ಕಡಬ : ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 6ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ನೇಮ ಜರಗಿತು.
ಫೆ. 15ರ ರಾತ್ರಿ ದೈವಗಳ ಭಂಡಾರ ತೆಗೆದು ಶ್ರೀ ಉಳ್ಳಾಕ್ಲು, ಉಳ್ಳಾಲ್ತಿ, ಪುರುಷ ದೈವ, ಪಟ್ಟಂದೈವ, ವ್ಯಾಘ್ರ ಚಾಮುಂಡಿ, ಪಂಜುರ್ಲಿ, ಪರಿವಾರ ದೈವಗಳ ನೇಮ ನೆರವೇರಿತು. ಫೆ. 16ರ ಬೆಳಗ್ಗೆ ಶ್ರೀ ಉಳ್ಳಾಕ್ಲು ರಾಜನ್ ದೈವದ ನೇಮ ಜರಗಿತು. ಬಳಿಕ ಊರ ಪರವೂರ ಭಕ್ತಾಧಿಗಳಿಂದ ಹರಕೆ ಪ್ರಾರ್ಥನೆ ನಡೆಯಿತು.
ಮುತ್ತ ಅಜಲ ಐತ್ತೂರು ಅವರು ಶ್ರೀ ರಾಜನ್ ದೈವದ ನರ್ತನ ನೆರವೇರಿಸಿದರು. ಪುತ್ತೂರಿನ ಪ್ರಶಾಂತ್ ನೆಲ್ಲಿತ್ತಾಯ ಬಲ್ಲಾಡು ದೈವದ ಮಧ್ಯಸ್ಥಿಗೆ ನಡೆಸಿದರು. ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೈವಜ್ಞ ಕೆ. ಪ್ರಸಾದ ಕೆದಿಲಾಯ ಭಕ್ತಾದಿಗಳ ಬೇಡಿಕೆಯನ್ನು ದೈವಗಳ ಮುಂದೆ ಪ್ರಾರ್ಥಿಸಿಕೊಂಡರು. ಆಡಳಿತ ಮಂಡಳಿ ಕಾರ್ಯದರ್ಶಿ ಸುದರ್ಶನ ಗೌಡ ಕೋಡಿಂಬಾಳ, ಕೋಶಾಧಿಕಾರಿ ವಸಂತ ಗೌಡ ಪಡೆಜ್ಜಾರು, ತಮ್ಮಯ್ಯ ಗೌಡ ಕುತ್ಯಾಡಿ ಹಾಗೂ ದೈವದ ಪರಿಚಾರಕ ವರ್ಗದವರು ಸಹಕರಿಸಿದರು.