Home ಧಾರ್ಮಿಕ ಸುದ್ದಿ ಮಂಡೆಕೋಲು ಜಾತ್ರೆ: 26ರಂದು ಅಡ್ಡಣ ಪೆಟ್ಟು

ಮಂಡೆಕೋಲು ಜಾತ್ರೆ: 26ರಂದು ಅಡ್ಡಣ ಪೆಟ್ಟು

1549
0
SHARE

ಮಂಡೆಕೋಲು: ಶ್ರೀ ಮಹಾವಿಷ್ಣು ದೈವಸ್ಥಾನದ ಜಾತ್ರೆಯಲ್ಲಿ ದೈವದ ಸಮ್ಮುಖದಲ್ಲಿ ನಡೆಯುವ ಅಡ್ಡಣ ಪೆಟ್ಟು ವಿಶಿಷ್ಟ ಆಚರಣೆ. (ಸಂಗ್ರಹ ಚಿತ್ರ)
ಸುಳ್ಯ ಎ. 22: ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೆಯ ಅಂಗವಾಗಿ ಎ. 26ರಂದು ನಡೆಯುವ ಅಡ್ಡಣಪೆಟ್ಟು ಆಚರಣೆ ಭೂತಾರಾಧನೆಯಲ್ಲೇ ಮಹತ್ವದ್ದು. ಹತ್ತೂರು ಭಕ್ತರ ಪಾಲಿಗಿದು ವಿಶಿಷ್ಟವಾದ ಆಚರಣೆ. ಕರ್ನಾಟಕ- ಕೇರಳದ ಗಡಿ ಭಾಗದಿಂದ ಭಕ್ತರು ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.

ಧಾರ್ಮಿಕ ನೆಲೆಯಲ್ಲಿ ಮಂಡೆ ಕೋಲನ್ನು 4 ಪ್ರಧಾನ ಊರುಗಳಾಗಿ ವಿಂಗಡಿಸಲಾಗಿದೆ. ಮಾವಜಿ, ಬೊಳು ಗಲ್ಲು, ಕೇನಾಜೆ, ಮುರೂರು ಈ ನಾಲ್ಕು ಊರುಗಳು. ಈ ಊರುಗಳ ಗೌಡ ಮನೆತನದ ಪ್ರತಿನಿಧಿಗಳು ಖಾಕಿ ವಸ್ತ್ರ, ಕೆಂಪನೆಯ ಪಟ್ಟಿ, ಬಿಳಿ ಮುಂಡಾಸು, ಬೆತ್ತದ ದಂಡ ಮತ್ತು ತೈಲ ಲೇಪಿತ ಬೆತ್ತದ ಅಡ್ಡಣ ಹಿಡಿದು ಎದುರು ಬದುರಾಗಿ ಹೊಡೆದಾಟ ಆರಂಭಿಸುವುದು ಅಡ್ಡಣ ಪೆಟ್ಟು. ಇರುವೆರ್‌ ಉಳ್ಳಾಕುಲು ದೈವ ಮಧ್ಯ ಪ್ರವೇಶಿಸಿ ಈ ಹೊಡೆದಾಟ ನಿಲ್ಲಿಸುವುದು ಅಡ್ಡಣಪೆಟ್ಟು ಆಚರಣೆಯ ಪ್ರಮುಖ ಘಟ್ಟ.

ನಾಲ್ವರಿಂದ ವ್ರತಚಾರಣೆ

ಮಾವಜಿ, ಬೊಳುಗಲ್ಲು, ಕೇನಾಜೆ, ಮುರೂರು ಮನೆತನದ ನಾಲ್ಕು ಪ್ರತಿನಿಧಿಗಳು ಅಡ್ಡಣ ಪೆಟ್ಟು ನಡೆಯುವುದಕ್ಕಿಂತ ಐದು ದಿನಗಳ ಮೊದಲು ವ್ರತಧಾರಿಗಳಾಗಿ ದೇವಸ್ಥಾನದಲ್ಲಿಯೇ ಕಾಲ ಕಳೆಯುತ್ತಾರೆ. ಈ ನಾಲ್ವರು ನೇಮದ ಹಿಂದಿನ ದಿನ ದೈವದ ಮೂಲಸ್ಥಾನ ಕಳೇರಿಮೂಲೆಯಲ್ಲಿ ವ್ರತಸ್ಥರಾಗಿ ನಿಂತು, ರಾತ್ರಿ ವೇಳೆ ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬಂದು ತಂಗುತ್ತಾರೆ. ಮರುದಿನ ಉಳ್ಳಾಕುಲು ದೈವದ ನೇಮ ಆರಂಭವಾದಾಗ, ದೇವಾಲಯದ ಸನಿಹದ ಗದ್ದೆಯಲ್ಲಿ ಈ ಆಚರಣೆ ನಡೆಯುತ್ತದೆ. ಈ ನಾಲ್ವರು ಎದುರು ಬದುರಾಗಿ ನಿಂತು ಕೆಲವು ನಿಮಿಷಗಳ ಬೆತ್ತ ಹಿಡಿದು ಹೊಡೆದಾಟ ಆರಂಭಿಸುತ್ತಾರೆ. ಹೊಡೆತ ತಗಲದಂತೆ ಅಡ್ಡಣ ಹಿಡಿದು ತಡೆಯುತ್ತಾರೆ. ಅಡ್ಡಣ ಹಿಡಿಯುವ ಕ್ರಮದಲ್ಲಿಯೂ ಅನೇಕ ಪದ್ಧತಿಗಳನ್ನು ಪಾಲಿಸಬೇಕು.

ದೈವಕ್ಕೆ ಸಂಬಂಧಪಟ್ಟ ಹೆಚ್ಚಿನ ಹಕ್ಕು ಬಾಧ್ಯತೆ ಈ ನಾಲ್ಕೂರಿಗೆ ಸಲ್ಲುತ್ತದೆ. ಯಾವುದೋ ಕಾಲದಲ್ಲಿ ನಡೆದ ಸಂಘರ್ಷ ಮತ್ತು ಅದನ್ನು ತುಳುನಾಡಿನ ಸಾಂಸ್ಕೃತಿಕ ವೀರನಾಗಿರುವ ಇರುವೆರ್‌ ಉಳ್ಳಾಕುಲು ದೈವ ತಡೆದಂತೆ ಅಡ್ಡಣಪೆಟ್ಟು ಕಾಣಿಸುತ್ತದೆ. ಹಾಗಾಗಿ ಇಂತಹ ದುರ್ಘ‌ಟನೆ ನಡೆಯಬಾರದೆಂದು ಪ್ರತಿ ವರ್ಷ ಈ ಅಡ್ಡಣಪೆಟ್ಟು ಆಚರಣೆ ನಡೆಯುತ್ತಿದೆ ಎನ್ನುವುದು ಹಿರಿಯರ ಅಂಬೋಣ.

ಪರಸ್ಪರ ಕಾದಾಟಕ್ಕೆ ಆರಂಭವಾದಾಗ, ಬೆನ್ನು ಹಾಕಿ ನಿಂತ ಉಳ್ಳಾಕ್ಲು ದೈವ ತಿರುಗಿ ಬಂದು ಹೊಡೆದಾಟವನ್ನು ಬಿಡಿಸುತ್ತದೆ. ಬಳಿಕ ದೇವಸ್ಥಾನದ ಕೊಡಿಯಡಿಗೆ ತೆರಳುವ ದೈವವನ್ನು ಈ ನಾಲ್ವರು ಹಿಂಬಾಲಿಸುತ್ತಾರೆ. ಇಲ್ಲಿ ಪರಸ್ಪರ ಹೊಡೆದಾಟದ ವೇಳೆ ಬೆತ್ತದೇಟು ತಾಗಿದರೂ ನೋವಾಗದು ಎನ್ನುವುದು ಪ್ರತಿನಿಧಿಗಳ ಅಂಬೋಣ.
ಪರಸ್ಪರ ಕಾದಾಟಕ್ಕೆ ಆರಂಭವಾದಾಗ, ಬೆನ್ನು ಹಾಕಿ ನಿಂತ ಉಳ್ಳಾಕ್ಲು ದೈವ ತಿರುಗಿ ಬಂದು ಹೊಡೆದಾಟವನ್ನು ಬಿಡಿಸುತ್ತದೆ. ಬಳಿಕ ದೇವಸ್ಥಾನದ ಕೊಡಿಯಡಿಗೆ ತೆರಳುವ ದೈವವನ್ನು ಈ ನಾಲ್ವರು ಹಿಂಬಾಲಿಸುತ್ತಾರೆ. ಇಲ್ಲಿ ಪರಸ್ಪರ ಹೊಡೆದಾಟದ ವೇಳೆ ಬೆತ್ತದೇಟು ತಾಗಿದರೂ ನೋವಾಗದು ಎನ್ನುವುದು ಪ್ರತಿನಿಧಿಗಳ ಅಂಬೋಣ.

LEAVE A REPLY

Please enter your comment!
Please enter your name here