ಮಹಾನಗರ: ನಗರದ ಹವ್ಯಕ ಬಂಧುಗಳು ಮಹಾರುದ್ರ ಸಮಿತಿಯನ್ನು ರಚಿಸಿ ಎಲ್ಲ ವಿಪ್ರರನ್ನೂ ಸೇರಿಸಿ ಇತ್ತೀಚೆಗೆ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಮಹಾರುದ್ರ ಯಾಗ ನಡೆಸಲಾಯಿತು.
ರುದ್ರಾಧ್ಯಾಯ ಮಾಡಿದ 150ಕ್ಕೂ ಹೆಚ್ಚು ವಿಪ್ರರು ಸೇರಿ ಶ್ರದ್ಧಾ ಭಕ್ತಿಗಳಿಂದ ಈ ಯಾಗವನ್ನು ಮಾಡಿದರು. ಮಹಾ ರುದ್ರ ಯಾಗವೆಂದರೆ 121 ಜನ ಸೇರಿ 11 ಬಾರಿ ರುದ್ರಜಪವನ್ನು ಪಠಿಸುತ್ತ ಯಾಗ ಮಾಡುವುದು. ಯಾಗವನ್ನು ವೇ| ಮೂ| ಅಮೈ ಶಿವಪ್ರಸಾದ ವೃಂದದವರು ನಿರ್ವಹಿಸಿದರು. ಅನಂತರ ರುದ್ರಪೂಜೆ, ಹಿಂದಿನ ದಿನ ರಾತ್ರಿ ದುರ್ಗಾ ಪೂಜೆ ಹಾಗೂ ಸಪ್ತಶತೀ ಪಾರಾಯಣ ನಡೆಯಿತು.
ಧರ್ಮ ಚಿಂತನೆ
ಧರ್ಮ ಚಿಂತನೆಯನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವೇ| ಮೂ| ಅಮೈ ಸುಬ್ರಮಹ್ಮಣ್ಯ ಕುಮಾರ ನಡೆಸಿದರು. ರುದ್ರಾ ಜಪವನ್ನು ನಿತ್ಯವೂ ಪಠಿಸುವುದರಿಂದ ದೈಹಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಒಳ್ಳೆಯದು. ರುದ್ರ ಐಹಿಕ ಸುಖಕ್ಕಿಂತಲೂ ಪಾರಮಾರ್ಥಿಕ ಸುಖ ನೀಡುವವನು ಎಂದು ಹೇಳಿದರು.ಉತ್ತರಕಾಶಿಯ ಶ್ರೀ ರಾಮಚಂದ್ರ ಗುರೂಜಿ ಆಶೀರ್ವಚನ ನೀಡಿ, ಹಿಂದೂ ಗಳೆಲ್ಲರೂ ಒಂದಾಗದಿದ್ದಲ್ಲಿ ದೇಶಕ್ಕೆ ಕಂಟಕ ಎಂದರು.
ನಿತ್ಯವೂ ವೇದ ಪಠಿಸಿ
ಶ್ರೀ ರಾಘವೇಶ್ವರ ಸ್ವಾಮೀಜಿ ಅವರು ತಮ್ಮ ಶಿಷ್ಯರು ರುದ್ರಾಭ್ಯಾಸ ಮಾಡಿ ‘ವೇದೋ ನಿತ್ಯಮಧೀಯತಾಂ’ ಎಂಬ ಶಂಕರ ಭಗವತ್ಪಾದರ ನುಡಿಯಂತೆ ನಿತ್ಯವೂ ವೇದವನ್ನು ಪಠಿಸಬೇಕು ಹಾಗೂ ವೇದದಲ್ಲಿ ಹೇಳಿದಂತೆ ನಡೆದುಕೊಳ್ಳಬೇಕು ಎಂದರು. ಸಮಿತಿಯ ಅಧ್ಯಕ್ಷ ಡಾ| ಈಶ್ವರ ಭಟ್ ಪಳ್ಳಾದೆ ಸ್ವಾಗತಿಸಿದರು.ವೇಣುಗೋಪಾಲ ಭಟ್ ಮಾಂಬಾಡಿ ವಂದಿಸಿದರು. ಶ್ರೀ ಮಠದ ಮಾತೃ ಶಾಖೆಯವರು ಕುಂಕುಮಾರ್ಚನೆ ನಡೆಸಿದರಲ್ಲದೆ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.