ನೆಹರೂನಗರ : ನಾವು ಎನ್ನುವ ಸಂಕಲ್ಪದಲ್ಲಿ ಕೆಲಸ ಮಾಡಿದಾಗ ಯಶಸ್ಸು ಸಿಗುತ್ತದೆ. ದೇವಸ್ಥಾನದ ಕಾರ್ಯದಲ್ಲಿ ನಾನು ಎನ್ನುವ ಭಾವನೆ ಎಲ್ಲಿಯೂ ಬರ ಬಾರದು ಎಂದು ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಹೇಳಿದರು.
ಮಂಜಲ್ಪಡ್ಪು ಶ್ರೀ ರಕ್ತೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಫೆ. 10ರಂದು ಶಿಲಾಪೂಜನ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಅಚ್ಚುಕಟ್ಟಾಗಿ, ಶಿಸ್ತಿನಿಂದ ಆಗಬೇಕು ಎನ್ನುವುದು ನಮ್ಮೆಲ್ಲರ ಹಂಬಲ. ದೇವರ ಕೆಲಸಕ್ಕೆ ಸಿಕ್ಕಿದ ಒಂದು ಅವಕಾಶ ಇದೆನ್ನುವ ರೀತಿಯಲ್ಲಿ ಎಲ್ಲರೂ ಕೆಲಸ ನಿರ್ವಹಿಸಬೇಕು. ದೇವರ ಕೆಲಸ ಮಾಡುವುದಕ್ಕೂ ಯೋಗ-ಭಾಗ್ಯ ಸಿಗಬೇಕು. ಇದು ನಮ್ಮ ಪಾಲಿಗೆ ದೊರಕಿದೆ. ಮುಂದೆ ವ್ಯವಸ್ಥೆಗಳು ಸರಿ ಆಗುವಂತೆ ಕೆಲಸ ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ನಾೖಕ್ ಶುಭ ಹಾರೈಸಿದರು. ಸಮಿತಿ ಪ್ರಧಾನ ಕಾರ್ಯ ದರ್ಶಿ ರಾಜೇಶ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರವಾಧ್ಯಕ್ಷ ಕೃಷ್ಣಾನಂದ ಸೂರ್ಯ ವಂದಿಸಿದರು. ವಿನೋದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಶಿಲೆಕಲ್ಲುಗಳ ಮೆರವಣಿಗೆ
ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ಪರಿವಾರ ದೈವಗಳ ಚಾವಡಿ ಪುನರ್ ನಿರ್ಮಾಣ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶಿಲೆ ಕಲ್ಲುಗಳ ಮೆರವಣಿಗೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಶಿಲೆಕಲ್ಲುಗಳಿಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಂದ ಬಳಿಕ ಪೂರ್ಣಕುಂಭ ಭಜನೆಯೊಂದಿಗೆ ಶ್ರೀ ರಕ್ತೇಶ್ವರಿ ದೇವಿ ಕ್ಷೇತ್ರಕ್ಕೆ ತೆರಳಲಾಯಿತು. ಬಳಿಕ ಧಾರ್ಮಿಕ ವಿಧಿವಿಧಾನ ನಡೆದು, ಕೆತ್ತನೆ ಮುಹೂರ್ತ ನೆರವೇರಿಸಲಾಯಿತು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಸಂತೋಷ್ ಕುಮಾರ್ ಕಾಯರ್ಮಜಲು, ಕೋಶಾಧಿಕಾರಿ ಶಶಿಧರ್ ಕಲ್ಲೇಗ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯದರ್ಶಿ ನಾರಾಯಣ ನಾಯ್ಕ, ಕಾರ್ಯದರ್ಶಿ ಶ್ಯಾಮ್, ವಿಜಯ್, ಸುದರ್ಶನ್ ಗೌಡ, ಜಯಪ್ರಕಾಶ್ ಎಂ.ಆರ್. ಉಪಸ್ಥಿತರಿದ್ದರು.