ಮಲ್ಪೆ: ತೆಂಕನಿಡಿಯೂರು ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವು ಭಕ್ತ ಜನರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ ಶ್ರೀ ದೇವರಿಗೆ ನವಕ ಪ್ರಧಾನಾದಿಗಳು, ಮಧ್ಯಾಹ್ನ ರಥಾರೋಹಣವಾಗಿ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾರಥೋತ್ಸವ ನಡೆಯಿತು.
ವಿವಿಧ ವಾದ್ಯ ಘೋಷ, ವೇಷಭೂಷಣಗಳೊಂದಿಗೆ ರಥವು ಸಾಗಿಬಂತು. ಆ ಬಳಿಕ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸಂದರ್ಶನ ಬಲಿ ಸೇವಾದಿಗಳು ತಂಬಿಲ ಮಹಾಭೂತಬಲಿ ನಡೆಯಿತು. ಮರುದಿನ ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಬಲಿಕಟ್ಟೆ, ಅವಭೃತ ಸ್ನಾನ, ಪ್ರಸಾದ ವಿತರಣೆ ಮಾಡಲಾಯಿತು. ದೇಗುಲದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಮೊಕ್ತೇಸರರು, ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.