Home ಧಾರ್ಮಿಕ ಸುದ್ದಿ ‘ಆಧುನಿಕತೆ ಭರದಲ್ಲಿ ಮನುಷ್ಯತ್ವ, ದೇವರನ್ನು ಮರೆಯದಿರಿ’

‘ಆಧುನಿಕತೆ ಭರದಲ್ಲಿ ಮನುಷ್ಯತ್ವ, ದೇವರನ್ನು ಮರೆಯದಿರಿ’

ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದಲ್ಲಿ ಆದಿಚುಂಚನಗಿರಿ ಶ್ರೀ

2313
0
SHARE
ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಆಲಂಕಾರು : ಮನುಷ್ಯ ಆಧುನಿಕತೆಯ ಭರದಲ್ಲಿ ಮನುಷ್ಯತ್ವವನ್ನು, ತನ್ಮೂಲಕ ದೇವರನ್ನೂ ಮರೆಯುತ್ತಿದ್ದಾನೆ. ದುರ್ಭಾವಗಳು ಮನುಷ್ಯತ್ವವನ್ನು ಒಡೆಯುತ್ತವೆ. ಧಾರ್ಮಿಕ ಪ್ರಜ್ಞೆ ಉದ್ದೀಪನಗೊಳ್ಳುವುದು ಅಗತ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಬುಧವಾರ ಆಲಂಕಾರು ಗ್ರಾಮದ ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಶ್ರೀ ಉಳ್ಳಾಕ್ಲು ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಆಧುನಿಕ ಆವಿಷ್ಕಾರಗಳು ಎಷ್ಟೇ ಆದರೂ ಮಾನವೀಯ ಬೆಸುಗೆಯನ್ನು ನಾವು ಮರೆಯಬಾರದು. ಸನಾತನ ಹಿಂದೂ ಧರ್ಮ ಅದ್ಭುತ
ಪರಿಕಲ್ಪನೆಯನ್ನು ಮೂಡಿಸಿದೆ. ಹಿಂದೂಗಳ ಧಾರ್ಮಿಕ ಕ್ಷೇತ್ರ, ಧಾರ್ಮಿಕತೆಗಳ ಬಗ್ಗೆ ಅರಿವು ಮೂಡಬೇಕು. ಇದಕ್ಕಾಗಿ ದೈವ ದೇವರು, ಕುಟುಂಬಸ್ಥರ ಮೇಲೆ ಪರಸ್ಪರ ನಂಬಿಕೆ, ವಿಶ್ವಾಸ ಅತ್ಯಗತ್ಯ ಎಂದು ಅವರು ನುಡಿದರು.

ಮುಖ್ಯ ಅತಿಥಿ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಮಾನವ ಹುಟ್ಟಿನಿಂದ ಸಾವಿನವರೆಗೆ ಚಿಂತೆಯಲ್ಲೇ ಬದುಕಿರುತ್ತಾನೆ. ಆದರೆ, ಮಾನವೀಯ ಸಂಬಂಧಗಳ ಬಗ್ಗೆ ಚಿಂತಿಸಿದಾಗ ಮಾತ್ರ ವಿಶ್ವಾಸಪೂರ್ಣ ಸಮಾಜ ಸೃಷ್ಟಿಯಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್‌ ಕುಮಾರ್‌ ಕೂಡೂರು, ಗುತ್ತಿಗಾರು ಕ್ಷೇತ್ರ ಜಿ.ಪಂ. ಸದಸ್ಯ ಆಶಾ ತಿಮ್ಮಪ್ಪ, ಬೆಳಂದೂರ ಕ್ಷೇತ್ರದ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್‌, ದುರ್ಗಾಂಬ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಆಲಂಕಾರು ಮೂರ್ತೆದಾರ ಸೇವಾ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಶೇಖರ ಕೆ., ಇಡಾಲ ನೆತ್ತರ್‌ತ್ತಾಯ ದೈವ ಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಂಗಾಧ ಗೌಡ ಕೆದ್ದೋಟೆ ಉಪಸ್ಥಿತರಿದ್ದರು.

ಸಮ್ಮಾನ
ನಾಟಿ ವೈದ್ಯರಾದ ಲಕ್ಷ್ಮಣ ಗೌಡ ಏಣಿತ್ತಡ್ಕ, ಜಾನಕಿ ಗೌಡತ್ತಿಗೆ, ಉಮ್ಮಪ್ಪ ಕುಂಬಾರ ಕೊಂಡಾಡಿ, ಅಣ್ಣಿ ಪೂಜಾರಿ ಕೇಪುಳು, ಶೀನಪ್ಪ ಗೌಡ ಬಾಚಡ್ಕ, ಭವಾನಿ ಸುಬ್ರಹ್ಮಣ್ಯ
ನಡುಗುಡ್ಡೆ, ಚೆನ್ನಪ್ಪ ಗೌಡ ಬರೆಪ್ಪುದೇಲು ಅವರನ್ನು ಕ್ಷೇತ್ರದ ವತಿಯಿಂದ ಸ್ವಾಮೀಜಿ ಶಾಲು, ಫ‌ಲಪುಷ್ಪ, ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಲಾಯಿತು.

ಆಲಂಕಾರು ಗ್ರಾಮದ ಸಾಧಕ ವಿದ್ಯಾರ್ಥಿಗಳನ್ನು ಕ್ಷೇತ್ರದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನವೋದಯದ ಪ್ರತಿಭಾವಂತ ವಿದ್ಯಾರ್ಥಿ ಶಶಾಂಕ ಪಜ್ಜಡ್ಕ,
ಕಬಡ್ಡಿ ಪಟುಗಳಾದ ಮೋಕ್ಷಿತಾ ಪಜ್ಜಡ್ಕ, ಧನ್ಯಶ್ರೀ ಪಜ್ಜಡ್ಕ, ಶರಣ್ಯಾ, ಸಿಂಚನಾ, ರಚನಾ ಅವರನ್ನು ಗೌರವಿಸಲಾಯಿತು. ಸರಕಾರಿ ಸೇವೆಯಿಂದ ನಿವೃತ್ತರಾದ ಬುಡೇರಿಯಾ ಬೈಲಿನ ಮಹನೀಯರನ್ನು ಗೌರವಿಸಲಾಯಿತು. ಆಲಂಕಾರು ಸಿ.ಎ. ಬ್ಯಾಂಕಿನ ನಿವೃತ್ತ ಸಿಇಒ ಪಜ್ಜಡ್ಕ ಈಶ್ವರ ಗೌಡ, ದೂರವಾಣಿ ನಿಗಮದ ಕೃಷ್ಣಪ್ಪ ಗೌಡ ಅರಂತಹಿತ್ಲು, ಸ್ಕ್ಯಾಡ್ಸ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗೋಪಣ್ಣ ಗೌಡ ಪೊಯ್ಯಲಡ್ಡ, ಉಗ್ರಾಣಿ ರಾಮಯ್ಯ ದಡ್ಡು ಅವರನ್ನು ಅಭಿನಂದಿಸಲಾಯಿತು.

ನೆನಪಿನ ಕಾಣಿಕೆ
ಬ್ರಹ್ಮ ಕಲಶೋತ್ಸವ ಸಂದರ್ಭ ಕ್ಷೇತ್ರಕ್ಕೆ ಸಹಕಾರ ನೀಡಿದ ಮಹನೀಯರಿಗೆ ಹಾಗೂ ಕ್ಷೇತ್ರಕ್ಕೆ ಸೇವಾ ಕೌಂಟರನ್ನು ಒದಗಿಸಿಕೊಟ್ಟ ಉದಯ ಕುಮಾರ್‌ ಎಣ್ಣೆತ್ತೋಡಿ, ಸ್ವಾಗತ
ಗೋಪುರ ನಿರ್ಮಿಸಿದ ಉಮೇಶ್‌ ಕುಂಬಾರ ನಾಡ್ತಿಲ, ಸಿರಿ ಶೃಂಗಾರ ಮಾಡಿದ ಡೀಕಯ್ಯ ಶರವೂರು, ನೀರಿನ ಕಾರಿಂಜಿ ನಿರ್ಮಿಸಿದ ನಾರಾಯಣ ಆಚಾರ್ಯ ಮನವಳಿಕೆ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕಯ್ಯಪ್ಪ ಜನಾರ್ದನ ಗೌಡ ಸ್ವಾಗತಿಸಿ, ಭಗವತಿ ಕಿರಣ್‌ ಮತ್ತು ಬಾಲಕೃಷ್ಣ ಪಜ್ಜಡ್ಕ ಕಾರ್ಯಕ್ರಮ ನಿರೂಪಿಸಿ, ಪಜ್ಜಡ್ಕ ಈಶ್ವರ ಗೌಡ ವಂದಿಸಿದರು.

ಸಂಘಟಿತರಾಗಬೇಕು
ಕಡಬ ತಾ| ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಎಸ್‌. ಬಾಲಕೃಷ್ಣ ಕೊಯಿಲ ಮಾತನಾಡಿ, ಹಿಂದೂ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಜಾತಿಯ ಆಧಾರದಲ್ಲಿ ಒಡೆಯಲಾಗುತ್ತಿದೆ.
ಇದರಿಂದ ಮಾನವೀಯತೆ ಅಧಃಪತನವಾಗುತ್ತಿದೆ. ದೈವ, ದೇವರ ಬ್ರಹ್ಮಕಲಶ, ನೇಮ, ನಡಾವಳಿಗಳಂತಹ ಮಹತ್ತರ ಕಾರ್ಯಗಳಲ್ಲಿ ಹಿಂದೂ ಸಮಾಜ ಸಂಘಟಿತವಾಗಿ
ಕಾರ್ಯೋನ್ಮುಖವಾಗಬೇಕು. ಆ ಮೂಲಕ ಹಿಂದೂ ಸಂಘಟನೆಗಳನ್ನು ಬಲಪಡಿಸಿಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here