ವಿಟ್ಲ: ವ್ರತ, ನಿಯಮಗಳನ್ನು ಪಾಲಿಸಿದಾಗ ಗುರಿ ಸಾಧನೆಸಾಧ್ಯ. ಎಳೆಯ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಜತೆಗೆ ಧಾರ್ಮಿಕ, ನೈತಿಕ ವಿಚಾರಗಳನ್ನು ತುಂಬಿಸಬೇಕಾದ ಆವಶ್ಯಕತೆಯಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ರವಿವಾರ ಆರಂಭಗೊಂಡ ಒಂದು ಮಂಡಲ (48 ದಿನಗಳ) ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಟಿ. ತಾರಾನಾಥ ಕೊಟ್ಟಾರಿ ಮಾತನಾಡಿ, ಮಾಣಿಲ ಶ್ರೀಗಳ ಪ್ರತಿಯೊಂದು ಕಾರ್ಯಗಳಲ್ಲಿ ಸಾಮಾಜಿಕ ಅಭಿವೃದ್ಧಿಯ ಚಿಂತನೆಯಿದೆ ಎಂದರು.
ಟ್ರಸ್ಟಿಗಳಾದ ಚಂದ್ರಶೇಖರ್ ತುಂಬೆ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಮಾಣಿಲ ಗ್ರಾ. ಪಂ. ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಸದಸ್ಯ ಶ್ರೀಧರ ಬಾಳೆಕಲ್ಲು, ಶ್ರೀ ಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಉಪಸ್ಥಿತರಿದ್ದರು. ಟ್ರಸ್ಟಿ ಮಂಜು ವಿಟ್ಲ ಸ್ವಾಗತಿಸಿ, ನಿರೂಪಿಸಿದರು. ಗೀತಾ ವಂದಿಸಿದರು.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ, ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀದುರ್ಗಾ ಪೂಜೆ, ಆಶ್ಲೇಷಾ ಬಲಿ, ಮಹಾಪೂಜೆ ನಡೆಯಿತು.