ಮಂಗಳೂರು: ಕೋವಿಡ್ ಲಾಕ್ಡೌನ್ ಕಾರಣ ಚರ್ಚ್ಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಪ್ರಾರ್ಥನೆಗಳು ಶನಿವಾರ ಪುನರಾರಂಭಗೊಂಡಿವೆ.
ಮಂಗಳೂರಿನ ರೊಜಾರಿಯೊ ಕೆಥೆಡ್ರಲ್, ಕಾಸ್ಸಿಯಾ ಚರ್ಚ್, ಫಾತಿಮಾ ರಿಟ್ರೀಟ್ ಹೌಸ್, ನೀರುಮಾರ್ಗದ (ಮೇರ್ಲಪದವು) ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ಗಳಲ್ಲಿ ಶನಿವಾರ ಸಂಜೆ ಚರ್ಚ್ನ ಧರ್ಮಗುರುಗಳ ನೇತೃತ್ವದಲ್ಲಿ ಬಲಿ ಪೂಜೆಗಳು ನಡೆದವು. ಇನ್ನುಳಿದ ಬಹುತೇಕ ಚರ್ಚ್ ಗಳಲ್ಲಿ ಜೂ. 14 ರಿಂದ ಬಲಿ ಪೂಜೆಗಳು ಆರಂಭವಾಗಲಿವೆ.
ಕೋವಿಡ್ ವೈರಸ್ ಹರಡದಂತೆ ಸರಕಾರ ಸೂಚಿಸಿದ ನಿರ್ದೇಶನ ಹಾಗೂ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್ ಬಿಷಪರ ಪರಿಷತ್ತು ರಚಿಸಿದ ಮಾರ್ಗದರ್ಶನಗಳನ್ವಯ ಸಕಲ ಸಿದ್ಧತೆಗಳೊಂದಿಗೆ ಕೆಲವು ಚರ್ಚ್ಗಳಲ್ಲಿ ಶನಿವಾರ ಬಲಿಪೂಜೆ ಆರಂಭವಾಗಿದೆ ಎಂದು ಬಿಷಪ್ ರೈ| ರೆ| ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.