
ಮಹಾನಗರ: ಜಪ್ಪು ಸಂತ ಆಂತೋನಿ ಆಶ್ರಮದ ಪಾಲಕ ಸಂತ ಆಂತೋನಿ ಅವರ ವಾರ್ಷಿಕ ಮಹೋತ್ಸವ ಗುರುವಾರ ಮಿಲಾಗ್ರಿಸ್ ಚರ್ಚ್‌ನಲ್ಲಿ ಜರಗಿದ್ದು, ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಹಬ್ಬದ ಪ್ರಧಾನ ಬಲಿಪೂಜೆಯನ್ನು ಅರ್ಪಿಸಿದರು.
ಸಂತ ಆಂತೋನಿ ಅವರು ತಮ್ಮ ಜೀವನದಲ್ಲಿ ಯೇಸು ಕ್ರಿಸ್ತರನ್ನು ಆದರ್ಶವಾಗಿಟ್ಟುಕೊಂಡು ಅವರಂತೆ ಪರರಿಗಾಗಿ ಜೀವಿಸಲು ಪ್ರಯತ್ನ ಪಟ್ಟ ಮಹಾ ಪುರುಷ. ದೇವರು ತಮಗೆ ನೀಡಿದ ಪವಾಡ ಮಾಡುವ ಶಕ್ತಿಯಿಂದ ಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಬೇಕಾದ ವರಗಳನ್ನು ನೀಡಿದ ಪುಣ್ಯ ಪುರುಷ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೆಂದರೆ ದೇವೆರಿಗೆ ಸಹಾಯ ಮಾಡುವುದೆಂದು ಭಾವಿಸಿದ್ದ ಜಾಣ ವ್ಯಕ್ತಿ. ಕೆಥೋಲಿಕ್ ಧರ್ಮಸಭೆ ಅವರ ತ್ಯಾಗದ ಜೀವನಕ್ಕಾಗಿ ಅವರಿಗೆ ಸಂತ ಪದವಿ ನೀಡಿದೆ. ಸಂತ ಆಂತೋನಿಯವರು ನಿಧನರಾಗಿ ಎಂಟು ಶತಮಾನ ಕಳೆದರೂ ತಮ್ಮ ಭಕ್ತರಿಗಾಗಿ ಇಂದಿಗೂ ದೇವರಲ್ಲಿ ಪ್ರಾರ್ಥಿಸಿ ಸಂಕಷ್ಟದಲ್ಲಿದ್ದವರಿಗೆ ಸಾಂತ್ವನ ನೀಡುತ್ತಾರೆ. ಸಂತ ಆಂತೋನಿ ಅವರಂತೆ ಯೇಸು ಸ್ವಾಮಿಯ ಅನುಯಾಯಿಗಳಾಗಲು ಪ್ರಯತ್ನ ಪಡೋಣ. ಅದುವೇ ಸಂತ ಆಂತೋನಿಯವರ ಗೌರಾವಾರ್ಥ ನಾವು ಆಚರಿಸುವ ಹಬ್ಬವಾಗಿದೆ ಎಂದು ಬಿಷಪ್ ಅವರು ತಮ್ಮ ಸಂದೇಶದಲ್ಲಿ ಹೇಳಿದರು.
ಸಮ್ಮಾನ
ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ ಅವರು ಪ್ರವಚನ ನೀಡಿದರು. 7 ವರ್ಷಗಳಲ್ಲಿ ಸಂತ ಆಂತೋನಿ ಅವರ ಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಸಂಪೂರ್ಣ ಸಹಕಾರ ಸಲಹೆಗಳನ್ನು ನೀಡಿದ್ದಕ್ಕಾಗಿ ಆಶ್ರಮದ ವತಿಯಿಂದ ವಂ| ವಲೇರಿಯನ್ ಅವರನ್ನು ಸಮ್ಮಾನಿಸಲಾಯಿತು.
ಬಂಟ್ವಾಳ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ರಧಾನ ಗುರುಗಳಾಗಿ ವರ್ಗವಾಗಿ ಹೋಗುತ್ತಿರುವ ಅವರನ್ನು ಶುಭ ಕೋರಲಾಯಿತು.
ಹಬ್ಬದ ಅಂಗವಾಗಿ ಬೆಳಗ್ಗೆ 8.15ಕ್ಕೆ ಕಾಟಿಪಳ್ಳ ಚರ್ಚ್‌ನ ಧರ್ಮಗುರು ವಂ| ವಲೇರಿಯನ್ ಲುವಿಸ್, 11 ಗಂಟೆಗೆ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕ ವಂ| ಫ್ರಾನ್ಸಿಸ್ ಡಿ’ಸೋಜಾ ಮತ್ತು ಸಂಜೆ 4.30ಕ್ಕೆ ಮಂಜೇಶ್ವರ ಡೊನ್ ಬೊಸ್ಕೊ ಶಾಲೆಯ ಪ್ರಾಂಶುಪಾಲ ವಂ| ಆಗಶಿrನ್ ತೆಕ್ಕೆಪೂಕೆಂಬಿಲ್ ಅವರು ಬಲಿಪೂಜೆಯನ್ನು ಅರ್ಪಿಸಿದರು. ಆಶ್ರಮದ ನಿರ್ದೇಶಕ ವಂ| ಒನಿಲ್ ಡಿ’ಸೋಜಾ ಅವರು ಹಬ್ಬಕ್ಕೆ ಸಹಕಾರ ನೀಡಿದವರೆಲ್ಲರ ಉಪಕಾರ ಸ್ಮರಿಸಿದರು. ಸಹಾಯಕ ನಿರ್ದೇಶಕರಾದ ವಂ| ತ್ರಿಶಾನ್, ವಂ| ರೋಶನ್ ಮತ್ತು ನಗರದ ಸುತ್ತ ಮುತ್ತಲಿನ ಧರ್ಮಗುರುಗಳು ಉಪಸ್ಥಿತರಿದ್ದರು.