ಮಲ್ಪೆ: ಕಿದಿಯೂರು ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ವನದುರ್ಗಾ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ, ಶ್ರೀ ವನದುರ್ಗಾ ದೇವಿಗೆ ರಜತ ಪ್ರಭಾವಳಿ ಸಮರ್ಪಣೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮವು ಮೇ 9ರಿಂದ ಮೇ 13ರವರೆಗೆ ನಡೆಯಲಿದೆ.
ಮೇ 10ರಂದು ಸಂಜೆ 6ಕ್ಕೆ ನಾಡೋಜ ಡಾ| ಜಿ. ಶಂಕರ್ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನದ ಧರ್ಮದರ್ಶಿ ಡಾ| ನಿ. ಬಿ. ವಿಜಯ ಬಲ್ಲಾಳ್ ಶುಭಾಶಂಸನೆಗೈಯಲಿದ್ದಾರೆ. ಬ್ರಹ್ಮಕಲಶೋ ತ್ಸವ ಸಮಿತಿಯ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಮೇ 11ರಂದು ಬೆಳಗ್ಗೆ ಶ್ರೀ ವಿಷ್ಣು ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ಚಂಡಿಕಾ ಹೋಮ, ಪ್ರಾಯಶ್ಚಿತ್ತ ಹೋಮ, ನಾಗಬ್ರಹ್ಮಸ್ಥಾನದಲ್ಲಿ ಪವಮಾನ ಕಲಶಾಭಿಷೇಕ, ತಂಬಿಲ ಸೇವಾದಿ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಮಹಾರಂಗ ಪೂಜೆ ನಡೆಯಲಿದೆ. ರಾತ್ರಿ ಧಾರ್ಮಿಕ ಸಭೆ ನಡೆಯಲಿದೆ.
ಮೇ 12:ಬ್ರಹ್ಮಕುಂಭಾಭಿಷೇಕ ಅನ್ನಸಂತರ್ಪಣೆ
ಮೇ 12ರಂದು ಬೆಳಗ್ಗೆ ನಾಗಬನದಲ್ಲಿ ಆಶ್ಲೇಷ ಬಲಿ, ಪ್ರಧಾನ ಕಲಾ ಸಾನ್ನಿಧ್ಯ ಹೋಮ, ನವೋತ್ತರ ಶತಕಲಶಾರಾಧನೆ, ದೇವಿಗೆ 49 ಕಲಶಾರಾಧನೆ, ಮಿಥುನ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯ ಲಿದೆ. ಬಳಿಕ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಮೇ 13ರಂದು ಬೆಳಗ್ಗೆ 7ಕ್ಕೆ ಹರಕೆ ತುಲಾಭಾರ, 11ಕ್ಕೆ ಭಜನ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಹೂವಿನ ಪೂಜೆ, ಅಂದು ರಾತ್ರಿ 7ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ, ನಾಡೋಜ ಡಾ| ಜಿ. ಶಂಕರ್, ಕೆ. ಉದಯ ಕುಮಾರ್ ಶೆಟ್ಟಿ, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ರಾಮಚಂದ್ರ ಭಟ್, ವಾಸುದೇವ ಭಟ್ ಕಿದಿಯೂರು ಉಪಸ್ಥಿತರಿರಲಿದ್ದಾರೆ.
ಮೇ 9:ರಜತ ಪ್ರಭಾವಳಿ, ಹೊರೆಕಾಣಿಕೆ ಮೆರವಣಿಗೆ
ವನದುರ್ಗಾ ದೇವಿಗೆ ಸಮರ್ಪಿಸುವ ರಜತ ಪ್ರಭಾವಳಿ ಮತ್ತು ಹೊರೆಕಾಣಿಕೆ ಮೆರವಣಿಗೆಯು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಿಂದ ಶ್ರೀಕ್ಷೇತ್ರಕ್ಕೆ ಸಾಗಿ ಬರಲಿದೆ. ವಿವಿಧ ಸ್ತಬ್ದಚಿತ್ರ, ಚೆಂಡೆ, ವಾದ್ಯಘೋಷಗಳು, ವೇಷ ಭೂಷಣ, ಪೂರ್ಣಕುಂಭದ ನೂರಾರು ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ.
20ಸಾವಿರ ಮಂದಿ ನಿರೀಕ್ಷೆ
ಮೇ 12ರಂದು ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬರುವ ಎಲ್ಲ ಭಕ್ತರಿಗೂ ಶ್ರೀ ದೇವರ ಅನ್ನಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನಪ್ರಸಾದದೊಂದಿಗೆ ತಿರುಪತಿ ದೇವರ ಲಡ್ಡು , ಹಾಲು ಪಾಯಸ ನೀಡಲಾಗುತ್ತದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ , ಗೌರವಾಧ್ಯಕ್ಷ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಮೇ 9ರಂದು ಸಂಜೆ 6.30ಕ್ಕೆ ಉಡುಪಿ ಸೃಷ್ಟಿ ಕಲಾವಿದರಿಂದ ಸಂಗೀತ ರಸಮಂಜರಿ, ಮಿಮಿಕ್ರಿ ಕಾರ್ಯಕ್ರಮ, ಮೇ 10ರಂದು ಸಂಜೆ 6ಕ್ಕೆ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೀ ಸಂಗೀತ ಬಾಲಚಂದ್ರ ಮತ್ತು ಬಳಗದವರಿಂದ ಭಕ್ತಿಗಾನಸುಧೆ, ರಾತ್ರಿ 9ಕ್ಕೆ ಸಾಲಿಗ್ರಾಮ ಮೇಳದವರಿಂದ ದಕ್ಷಯಜ್ಞ -ನಾಗಶ್ರೀ ಯಕ್ಷಗಾನ ಬಯಲಾಟ, ಮೇ 11 ರಾತ್ರಿ 8ಕ್ಕೆ ಕಾಪು ರಂಗ ತರಂಗ ಕಲಾವಿದರಿಂದ ‘ಮೋಕೆ’ ತುಳು ಹಾಸ್ಯಮಯ ನಾಟಕ, ಮೇ 12ರಂದು ಮಧ್ಯಾಹ್ನ 12 ಪ್ರಸಿದ್ದ ಯಕ್ಷಗಾನ ಕಲಾವಿದರಿಂದ ಯಕ್ಷ – ಗಾನಮೃತ, ಮೇ 13ರಂದು ಸಂಜೆ ಕಿದಿಯೂರು ಸಂಕೇಶ ಶ್ರೀ ವಿಠೊಭ ಮಹಿಳಾ ಭಜನಾ ಸಮಿತಿಯ ಸದಸ್ಯರಿಂದ ಭೂತಾಳ ಪಾಂಡ್ಯ ನೃತ್ಯ ರೂಪಕ, ರಾತ್ರಿ 8.30ಕ್ಕೆ ಕಿದಿಯೂರು ಮೋಕೆದ ಕಲಾವಿದೆರ್ ಅಭಿನಯಿಸುವ ‘ಆಲ್ ಎನ್ನಾಲ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ.