ಮಹಾನಗರ: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ವೀರ ವೆಂಕಟೇಶ ದೇವರ ರಥೋತ್ಸವದ ಅಂಗವಾಗಿ ಶುಕ್ರವಾರ ಮೃಗಬೇಟೆ ಉತ್ಸವವು ಕಾಶಿಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯ ಅವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿತು.
ಶ್ರೀನಿವಾಸ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಪುಷ್ಪಾಲಂಕೃತ ಬೆಳ್ಳಿ ಲಾಲ್ಕಿಯಲ್ಲಿರಿಸಿ ಡೊಂಗರಕೇರಿಯ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶ್ರೀ ದೇಗುಲದ ತಂತ್ರಿಗಳಾದ ಶ್ರೀ ಕಾಶೀನಾಥ ಆಚಾರ್ಯರವರು ಸಾಂಕೇತಿಕವಾಗಿ ಬಿಲ್ಲಿನಿಂದ ಬಾಣವನ್ನು ಬಿಡುವುದರ ಮೂಲಕ ಮೃಗಬೇಟೆಗೆ ಚಾಲನೆ ನೀಡಲಾಯಿತು.
ಅನಂತರ ಮೃಗವಾಗಿ ಬೇಟೆಯಾದ ಇಬ್ಬರು ಸ್ವಯಂ ಸೇವಕರಿಗೆ ಹಾಗೂ ಸೇವಾದಾರರಿಗೆ ಶ್ರೀಗಳು ಪ್ರಸಾದ ವಿತರಿಸಿದರು. ಶ್ರೀ ದೇವರ ಉತ್ಸವವು ಡೊಂಗರಕೇರಿ, ನ್ಯೂ ಚಿತ್ರಾ ಟಾಕೀಸ್, ಚಾಮರಗಲ್ಲಿ ಹಾಗೂ ರಥಬೀದಿಯಾಗಿ ಸಾಗಿದ ಬಳಿಕ ಸಣ್ಣ ರಥೋತ್ಸವ ಜರಗಿತು.