ಮಂಗಳೂರು: ಮನುಷ್ಯನ ಚಿಂತನೆಗಳು ಆತನ ಜೀವನಕ್ರಮವನ್ನು ನಿರ್ಧರಿಸುತ್ತವೆ. ಸಕಾರಾತ್ಮಕ ಚಿಂತನೆ ಗಳು ಬದುಕಿನಲ್ಲಿ ಸಂತೋಷ, ಆರೋಗ್ಯ, ಆತ್ಮಶಕ್ತಿಯೊಂದಿಗೆ ಸಂತೃಪ್ತಿಯ ಸಾರ್ಥಕ ಜೀವನಕ್ಕೆ ಕಾರಣ ವಾಗುತ್ತವೆ ಮತ್ತು ಸುಂದರ ಪರಿಸರ ಮತ್ತು ಸಮಾಜಕ್ಕೆ ಪೂರಕವಾಗುತ್ತದೆ ಎಂದು ಪ್ರಸಿದ್ಧ ವಾಗ್ಮಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿನಿ ಬಿ.ಕೆ. ಶಿವಾನಿ ಹೇಳಿದರು.
ಅವರು ರವಿವಾರ ನಗರದ ಟಿ.ಎಂ.ಎ. ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಆರೋಗ್ಯ, ಸಂತೋಷ ಮತ್ತು ಸಾಮರಸ್ಯ (ಹೆಲ್ತ್, ಹ್ಯಾಪಿನೆಸ್ ಆ್ಯಂಡ್ ಹಾರ್ಮನಿ) ವಿಚಾರದಲ್ಲಿ ಉಪನ್ಯಾಸ ನೀಡಿದರು.
ನಕಾರಾತ್ಮಕ ಚಿಂತನೆಗಳು ಚಿಂತೆ, ಅಧೈರ್ಯ, ಅಭದ್ರತೆ, ಅಪನಂಬಿಕೆ ಯನ್ನು ಹುಟ್ಟು ಹಾಕಿ ಜೀವನವನ್ನು ಅಧಃಪತನದತ್ತ ಕೊಂಡೊಯ್ಯುತ್ತವೆ ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುತ್ತವೆ ಎಂದರು.
ವ್ಯಕ್ತಿತ್ವದ ಪ್ರತಿಬಿಂಬ
ಆಲೋಚನೆಗಳು, ನಡತೆ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ನಮ್ಮ ಯೋಚನಾ ಲಹರಿಯಂತೆ ನಮ್ಮ ಜೀವನದ ದಿಕ್ಕು ಸಾಗುತ್ತದೆ. ಸಕಾರಾತ್ಮಕ ಚಿಂತನೆಗಳ ಸಂಕಲ್ಪಸಿದ್ಧಿಯನ್ನು ಯಾರು ಸಾಧಿಸುತ್ತಾರೋ ಅವರು ಯಶಸ್ವಿಯಾಗುತ್ತಾರೆ. ಪ್ರತಿದಿನವೂ ಒಳ್ಳೆಯ ಚಿಂತನೆಗಳೊಂದಿಗೆ ಆರಂಭ ಗೊಂಡರೆ ದಿನವಿಡೀ ಮನಸ್ಸು, ದೇಹ ಚೈತನ್ಯದಾಯಕವಾಗಿರುತ್ತವೆ. ದಿನದ ಕೊನೆಯಲ್ಲಿ ಸಕಾರಾತ್ಮಕ ಚಿಂತನೆಗಳೊಂದಿಗೆ ಮಲಗಿದಾಗ ನಿಶ್ಚಿಂತೆಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಮತ್ತು ಮರುದಿನದ ಆರಂಭ ಉಲ್ಲಾಸಭರಿತವಾಗಿರುತ್ತದೆ ಎಂದವರು ಹೇಳಿದರು.
ನಾನು ಸಂತೋಷವಾಗಿದ್ದೇನೆ; ನಾನು ಆರೋಗ್ಯವಾಗಿದ್ದೇನೆ ಎಂಬ ಆಲೋಚನೆಗಳು ಧನಾತ್ಮಕ ಶಕ್ತಿಯ ಕಂಪನಗಳನ್ನು ಸೃಷ್ಟಿಸುತ್ತವೆ. ಬದುಕಿನ ಮೂಲಸತ್ವಗಳನ್ನು ಪೋಷಿಸದಿದ್ದರೆಜೀವನ ಮೌಲ್ಯಗಳು ನಶಿಸುತ್ತವೆ. ಯುವಜನತೆಯಲ್ಲಿ ಆತ್ಮವಿಶ್ವಾಸ ಕುಸಿಯಲು ಮೂಲಸತ್ವಗಳನ್ನು ಅವಗಣಿಸಿರುವುದೇ ಕಾರಣ ಎಂದರು.
ಸ್ಥಿತಪ್ರಜ್ಞರಾಗಿರಿ
ಇನ್ನೊಬ್ಬರ ತೆಗಳಿಕೆ, ನಿಂದನೆ, ಅಗೌರವಗಳಿಂದ ವಿಚಲಿತರಾಗದೆ ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಂಡಾಗ ಅಲ್ಲಿ ಅಸಂತೋಷ, ಖನ್ನತೆ, ಒತ್ತಡ ಮತ್ತು ಅಧೀರತೆಗೆ ಅವಕಾಶವಿರುವುದಿಲ್ಲ. ನಿಂದನೆಯ ಮಾತುಗಳಿಗೆ ಪ್ರತಿಕ್ರಿಯಿ ಸಲು ಹೊರಟರೆ ನಮ್ಮ ಸಂತೋಷವೂ ಹಾಳಾಗುತ್ತದೆ. ಸಂತೋಷ ಹಾಳಾದರೆ ಆರೋಗ್ಯ ಹಾಳಾಗುತ್ತದೆ ಎಂದವರು ವಿವರಿಸಿದರು.
ವಿಶ್ವಸಂಸ್ಥೆಯ ಮನ್ನಣೆ
ಬ್ರಹ್ಮಕುಮಾರಿ ನಿರ್ಮಲಾಜಿ ಅವರು ಪ್ರಸ್ತಾವನೆಗೈದು 1937ರಲ್ಲಿ ಸ್ಥಾಪನೆಗೊಂಡ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾ ಲಯ ಇಂದು ಪ್ರಪಂಚದಲ್ಲಿ 149 ಶಾಖೆಗಳನ್ನು ಹಾಗೂ 8000 ಕ್ಕೂ ಅಧಿಕ ಸೇವಾ ಕೇಂದ್ರಗಳನ್ನು ಹೊಂದಿದೆ. ವಿಶ್ವಸಂಸ್ಥೆಯಿಂದ ಮನ್ನಣೆ ಗಳಿಸಿದೆ ಎಂದರು.
ಬ್ರಹ್ಮಕುಮಾರಿ ರೇವತಿ ಅವರು ಶಿವಾನಿ ಅವರನ್ನು ಪರಿಚಯಿಸಿದರು. ಮಂಗಳೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ. ವಿಶ್ವೇಶ್ವರಿ ಸ್ವಾಗತಿಸಿದರು.
ಪ್ರತಿ ತಾಸಿಗೆ ಒಂದು ಮಗು ಆತ್ಮಹತ್ಯೆ!
ಋಣಾತ್ಮಕ ಆಲೋಚನೆಗಳು ಮತ್ತು ಚಿಂತೆಯಿಂದಾಗಿ ಪ್ರಸ್ತುತ ಬದುಕಿನಲ್ಲಿ ಮಾನಸಿಕ ಒತ್ತಡ,ಅತೃಪ್ತಿ ಹೆಚ್ಚುತ್ತಿದೆ. ಇದು ಖನ್ನತೆಗೆ ಕಾರಣವಾಗುತ್ತದೆ. ಮಕ್ಕಳು ಕೂಡ ಖನ್ನತೆಗೆ ಒಳಗಾಗುತ್ತಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದೇಶದಲ್ಲಿ ಪ್ರತಿ 1 ತಾಸಿಗೆ ಒಂದು ಮಗು ಆತ್ಮಹತ್ಯೆಗೆ ಶರಣಾಗುತ್ತಿದೆ. 20 ವರ್ಷಗಳ ಹಿಂದೆ ಮಕ್ಕಳ ಆತ್ಮಹತ್ಯೆ ಎಂಬ ಶಬ್ದವೇ ಇರಲಿಲ್ಲ. 20 ವರ್ಷಗಳ ಹಿಂದೆ ವಿವಾಹ ವಿಚ್ಛೇದನ ಎಂದರೆ ಅದೊಂದು ಕುಟುಂಬಕ್ಕೆ ಕಳಂಕ ಎಂಬ ಭಾವನೆ ಇತ್ತು. ಆದರೆ ಇಂದು ವಿಚ್ಛೇದನ ಎಂಬುದು ಸಾಮಾನ್ಯ ಎಂಬ ಭಾವನೆ ನೆಲೆಸಿದೆ ಎಂದು ಶಿವಾನಿ ಹೇಳಿದರು.
ಆಹಾರ ಸೇವನೆಯೂ ಧ್ಯಾನ
ಪ್ರಸ್ತುತ ನಮ್ಮ ಆಹಾರ ಸೇವನೆಯಲ್ಲೂ ಧಾವಂತ ಆವರಿಸಿದೆ. ಬೆಳಗಿನ ಉಪಾಹಾರವನ್ನು ಓಡುತ್ತಲೇ ಸೇವಿಸುತ್ತೇವೆ. ಮಧ್ಯಾಹ್ನದ ಊಟ ವ್ಯವಹಾರದ ಜತೆಗೆ (ಲಂಚ್ ವಿದ್ ಬಿಸಿನೆಸ್ ಮೀಟ್) ನಡೆಯುತ್ತದೆ. ರಾತ್ರಿಯ ಊಟ ಮೊಬೈಲ್/ಟಿವಿ ಜತೆಗೆ ಸಾಗುತ್ತದೆ. ನಮ್ಮ ಬದುಕಿನ ತಲ್ಲಣಗಳಿಗೆ ಇವುಗಳು ಕೂಡ ಕಾರಣ. ಊಟವನ್ನು ಕೂಡ ಧ್ಯಾನವಾಗಿ ಪರಿಗಣಿಸಬೇಕು. ಮನೆಯೂಟಕ್ಕೆ ಮಿಗಿಲಾದುದು ಇಲ್ಲ ಎಂದು ಶಿವಾನಿ ತಿಳಿಸಿದರು.