ಮಹಾನಗರ: ರಮ್ಜಾನ್ ತಿಂಗಳ ಉಪವಾಸ ವ್ರತಾಚರಣೆಯ ಬಳಿಕ ಶವ್ವಾಳ್ ತಿಂಗಳ ಮೊದಲ ದಿನವಾದ ಬುಧವಾರ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನ ಮಂದಿರದಲ್ಲಿ ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಮಾಝ್ ಮತ್ತು ಪ್ರಾರ್ಥನೆ ನಡೆಯಿತು. ಬಳಿಕ ಖಾಝಿ ಮತ್ತು ಇತರ ಮುಖ್ಯ ಅತಿಥಿಗಳು ಸಂದೇಶ ನೀಡಿದರು.
ಶಾಹ ಅಮೀರ್ ಅಲಿ ಮಸೀದಿಯ ಇಮಾಮ್ ಮೌಲಾನಾ ರಿಯಾಜ್ ಹಖ್ ಅವರು ನಮಾಝ್ ಬಗ್ಗೆ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಈದ್ಗಾ ಮತ್ತು ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಂಗಳೂರಿನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾತನಾಡಿ, ಈದುಲ್ ಫಿತ್ರ ಹಬ್ಬದ ಸಂದೇಶ ನೀಡಿ ಶುಭಾಶಯ ಸಲ್ಲಿಸಿದರು. ಮಾಜಿ ಶಾಸಕ ಜೆ . ಆರ್. ಲೋಬೋ, ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ| ಡಾ| ಪ್ರವೀಣ್ ಮಾರ್ಟಿಸ್, ಡಿಸಿಪಿ ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.
ಶುಭಾಶಯ ವಿನಿಮಯ
ಎಲ್ಲ ಮಸೀದಿಗಳಲ್ಲಿ ನಮಾಜ್ ಮತ್ತು ಪ್ರವಚನದ ಬಳಿಕ ಮುಸ್ಲಿಮರು ಪರಸ್ಪರ ಹಸ್ತ ಲಾಘವ ಮತ್ತು ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಮನೆಗಳಲ್ಲಿ ಹಬ್ಬದ ಸಂಭ್ರಮ ನಡೆಯಿತು.
ಉಳ್ಳಾಲ: ಸಂಭ್ರಮದ ಈದ್
ಉಳ್ಳಾಲ: ಒಂದು ತಿಂಗಳು ಉಪವಾಸ ಆಚರಿಸಿ ಅಲ್ಲಾಹನಿಗಾಗಿ ಪುಣ್ಯಕಾರ್ಯ ನಿರ್ವಹಿಸಿ ಈದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಭಕ್ತಿಯಿಂದ ಇದ್ದುಕೊಂಡು ಅರ್ಹರಿಗೆ ಜಕಾತ್ ನೀಡಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಬೇಕಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ್ ಹೇಳಿದರು.ಉಳ್ಳಾಲ ದರ್ಗಾದಲ್ಲಿ ಬುಧವಾರ ಈದ್ ನಮಾಝ್ ಮತ್ತು ದರ್ಗಾ ಝಿಯಾರತ್ ಮುಗಿಸಿದ ಬಳಿಕ ಅವರು ಮಾತನಾಡಿದರು.
ನಗರಾಭಿವೃದ್ಧಿ ಸಚಿವರಾದ ಯು.ಟಿ. ಖಾದರ್ ಮಾತನಾಡಿ, ರಮ್ಜಾನ್ನ 30 ವ್ರತಾನುಷ್ಠಾನದ ಬಳಿಕ ಆಚರಿಸಲಾಗುವ ಪವಿತ್ರ ಈದುಲ್ ಫಿತ್ರ ಹಬ್ಬವೂ ಸಮಾನತೆ, ಪ್ರೀತಿ, ವಿಶ್ವಾಸ, ಸೌಹಾರ್ದ ಸಂದೇಶ ನೀಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಜೀವಿಸಿ ಧರ್ಮದ ಪಾವಿತ್ರ್ಯ, ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸಕ್ಕೆ ಮುಂದಾಗಬೇಕು. ವಿಶ್ವಶಾಂತಿಗಾಗಿ ಪ್ರಯೊಬ್ಬರೂ ಪ್ರಾರ್ಥಿಸಬೇಕು ಎಂದರು.
ಖತೀಬರಾದ ಅಬ್ದುಲ್ಅಝೀಝ್ ಬಾಖವಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ಮಾಡಿದರು. ಸಹಾಯಕ ಖಾಝಿ ಅಬ್ದುಲ್ ರವೂಫ್Ø ಮುಸ್ಲಿಯಾರ್ ಝಿಯಾರತ್ ನೆರವೇರಿಸಿದರು.
ಈದ್ ನಮಾಝ್
ಪಂಪ್ವೆಲ್ನ ತಖ್ವಾ ಮಸೀದಿ, ಹಂಪನಕಟ್ಟೆಯ ನೂರ್ ಮಸೀದಿ, ಕಂಕನಾಡಿಯ ರಹ್ಮಾನಿಯಾ ಮಸೀದಿ, ಕುದ್ರೋಳಿಯ ಜಾಮಿಯಾ ಮಸೀದಿ, ಬಂದರ್ನ ಕಂದುಕ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಕಚ್ಚಿ ಮೆಮನ್ ಮಸೀದಿ, ಪಾಂಡೇಶ್ವರ ಪೊಲೀಸ್ ಲೇನ್ನ ಫೌಝಿಯಾ ಜುಮಾ ಮಸೀದಿ, ವಾಸ್ಲೇನ್ನ ಇಹ್ಸಾನ್ ಮಸೀದಿ, ಬೋಳಾರದ ಮುಹ್ಯುದ್ದೀನ್ ಮಸೀದಿ, ಬೆಂಗ್ರೆಯ ಅನಸ್ ಬಿನ್ ಮಲಿಕ್ ಮಸೀದಿ ಮತ್ತು ನಗರ, ಹೊರವಲಯದ ಇತರ ಮಸೀದಿಗಳಲ್ಲಿ ಈದ್ ನಮಾಝ್ ಕಾರ್ಯಕ್ರಮ ನಡೆಯಿತು.