ಮಲ್ಪೆ: ತೊಟ್ಟಂ ಬಡಾನಿಡಿಯೂರು 1ನೇ ಮತ್ತು 2ನೇ ಮೊಗವೀರ ಗ್ರಾಮಸಭೆಯ ಶ್ರೀ ಬೊಬ್ಬರ್ಯ ಸ್ಥಾನದ ಶ್ರೀ ಬೊಬ್ಬರ್ಯ ಮತ್ತು ಪರಿವಾರ ಶಕ್ತಿಗಳ ನವೀಕೃತ ದೈವಾಲಯ ಸಮರ್ಪಣೆ, ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮತ್ತು ವಾಸ್ತು
ತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರ ಮಾರ್ಗದರ್ಶನದಲ್ಲಿ ರವಿವಾರ ಸಮಾಪನಗೊಂಡಿತು.
ಬೆಳಗ್ಗೆ ಶ್ರೀ ಬೊಬ್ಬರ್ಯ, ನಂದಿಕೇಶ್ವರ, ನೀಚ ದೈವಗಳ ಪುನರ್ ಪ್ರತಿಷ್ಠೆ, ಸಾನ್ನಿಧ್ಯ ಕಲಶಾಭಿಷೇಕ, ಬ್ರಹ್ಮಕಲಶ ಪ್ರತಿಷ್ಠೆ, ಗಣಯಾಗ, ಪ್ರಧಾನಯಾಗ ನಡೆಯಿತು. ಬಳಿಕ ಬ್ರಹ್ಮಕಲಶಾಭಿಷೇಕ ಜರಗಿತು. ಬಳಿಕ ಬೊಬ್ಬರ್ಯ ದರ್ಶನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು.
ಬೊಬ್ಬರ್ಯ ಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶೇಖರ ತಿಂಗಳಾಯ ಬೀಚ್, ಕಾರ್ಯಾಧ್ಯಕ್ಷ ಆನಂದ ಟಿ. ಕೋಟ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷ ಜನಾರ್ದನ ತಿಂಗಳಾಯ, ಬಡಾನಿಡಿಯೂರು ಒಂದನೇ ಮೊಗವೀರ ಗ್ರಾಮ ಸಭೆಯ ಗುರಿಕಾರ ರಾಮ ಜೆ. ಸುವರ್ಣ, ತೊಟ್ಟಂ ಎರಡನೆಯ ಮೊಗವೀರ ಗ್ರಾಮಸಭೆಯ ಗುರಿಕಾರ ದಾಮೋದರ ಸಾಲ್ಯಾನ್, ಜೀರ್ಣೋದ್ಧಾರ ಮತ್ತು ಆಡಳಿತ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.