Home ಧಾರ್ಮಿಕ ಸುದ್ದಿ ಮಾಣಿಲ: ಅಷ್ಟ ಪವಿತ್ರ ನಾಗಮಂಡಲ ಸಂಪನ್ನ

ಮಾಣಿಲ: ಅಷ್ಟ ಪವಿತ್ರ ನಾಗಮಂಡಲ ಸಂಪನ್ನ

783
0
SHARE
ಅಷ್ಟಪವಿತ್ರ ನಾಗಮಂಡಲ ಸಂಪನ್ನಗೊಂಡಿತು.

ಮಾಣಿಲ: ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲ ಬುಧವಾರ ರಾತ್ರಿ ಸಂಪನ್ನಗೊಂಡಿತು. ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ಪುಣ್ಯಾಹ, ನಾಗದೇವರಿಗೆ ಸಾನ್ನಿಧ್ಯ ಕಲಶಾಧಿವಾಸ, ಅಧಿ ವಾಸ ಹೋಮ ಮತ್ತು ವಿಠೊಭ ರುಕ್ಮಯಿ ದೇವರಿಗೆ ಸಾನ್ನಿಧ್ಯ ಕಲಶಾಭಿಷೇಕ, ಗಣಪತಿ ಹೋಮ, ಪವಮಾನ, ಕೂಷ್ಮಾಂಡ, ತಿಲ ಹೋಮಗಳ ಬ್ರಹ್ಮಚಾರಿ ಆರಾಧನೆ ನಡೆಯಿತು. ಮಧ್ಯಾಹ್ನ ಪಲ್ಲಪೂಜೆ, ಶ್ರೀ ದೇವರಿಗೆ ಪ್ರಸನ್ನ ಮಹಾಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸುವಾಸಿನಿ ಸಂತರ್ಪಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ನಾಗ ಸಾನ್ನಿಧ್ಯದಿಂದ ನಾಗಮಂಡಲ ಮಂಟಪಕ್ಕೆ ಹೂ, ಹಿಂಗಾರ, ಫಲವಸ್ತುಗಳ ಶೋಭಾಯಾತ್ರೆ ನಡೆಯಿತು.

ವಿಶೇಷವಾಗಿ ನಿರ್ಮಿಸಿದ ಚಪ್ಪರ
ರಾತ್ರಿ ಮಾಣಿಲ ಶ್ರೀ ವಾಸುಕಿ ಸುಬ್ರಹ್ಮಣ್ಯ ಸಾಗ ಸಾನ್ನಿಧ್ಯದಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾಂಪ್ರದಾಯಿಕ ಶೈಲಿಯಲ್ಲಿ ನಾಗಮಂಡಲಕ್ಕೆಂದೇ ಹಿಂಗಾರ, ಹಣ್ಣುಹಂಪಲು, ಸೀಯಾಳ, ಅಡಿಕೆಯ ಮಾಲೆ, ವೀಳ್ಯದೆಲೆ ಇತ್ಯಾದಿಗಳಿಂದ ವಿಶೇಷವಾಗಿ ನಿರ್ಮಿಸಿದ ಚಪ್ಪರದಲ್ಲಿ ನಾಗದೇವರ ಅಷ್ಟ ಪವಿತ್ರ ಮಂಡಲ ರಚಿಸಲಾಗಿತ್ತು. ಮಂಡಲದೊಳಗೆ ಬಿಳಿ, ಕಪ್ಪು, ಕೆಂಪು, ಹಳದಿ, ಹಸಿರು ಪಂಚ ವರ್ಣದ ಹುಡಿಯಲ್ಲಿ ಪವಿತ್ರ(ಸುಮಗಂಟು)ದಿಂದ ನಾಗರೂಪವನ್ನು ಶಾಸ್ತ್ರೀಯವಾಗಿ ಚಿತ್ರಿಸಿ, ಮಂಡಲದ ಸುತ್ತಲೂ ಪುಷ್ಪದಿಂದ ಅಲಂಕೃತ ಕಲಶಗಳನ್ನು ಹಾಗೂ ಅಡಿಕೆ ಹಿಂಗಾರದ ರಾಶಿಯನ್ನು ಇರಿಸಲಾಗಿತ್ತು.

ನಾಗಪಾತ್ರಿ ಪೆರ್ಡೂರು ಶ್ರೀ ಕ್ಷೇತ್ರ ಕಲ್ಲಂಗಳದ ವೇ| ಮೂ| ರಾಮಚಂದ್ರ ಕುಂಜಿತ್ತಾಯ ಅವರ ನೇತೃತ್ವದಲ್ಲಿ ಮುದ್ದೂರು ಕೃಷ್ಣಪ್ರಸಾದ ವೈದ್ಯ ಮತ್ತು ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಬಳಗದವರಿಂದ ನಾಗಮಂಡಲ ಸೇವೆ ಆರಂಭಗೊಂಡಿತು.

ಪ್ರಸಾದ ವಿತರಣೆ
ಸುಮಾರು 2 ಗಂಟೆ ಅವಧಿಯ ಮೊದಲ ಹಂತದಲ್ಲಿ ನಾಗಪಾತ್ರಿ ಮತ್ತು ನಾಗ ಕನ್ನಿಕೆ (ಅರ್ಧನಾರಿ) ನರ್ತನ ಸೇವೆ, ಆ ಬಳಿಕ ನಾಗಪಾತ್ರಿ ಆವೇಶಭರಿತ ನರ್ತನ ಸೇವೆ ನಡೆಯಿತು. ವೈದ್ಯರ ತಂಡ ಡಮರು ಮೇಳವನ್ನು ನಿರ್ವಹಿಸಿತು. ಎರಡನೇ ಹಂತದಲ್ಲಿ ನಾಗನೃತ್ಯದ ವಿವಿಧ ಭಂಗಿ, ಕುಣಿತಗಳು ನಡೆದವು. ನಾಗಮಂಡಲದ ಕೊನೆಯ ಹಂತದಲ್ಲಿ ‘ಮಿಥುನ ಬಂಧ’ದ ಪ್ರತೀಕವಾಗಿ ‘ಪವಿತ್ರ’ ಗಂಟಿನ ಆಕಾರದಲ್ಲಿಯೇ ಸುತ್ತು ಬರುವ ದೃಶ್ಯ, ‘ಪವಿತ್ರ’ ಗಂಟು ಬಿಡಿಸುವ ನಡುವೆ ಹೂವಿನ ಸೇವೆ, ಕಟ್ಟು ವಾಲಗ ಸೇವೆಗಳಲ್ಲಿ ನಾಗಪಾತ್ರಿಯ ಆವೇಶಭರಿತ ಸನ್ನಿವೇಶ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕೊನೆ ಯಲ್ಲಿ ನಾಗಪಾತ್ರಿಯ ಮೂಲಕ ಭಕ್ತರಿಗೆ ಹಿಂಗಾರ ಹಾಗೂ ಮಂಡಲದೊಳಗಿನ ಪಂಚವರ್ಣದ ಹುಡಿಯೊಂದಿಗೆ ಪ್ರಸಾದ ವಿತರಿಸಲಾಯಿತು.

ಶ್ರೀಧಾಮ ಮಾಣಿಲದ ಶ್ರೀವಾಸುಕಿ ಸುಬ್ರಹ್ಮಣ್ಯ ಸಾನ್ನಿಧ್ಯದಲ್ಲಿ ಈ ಹಿಂದೆ ಚತುಃಪವಿತ್ರ ನಾಗಮಂಡಲ ನಡೆದಿದ್ದು, ಇದೀಗ ಅಷ್ಟಪವಿತ್ರ ನಾಗಮಂಡಲವು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ, ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ವೇ| ಮೂ| ಅನಂತಪದ್ಮನಾಭ ಆಸ್ರಣ್ಣ, ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here