Home ಧಾರ್ಮಿಕ ಸುದ್ದಿ ಸಮೃದ್ಧಿಯ ಸಂಕೇತ – ಸಾಧನೆಗೆ ಪ್ರಶಸ್ತ ! ಮಕರಸಂಕ್ರಾಂತಿ – ಸರ್ವದೇವೋತ್ತರಾಯಣೆ ಆರಂಭ !

ಸಮೃದ್ಧಿಯ ಸಂಕೇತ – ಸಾಧನೆಗೆ ಪ್ರಶಸ್ತ ! ಮಕರಸಂಕ್ರಾಂತಿ – ಸರ್ವದೇವೋತ್ತರಾಯಣೆ ಆರಂಭ !

1667
0
SHARE

ಜಲಂಚಾರು ರಘುಪತಿ ತಂತ್ರಿ, ಉಡುಪಿ

ಸಂಕ್ರಾಂತಿ, ಪೊಂಗಲ್‌, ಬಿಹು ಮತ್ತು ಲೋಹ್ರಿ ಇತ್ಯಾದಿ ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಈ ಹಬ್ಬ ಚಳಿಗಾಲ ಮುಗಿದು ವಸಂತಋತು ಮತ್ತು ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷ ಹಬ್ಬವಾಗಿದೆ. ಇದು ಸೂರ್ಯಾರಾಧನೆಯ ಹಬ್ಬವೂ ಹೌದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಸಂಧಿಕಾಲ. ಸಂಕ್ರಾಂತಿ, ಸಂಕ್ರಮಣ. ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿಯಿದೆ. ಉತ್ತರಾಯಣದಲ್ಲಿ ಸೂರ್ಯ ದಕ್ಷಿಣದಿಂದ ಉತ್ತರದತ್ತ ಪಥ ಬದಲಾಯಿಸುತ್ತಾನೆ. ಆದರೆ ದಕ್ಷಿಣಾಯನ ಆರಂಭದ ಕರ್ಕಾಟಕ ಸಂಕ್ರಮಣ ಮತ್ತು ಉತ್ತರಾಯಣ ಆರಂಭದ ಮಕರ ಸಂಕ್ರಾಂತಿ ಅತಿ ವಿಶೇಷವೆಂದು ಪರಿಗಣಿಸಲ್ಪಟ್ಟಿದೆ. ಉತ್ತರಾಯಣದ ಪುಣ್ಯ ಕಾಲ ದೇವತೆಗಳ ಕಾಲ. ದಕ್ಷಿಣಾಯನ ಪಿತೃಗಳ ಕಾಲ. ಪ್ರತಿಯೊಂದು ಸಂಕ್ರಾಂತಿ ಕಾಲ ಪುಣ್ಯಕಾಲವೇ ಎಂದು ಶಾಸ್ತ್ರಕಾರರ ಅಭಿಮತ. ಮೇಷ, ತುಲಾ ಸಂಕ್ರಾಂತಿಗಳು ವಿಷುವತ್‌ ಪುಣ್ಯಕಾಲ. ವೃಷಭ, ಸಿಂಹ, ವೃಶ್ಚಿಕ, ಕುಂಭ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ. ಮಿಥುನ, ಕನ್ಯಾ. ಧನು ಮತ್ತು ಮೀನ ಸಂಕ್ರಾಂತಿ ಷಡಶೀತಿ ಪುಣ್ಯಕಾಲ. ಕಟಕ ಸಂಕ್ರಾಂತಿ ದಕ್ಷಿಣಾಯಣ ಪುಣ್ಯಕಾಲ. ಮಕರ ಸಂಕ್ರಾಂತಿ ಉತ್ತರಾಯಣ ಪುಣ್ಯಕಾಲ. ವಿಷ್ಣುಪದ ಪುಣ್ಯಕಾಲಕ್ಕಿಂತ, ಷಡಶೀತಿ ಪುಣ್ಯಕಾಲ ಉತ್ತಮ. ಷಡಶೀತಿಗಿಂತ ವಿಷ್ಣುವತ್‌ ಪುಣ್ಯಕಾಲ ಶ್ರೇಷ್ಠ, ವಿಷ್ಣುವತ್‌ಗಿಂತ ಆಯಣ ಪುಣ್ಯಕಾಲ ಶ್ರೇಷ್ಠ. ದಕ್ಷಿಣಾಯಣಕ್ಕಿಂತ ಉತ್ತರಾಯಣ ಪುಣ್ಯಕಾಲ ಶ್ರೇಷ್ಠ.

ನದಿ ಸ್ನಾನ, ದೇವತೆಗಳು, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ ಹವನ, ದಾನ, ಜಪಗಳಿಗೆ ಪ್ರಶಸ್ತ ಸಂಕ್ರಾಂತಿ ಪುಣ್ಯಕಾಲ. ಸೂರ್ಯ ಪಥವೇ ಆಯನ. ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಂಬಿಕೆ. ಶ್ರೀರಾಮ ರಾವಣ ವಧೆಯನ್ನು ಮಾಡಿ ಸೀತೆಯನ್ನು ತಂದ ದಿನ. ನಮ್ಮನ್ನು ಬಿಟ್ಟಗಲಿದ ಪಿತೃಗಳು ನಮ್ಮ ಮನೆಗೆ ಬಂದಿಳಿಯುತ್ತಾರೆ ಎಂದು ಪ್ರತೀತಿ.

ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃ

ತಿಲಾ ದೇಯಾಶ್ಚ ಪ್ರೇಭ್ಯೌ ಸರ್ವದೇವೋತ್ತರಾಯಣೇ

ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃ

ಸಂಕ್ರಾಂತಿ ಹಬ್ಬದ ಮಹತ್ವವನ್ನು ನಿರ್ಣಯಸಿಂಧು ಹೀಗೆ ತಿಳಿಸುತ್ತದೆ. ಕಪ್ಪು ಎಳ್ಳಿನೊಂದಿಗೆ ಸ್ನಾನ, ಬ್ರಾಹ್ಮಣರಿಗೆ ಎಳ್ಳುದಾನ, ದೇವಾಲಯಗಳಲ್ಲಿ ಎಣ್ಣೆ ದೀಪ ಉರಿಸುವುದು.

ಶಿಸಂಕ್ರಾಂತೌ ಯಾನಿ ದತ್ತಾನಿ ಹವ್ಯ ಕವ್ಯಾನಿ ದಾತೃಭಿಃ

ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ |

ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇ

ಉತ್ತರಾಯಣದ ಪರ್ವದಂದು ಮಾಡಿದ ದಾನಧರ್ಮಗಳು ಜನ್ಮಜನ್ಮಾಂತರದಲ್ಲೂ ನಮಗೆ ದೊರಕುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ದಿನದಂದು ತಿಲದಾನ, ತಿಲಹೋಮ, ತಿಲ ಭಕ್ಷಣಕ್ಕೆ ವಿಶೇಷ ಮಹತ್ವವಿದೆ ಎಂದು ಧರ್ಮಸಿಂಧು ನಿರ್ಣಯ.

ಎಳ್ಳು ಬೆಲ್ಲ ಸೇವಿಸಿ, ಕಹಿ ಭಾವನೆಗಳನ್ನು ಮರೆತು ಸಿಹಿ ಭಾವನೆಗಳೊಂದಿಗೆ ಬದುಕನ್ನು ಸದಾ ಸಿಹಿಯಾಗಿಸೋಣ, ಚೈತನ್ಯದಾಯಕವಾಗಿಸೋಣ ಎಂಬುದೇ ಈ ಹಬ್ಬದ ಅನುಸಂಧಾನ. ಅಮೃತಪುತ್ರರಾಗೋಣ ಎಂದೇ ಸಂದೇಶ. ಶೀತ ವಾತದಿಂದ ಉಂಟಾಗುವ ದೇಹಾಲಸ್ಯವನ್ನು ಪರಿಹರಿಸುವ ದಿವ್ಯ ಔಷಧಿ ಎಳ್ಳು ಬೆಲ್ಲ.

ಸಂಕ್ರಾಂತಿಯು ಸೃಷ್ಟಿಕೃತಿಯೊಂದಿಗೆ ಅನನ್ಯತೆಯನ್ನು ಅನುಭವಿಸುವ, ನಿಸ್ವಾರ್ಥವನ್ನು ಕಲಿಯುವ, ಪ್ರೀತಿಯ ದಾರಿಯನ್ನು ಕಾಣುವ, ಪರಿಶುದ್ಧತೆ, ಮತ್ತು ಕ್ಷಮತೆಯ ಪವಿತ್ರ ಕಾಲವಾಗಿದೆ.

ಹಿಂದುಗಳ ನಂಬುಗೆಯಂತೆ ಸೂರ್ಯ ಜ್ಞಾನದ ಪ್ರತೀಕ. ಆಧ್ಯಾತ್ಮದ ಬೆಳಕು. ಮೋಹ, ಭ್ರಾಂತಿಯೆಂಬ ಕತ್ತಲೆಯಲ್ಲಿ ಬದುಕುತ್ತಿರುವ ನಾವು, ನಮ್ಮೊಳಗಿನ ಜ್ಞಾನವೆಂಬ ದೀಪವನ್ನು ಉಜ್ವಲವಾಗಿ ಬೆಳಗುವಂತೆ ಮಾಡಬೇಕು ಎಂಬುದೇ ಮಕರಸಂಕ್ರಾಂತಿಯ ಸಂದೇಶ. ಉತ್ತರ, ವೃದ್ಧಿಯ ಸಂಕೇತ. ಈ ದಿನದಂದು, ಸೂರ್ಯ ಉತ್ತರದತ್ತ ಪಯಣಿಸುವಂತೆ, ನಾವು ತ್ರಿಕರಣ ಶುದ್ಧಿಗಳಾಗಬೇಕು. ಜ್ಞಾನಿ, ವಿವೇಕಿಗಳಾಗಬೇಕು. ಸೂರ್ಯ ಎಲ್ಲ ಆದರ್ಶಗಳ ಪ್ರತೀಕ. ಬೆಳಕು, ಐಕ್ಯತೆ, ಸಮಾನತೆ, ಸ್ವಾರ್ಥರತತೆಯ ಸಂಕೇತ. ಇವೇ ಕರ್ಮಯೋಗಿಯ ಗುಣಗಳು. ಸೂರ್ಯ ಅತ್ಯಂತ ಶ್ರೇಷ್ಠ ಕರ್ಮಯೋಗಿ. ಎಲ್ಲವನ್ನು ನೀಡುವ ಸೂರ್ಯ ಎಂದಾದರೂ ಪ್ರತಿಫ‌ಲಾಪೇಕ್ಷೆಯನ್ನು ನಿರೀಕ್ಷಿಸುವನೇ?

ಮಕರಸಂಕ್ರಾಂತಿಯ ದಿವಸ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ನಮ್ಮ ಸುತ್ತಲಿನ ವಾತಾವರಣವು ಅಪರಿಮಿತ ಚೈತನ್ಯದಿಂದ ಕೂಡಿರುತ್ತದೆ. ಸಾಧನಾ ಶರೀರಿಯು ಅಂದು ತೀರ್ಥಸ್ನಾನ, ದಾನ ಜಪತಪ ಪೂಜೆಯಿಂದ ಗರಿಷ್ಠ ಪುಣ್ಯವನ್ನು ಸಂಪಾದಿಸಬಹುದು. ತನ್ನ ತೇಜತ್ವವನ್ನು ವೃದ್ಧಿಸಿಕೊಳ್ಳಬಹುದು. ಎಳ್ಳು ಬೆಲ್ಲಕ್ಕೆ ಸಾತ್ವಿಕ ತರಂಗಗಳನ್ನು ಹೀರಿಕೊಳ್ಳುವ ಮತ್ತು ಹೊರಸೂಸುವ ವಿಶಿಷ್ಟ ಗುಣವಿದೆ. ಅದನ್ನು ಸೇವಿಸಿದರೆ ಅಂತರ್‌ ಶುದ್ದಿಯಾಗುತ್ತದೆ. ಅಂತರ್‌ ಶುದ್ಧಿಯಿಂದ ಸಾಧನಾ ಸಾಮರ್ಥ್ಯವೂ ಹೆಚ್ಚುತ್ತದೆ. ಎಳ್ಳುಬೆಲ್ಲ ವಿನಿಮಯದಿಂದ ಸಾತ್ವಿಕಗುಣಗಳೂ ವಿನಿಮಯಗೊಳ್ಳುತ್ತವೆ. ಚಳಿಗಾಲದಲ್ಲಿ ಎಳ್ಳು ಸೇವನೆ ಆರೋಗ್ಯಕ್ಕೂ ಒಳ್ಳೆಯದು ಎಂದು ಆಯುರ್ವೇದದ ಸಲಹೆ. ಮತ್ತೂಂದು ಅರ್ಥದಲ್ಲಿ ಎಳ್ಳು ಬೆಲ್ಲ ವಿನಿಮಯ ಋಣಮುಕ್ತರಾಗುವುದು ಎಂಬ ಸೂಚನೆ.

ಸೂರ್ಯಮಂತ್ರ ಜಪ ಮಕರ ಸಂಕ್ರಾಂತಿಯಂದು ಅತಿ ವಿಶೇಷ. ಓಂ ಹ್ರೀಮ್‌ಹಿ ್ರೕಮ್‌ ಹ್ರೋಂ ಸಹ ಸೂರ್ಯಾಯ ನಮಃ |

ಭಾರತದ ಅನೇಕ ಭಾಗಗಳಲ್ಲದೆ, ನೇಪಾಳ, ಮಯನ್ಮಾರ್‌, ಕ್ಯಾಂಬೋಡಿಯಾ ಮತ್ತು ಶ್ರೀಲಂಕಾದಲ್ಲೂ ಮಕರಸಂಕ್ರಾಂತಿಯು ಆಚರಿಸಲ್ಪಡುತ್ತದೆ.

ಮಕರಸಂಕ್ರಾಂತಿಯು ಕಹಿ ಮತ್ತು ದುಃಖದ ಕ್ಷಣಗಳನ್ನು ಮರೆಯುವ ದಿನ. ಹೊಸವರ್ಷವನ್ನು ಸ್ವಾಗತಿಸುವ ದಿನ. ಶುಭಕಾರ್ಯಗಳಿಗೆ ನಾಂದಿ ಮಕರಮಾಸದಾರಂಭ. ಧನಾತ್ಮಕ ಪರಿವರ್ತನೆಗೆ ನಾಂದಿಹಾಡುವ ಹಬ್ಬ.

ಮಕರಸಂಕ್ರಾಂತಿಯಂದು ಗೋಪೂಜೆ ಮಾಡಿದರೆ ಪಿತೃದೋಷ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here