧ್ಯ. ಮಣಿಕ್ಕಾರವೆಂಬ ಊರಿನವರ ಸಂಕಲ್ಪ ಶಕ್ತಿ ಕೈಗೂಡಿ ಈ ದೇವಸ್ಥಾನ ನಿರ್ಮಾಣ ಗೊಂಡಿದೆ. ಮುಂದಿನ ದಿನಗಳಲ್ಲಿ ಭಕ್ತರ ನಿರಂತರ ಸಹಕಾರದಿಂದ ದೇವಾಲಯ ಅಭಿವೃದ್ಧಿಗೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಡಿ. 26ರಂದು ರಾತ್ರಿ ಕೊಳ್ತಿಗೆ ಗ್ರಾಮದ ಮಣಿಕ್ಕಾರ ಪಾಲ್ತಾಡು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಅಂಗವಾಗಿ ನ‌ಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಮಾಜಕ್ಕೆ ಕೊಡುಗೆ

ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ, ದೇವರು ನಮಗೆ ಕೊಟ್ಟದ್ದರಲ್ಲಿ ಸ್ವಲ್ಪವನ್ನಾದರೂ ಮತ್ತೆ ದೇವರಿಗೇ ಅರ್ಪಿಸಬೇಕು. ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.

ನಿತ್ಯ ಭಕ್ತರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಸದಸ್ಯ ಮಹೇಶ್‌ ಕುಮಾರ್‌ ಕರಿಕ್ಕಳ ಅವರು ಮಾತನಾಡಿ, ವರ್ಷದ 365 ದಿವಸವೂ ಒಂದೊಂದು ಮನೆಯವರು ನಿತ್ಯ ಪೂಜೆಯನ್ನು ನೆರವೇರಿಸುತ್ತಾ ಬಂದರೆ ದೇವಸ್ಥಾನದಲ್ಲಿ ನಿತ್ಯ ಭಕ್ತರಿರುತ್ತಾರೆ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಸದಸ್ಯ ರಾಜೀವಿ ಆರ್‌. ರೈ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ್‌ ಶೆಟ್ಟಿ, ಮಣಿಕ್ಕಾರ ಪಾಲ್ತಾಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ನಾರಾಯಣ ರೈ ಪಾಲ್ತಾಡು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ವಿನೋದ್‌ ರೈ ಪಾಲ್ತಾಡು ಉಪಸ್ಥಿತರಿದ್ದರು.

ಭುವನಾ ವಿ. ರೈ, ಧನ್ಯಾ, ಸುಧಾಮ ಮಣಿಯಾಣಿ, ರಾಮಣ್ಣ ರೈ, ಗೋಪಾಲ ಮಣಿಯಾಣಿ ಅತಿಥಿಗಳನ್ನು ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಣಿಕ್ಕಾರ ಗೋಪಾಲಕೃಷ್ಣ ಶಾನುಭಾಗ್‌ ಪ್ರಸ್ತಾವಿಸಿದರು. ಚಂದನಾ ಲಕ್ಷ್ಮೀ ಪ್ರಾರ್ಥಿಸಿದರು. ಕಾರ್ಯ ದರ್ಶಿ ಗೌರೀಶ್ಚಂದ್ರ ಶಾನುಭಾಗ್‌ ಸ್ವಾಗತಿಸಿದರು. ಶಿಲ್ಪಾ ಶಾನುಭಾಗ್‌ ವಂದಿಸಿದರು. ಬೆಳಂದೂರು ಪದವಿ ಕಾಲೇಜಿನ ಪ್ರಾಚಾರ್ಯ ಪ್ರೋ| ಪದ್ಮನಾಭ ಕೆ. ಕಾರ್ಯಕ್ರಮ ನಿರೂಪಿಸಿದರು.

ತತ್ತ್ವ ಕಲಶಪೂಜೆ

ದೇವಸ್ಥಾನದಲ್ಲಿ ಡಿ. 27ರಂದು ಉಷಃ ಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಸಂಹಾರತತ್ತ್ವ ಹೋಮ, ತತ್ತ್ವ ಕಲಶಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿಪೂಜೆ, ನಿದ್ರಾಕಲಶ ಪೂಜೆ, ವಿದ್ಯೇಶ್ವರ ಕಲಶ ಪೂಜೆ, ಶಯ್ನಾಪೂಜೆ, ಅಗ್ನಿಜನನ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ, ವಿದ್ವತ್‌ ಪ್ರಾರ್ಥನೆ, ತತ್ತ್ವ ಕಲಶಾನಿಷೇಕ, ಧ್ಯಾನಸಂಕೋಚಕ್ರಿಯೆ, ಜೀವ ಕಲಶಪೂಜೆ, ಜೀವೋದ್ವಾಸನ ಕ್ರಿಯೆ, ಜೀವಕಲಶ ಶಯ್ನಾರೋಪಣ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಅಂಕುರಪೂಜೆ, ಸ್ವಸ್ತಿ ಪುಣ್ಯಾಹವಾಚನನ, ಪ್ರಾಸಾದಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಬಿಂಬಶುದ್ಧಿ ಕಲಶಾಭಿಷೇಕ, ಧ್ಯಾನಾಧಿವಾಸಕ್ರಿಯೆ, ಅಧಿವಾಸಹೋಮ, ಕಲಶಾಧಿವಾಸ, ಪೀಠಾಧಿವಾಸ, ಪ್ರಾಸಾಧಿವಾಸ, ಚಕ್ರಾಬ್ಜ ಮಂಡಲ ಪೂಜೆ, ಅಧಿವಾಸಬಲಿ ಹಾಗೂ ಮಹಾಪೂಜೆ ನಡೆದು, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here