ಮಲ್ಪೆ : ಮೀನುಗಾರ ಸಮುದಾಯ ಕರಾವಳಿಯ ಉದ್ದಕ್ಕೂ ಇದ್ದು ಅವರ ದೇಶಭಕ್ತಿಯಿಂದಾಗಿ ಕರಾವಳಿ ತೀರ ಇಂದು ಸುರಕ್ಷಿತವಾಗಿದೆ. ಮಹಾಗೋಡೆ ಚೀನವನ್ನು ರಕ್ಷಣೆ ಮಾಡುವಂತೆ ಮೀನುಗಾರರ ಪಡೆ ಕರಾವಳಿಯನ್ನು ನಿರಂತರ ರಕ್ಷಣೆ ಮಾಡುತ್ತದೆ ಎಂದು ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಶ್ರೀ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಮಲ್ಪೆ ಕಡಲತೀರ ಶ್ರೀ ಜ್ಞಾನಜ್ಯೋತಿ ಭಜನ ಮಂದಿರದಲ್ಲಿ ನಡೆದ ಅಖಂಡ ಭಜನ ಸಪ್ತಾಹ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕರಾವಳಿಯ ಇತರ ಕಡೆ ಸುನಾಮಿ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೂ ರಾಜ್ಯದ ಕರಾವಳಿ ತೀರದಲ್ಲಿ ಅಂತಹ ಯಾವುದೇ ಅವಘಡ ಸಂಭವಿಸಿಲ್ಲ. ಇದಕ್ಕೆ ಕಾರಣ ಇಲ್ಲಿ ನಿತ್ಯ ನಡೆಯುವ ಭಜನೆ. ಇಲ್ಲಿನ ಭಜನ ತರಂಗವು ಸುನಾಮಿ ತರಂಗವನ್ನು ದೂರ ಸರಿಸುವಂತೆ ಮಾಡಿದೆ ಎಂದರು.
ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಮಾತನಾಡಿ, ಈ ಬಾರಿ ಮೀನಿನ ಬರದಿಂದಾಗಿ ಮೀನುಗಾರರು ಕೆಂಗೆಟ್ಟಿದ್ದಾರೆ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳಿಗೆ ಕೆಲಸ ಇಲ್ಲದಂತಾಗಿದೆ. ಸಮುದ್ರರಾಜನು ಮತ್ರ್ಯಕ್ಷಾಮವನ್ನು ದೂರ ಮಾಡಿ ಹೇರಳ ಮತ್ರ್ಯ ಸಂಪತ್ತು ಲಭಿಸುವಂತೆ ಅನುಗ್ರಹಿಸಲಿ ಎಂದರು.
ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಮೀನು ವ್ಯಾಪಾರಸ್ಥರ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಡೀಪ್ಸೀ ಟ್ರಾಲ್ಬೋಟ್ ಸಂಘದ ಮಾಜಿ ಅಧ್ಯಕ್ಷ ವಿಠ್ಠಲ ಕರ್ಕೇರ, ಡೀಪ್ಸೀ ತಾಂಡೇಲ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಹಿಳಾ ಮೀನುಗಾರ ಸಂಘದ ಅಧ್ಯಕ್ಷೆ ಜಲಜಾ ಕೋಟ್ಯಾನ್, ಸನಾತನ ಸಂಸ್ಥೆಯ ವಿಜಯ ಕುಮಾರ್, ಜ್ಞಾನಜ್ಯೋತಿ ಭಜನ ಮಂದಿರದ ಅಧ್ಯಕ್ಷ ಧನಂಜಯ ಕುಂದರ್, ಚಂದ್ರಾವತಿ ಗಂಗಾಧರ್ ಉಪಸ್ಥಿತರಿದ್ದರು. ಪಾಂಡುರಂಗ ಮಲ್ಪೆ ಸ್ವಾಗತಿಸಿ, ವಂದಿಸಿದರು.