ಮಲ್ಪೆ: ಜಿಲ್ಲೆಯ 3ನೇ ಹಿರಿಯ ಗಣೇಶೋತ್ಸವ ಎನಿಸಿಕೊಂಡಿ ರುವ ಕೊಡವೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಈ ಬಾರಿ 51ನೇ ಉತ್ಸವದವಸರದಲ್ಲಿದೆ.
50 ವರ್ಷಗಳ ಹಿಂದೆ ಕಾನಂಗಿ ಬಾಲಕೃಷ್ಣ ರಾವ್ ಅವರ ನೇತೃತ್ವದಲ್ಲಿ ಅಂದಿನ ಉತ್ಸಾಹಿ ಯುವಕರಾದ ಗೋವಿಂದ ಐತಾಳ್, ಕಾಂತಪ್ಪ ಕರ್ಕೇರ, ಕೃಷ್ಣಮೂರ್ತಿ ರಾವ್, ಕಾಳು ಸೇರಿಗಾರ್, ಭಾಸ್ಕರ್ ಭಟ್ ಅಗ್ರಹಾರ, ಉಮೇಶ್ ರಾವ್, ರವಿ ಎಂ.ಕೆ., ಗಣೇಶ್ ರಾವ್, ವಸಂತ್ ಸಿ. ರಾವ್ ಅವರು ಒಗ್ಗೂಡಿಕೊಂಡು ಕೊಡವೂರು ಶಾಲೆಯಲ್ಲಿ ಗಣೇಶೋತ್ಸವವನ್ನು ಪ್ರಾರಂಭಿಸಿದರು.
ಕೊಡವೂರು ಪೇಟೆ ಹಾಗೂ ಇತ್ತೀಚಿನ ವರ್ಷಗಳಿಂದ ಕೊಡವೂರು ಶಾಲಾ ವಠಾರದಲ್ಲಿ ನಡೆಸಿಕೊಂಡು ಬರುತ್ತಿದ್ದು ಕಳೆದ ವರ್ಷ ಸುವರ್ಣ ಸಂಭ್ರಮದ ಆಚರಣೆಯನ್ನು ಶ್ರೀ ದೇಗುಲದ ಮುಂಭಾಗದಲ್ಲಿ ನಡೆಸಲಾಗಿದೆ. ಈ ಬಾರಿಯೂ ಅದೇ ಸ್ಥಳದಲ್ಲಿ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಇಲ್ಲಿನ ಗಣೇಶೋತ್ಸವವು ಪ್ರಾರಂಭದ 15 ವರ್ಷಗಳಲ್ಲಿ ಇಲ್ಲಿನ ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ವತಿಯಿಂದ ನಡೆಯುತ್ತಿತ್ತು. ಅನಂತರ ದಿ| ಬಿ. ವಾಸು ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆಗೊಂಡು ಅಂದಿನಿಂದ ಸಮಿತಿಯ ಮೂಲಕ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು, ಊರಿನ ಸಂಘ ಸಂಸ್ಥೆಗಳು ಹಾಗೂ ಭಕ್ತರ ಸಹಕಾರದಿಂದ ಉತ್ತಮ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾ, ಬರುತ್ತಿದ್ದು, ಕಳೆದ ಬಾರಿ 50ನೇ ವರ್ಷದ ಸುವರ್ಣ ಸಂಭ್ರಮದ ಪ್ರಯುಕ್ತ ಸಮಾಜಮುಖೀ ಸೇವೆಯೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು 5 ದಿನಗಳ ಪರ್ಯಂತ ನಡೆಸಲಾಗಿದೆ.
ಎಲ್ಲ ಜಾತಿ, ಧರ್ಮದವರನ್ನು ಗಣೇಶೋತ್ಸವ ಸಮಿತಿಯಲ್ಲಿ ಸೇರಿಸಿ ಕೊಂಡು, ಪುಣ್ಯಪ್ರದವಾದ ಧಾರ್ಮಿಕದ ಜತೆಗೆ ಆರ್ಥಿಕ ಅಶಕ್ತರಿಗೆ ವೈದ್ಯಕೀಯ ನೆರವು, ಆರ್ಥಿಕ ಅಶಕ್ತರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ, ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಊರಿನ ಜನತೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ಪ್ರತಿವರ್ಷ ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತದೆ.
ಕಡಿಯಾಳಿ, ಪರ್ಕಳ ಗಣೇಶೋತ್ಸವದ ಸಾಲಿನಲ್ಲಿ ಜಿಲ್ಲೆಯ 3ನೇ ಹಿರಿಯ ಗಣೇಶೋತ್ಸವ ಎನಿಸಿಕೊಂಡಿರುವ ಕೊಡ ವೂರಿನ ಸಾರ್ವಜನಿಕ ಗಣೇಶೋತ್ಸವ ದಲ್ಲಿ ಊರಿನ ಎಲ್ಲರೂ ಶ್ರದ್ಧಾಭಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರಸ್ತುತ ಗಣೇಶೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್, ರತ್ನಾಕರ್ ಅಮೀನ್, ಅಧ್ಯಕ್ಷ ಹರೀಶ್ ಕೊಡವೂರು, ಕಾರ್ಯದರ್ಶಿ ಸತೀಶ್ ಕೊಡವೂರು, ಕೋಶಾಧಿಕಾರಿ ಶ್ರೀನಿವಾಸ್ ಬಾಯರಿ ಸೇವೆ ಸಲ್ಲಿಸುತ್ತಿದ್ದಾರೆ.