Home ಧಾರ್ಮಿಕ ಸುದ್ದಿ ಮಹಾಲಿಂಗೇಶ್ವರ ದೇವರ ಕೊಡಿಮರಕ್ಕೆ ಚಿನ್ನದ ಕವಚ!

ಮಹಾಲಿಂಗೇಶ್ವರ ದೇವರ ಕೊಡಿಮರಕ್ಕೆ ಚಿನ್ನದ ಕವಚ!

3190
0
SHARE

ಪುತ್ತೂರು ಡಿ. 21: ಪುತ್ತೂರು ಸೀಮೆಯ ಒಡೆಯ, ಲಕ್ಷಾಂತರ ಭಕ್ತರ ಆರಾಧ್ಯಮೂರ್ತಿ ಶ್ರೀ ಮಹಾಲಿಂಗೇಶ್ವರ ದೇಗುಲದ ಕೊಡಿಮರ ಸ್ವರ್ಣ ಕವಚದಿಂದ ಇನ್ನಷ್ಟು ಕಂಗೊಳಿಸಲಿದೆ. ದೇವರ ಅನುಗ್ರಹ ಪ್ರಾಪ್ತಿಯಾದರೆ ದೇಗುಲದ ಕೊಡಿಮರಕ್ಕೆ ಕಂಚಿನ ಬದಲು ಚಿನ್ನದ ಕವಚ ಅಳವಡಿಕೆ ಆಗಲಿದೆ. ಹಲವು ಭಕ್ತರು ಇಂಗಿತ ವ್ಯಕ್ತಪಡಿಸಿದ್ದು, ವ್ಯವಸ್ಥಾನ ಸಮಿತಿಯೂ ಆಸಕ್ತಿ ವಹಿಸಿದೆ. ದೇಗುಲದ ಕೊಡಿಮರಕ್ಕಾಗಿ 65 ಅಡಿ ಕಿರಾಲ್‌ಬೋಗಿ ಮರವನ್ನು ಕುಕ್ಕುಜಡ್ಕ ಆನೆಕಾರಿನಿಂದ ಅ. 29ಕ್ಕೆ ತರಲಾಗಿತ್ತು. ಮರಕ್ಕೆ ತೈಲಾಭ್ಯಂಜನ ನಡೆಸಿ ಈಗ ತೈಲದಲ್ಲಿ ಹಾಕಿ ಇಡಲಾಗಿದೆ. 48 ದಿನಗಳ ಬಳಿಕ ಕೊಡಿಮರ ಅಳವಡಿಕೆ ಕೆಲಸ ನಡೆಯಲಿದೆ. ಎ. 10ರ ಬಳಿಕ ನಡೆಯುವ ಪುತ್ತೂರು ಜಾತ್ರೆಗೆ ಮುಂಚಿತವಾಗಿ ಕೊಡಿಮರವನ್ನು ಅಳವಡಿಸುವ ಉದ್ದೇಶವನ್ನು ದೇಗುಲದ ಆಡಳಿತ ಮಂಡಳಿ ಹೊಂದಿದೆ.

ಕವಚ ಬದಲಾವಣೆ
ಹಿಂದೆ ದೇಗುಲದಲ್ಲಿ ಕೊಡಿಮರ ಮಾತ್ರ ಇದ್ದು, ಅನಂತರದಲ್ಲಿ ತಾಮ್ರದ ಕವಚವನ್ನು ಅಳವಡಿಸಲಾಗಿತ್ತು. 2013ರಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಕೊಡಿಮರಕ್ಕೆ ಕಂಚಿನ ಕವಚವನ್ನು ಅಳವಡಿಸಲಾಗಿತ್ತು. ಐದು ವರ್ಷಗಳ ಬಳಿಕ ಪ್ರಶ್ನಾಚಿಂತನೆ ನಡೆಸಿ ಕೊಡಿಮರದ ಬದಲಾವಣೆ ಮಾಡಲಾ ಗುತ್ತಿದ್ದು, ಚಿನ್ನದ ಕವಚವನ್ನು ಅಳವಡಿಸುವ ಪ್ರಸ್ತಾವನೆ ಮುನ್ನಲೆಗೆ ಬಂದಿದೆ.

1. 50 ಕೋಟಿ ರೂ. ಕೊಡಿಮರಕ್ಕೆ ಚಿನ್ನದ ಕವಚ ಅಳವಡಿ ಸಲು ಸುಮಾರು 3.75 ಕೆ.ಜಿ. ಚಿನ್ನ ಬೇಕಾಗಬಹುದು. ಒಟ್ಟು ಚಿನ್ನದ ಕವಚ ಅಳವಡಿಕೆಗೆ ಅಂದಾಜು ಸುಮಾರು 1.50 ಕೋಟಿ ರೂ. ವೆಚ್ಚವಾಗಬಹುದು ಎಂದು ವಾಸ್ತುತಜ್ಞ ಪಿ.ಜಿ. ಜಗನ್ನಿವಾಸ್‌ ರಾವ್‌ ಹೇಳಿದ್ದಾರೆ.

ಇಲ್ಲಿ ಎಲ್ಲವೂ ಸಾಧ್ಯ
ಮಹತೋಭಾರ ಮಹಾಲಿಂಗೇಶ್ವರ ದೇಗುಲದ ಪುನರ್‌ ನಿರ್ಮಾಣ ಕಾರ್ಯ 2012ರಲ್ಲಿ ಆರಂಭಗೊಂಡು ಸಾವಿರಾರು ಭಕ್ತರ ಅಭೂತಪೂರ್ವ ಕರಸೇವೆಯೊಂದಿಗೆ ಕೇವಲ 327 ದಿನಗಳಲ್ಲಿ ಪೂರ್ಣಗೊಂಡು 2013ರ ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ದಾನಿಗಳು, ಭಕ್ತರ ಸಹಕಾರದೊಂದಿಗೆ ದೇಗುಲದ ಪುನರ್‌ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವವು ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು. ಈಗ ಕೊಡಿಮರಕ್ಕೆ ಸ್ವರ್ಣ ಕವಚ ಅಳವಡಿಕೆ ಸಂಬಂಧಿಸಿದಂತೆಯೂ ಭಕ್ತರು ಮನಸ್ಸು ಮಾಡಿದರೆ ವೇಗವಾಗಿ ನಡೆಯಬಹುದು ಎನ್ನುವುದು ಎಲ್ಲರ ಅಭಿಪ್ರಾಯ.

ಭಕ್ತರ ಇಂಗಿತ ಈಡೇರಬಹುದು
ಅತ್ಯಂತ ಕಾರಣಿಕ ಶಕ್ತಿಯನ್ನು ಹೊಂದಿರುವ ಪುತ್ತೂರು ಮಹಾಲಿಂಗೇಶ್ವರನಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ದೇಗುಲದ ಪುನರ್‌ನಿರ್ಮಾಣ ಕಾರ್ಯ ಭಕ್ತರ ಸಹಕಾರ, ನೆರವಿನಿಂದಲೇ ನಡೆದಿತ್ತು. ಕೊಡಿಮರಕ್ಕೆ ಚಿನ್ನದ ಕವಚ ಅಳವಡಿಸುವ ಭಕ್ತರ ಇಂಗಿತ ಖಂಡಿತವಾಗಿಯೂ ಈಡೇರಬಹುದು..
-ಪಿ.ಜಿ. ಚಂದ್ರಶೇಖರ್‌, ದೇಗುಲಗಳ ಅಧ್ಯಯನಕಾರ

ನಿರ್ಧಾರ ಕೈಗೊಂಡಿಲ್ಲ
ಕೊಡಿಮರಕ್ಕೆ ಚಿನ್ನದ ಕವಚವನ್ನು ಅಳವಡಿಸುವ ಇಂಗಿತವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿರ್ಧಾರವನ್ನು ಕೈಗೊಂಡಿಲ್ಲ. ಮಹಾಲಿಂಗೇಶ್ವರನ ಅನುಗ್ರಹದಿಂದ, ಭಕ್ತರ ಸಹಕಾರ ದೊರೆತರೆ ಜಾತ್ರೆಯ ಸಂದರ್ಭ ಚಿನ್ನದ ಕವಚವನ್ನು ಹೊಂದಿರುವ ಕೊಡಿಮರವೇ ಎದ್ದು ನಿಲ್ಲಬಹುದು.
-ಎನ್‌. ಸುಧಾಕರ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

ಅನ್ನಛತ್ರ ನಿರ್ಮಾಣ
ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಗಾಗಿ ಸುಸಜ್ಜಿತ ಅನ್ನಛತ್ರ ಸುಮಾರು 74 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನದಾಸೋಹ ಭೋಜನ ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಎ. 10ರಿಂದ ಆರಂಭವಾಗುವ ಜಾತ್ರೆಗೆ ಮೊದಲು ಅನ್ನಛತ್ರ ನಿರ್ಮಾಣಗೊಳ್ಳುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ದೇವಾಲಯದಿಂದ ನಿತ್ಯ ಸುಮಾರು 2,000 ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಸ್ಥಳೀಯ ಶಾಲಾ ಕಾಲೇಜುಗಳ 600 ಮಕ್ಕಳು ನಿತ್ಯ ಪಾಲ್ಗೊಳ್ಳುತ್ತಾರೆ. ವಿಶೇಷ ಕಾರ್ಯಗಳಂದು ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಜಾತ್ರೆ, ದೈವಾರಾಧನೆ, ಶಾಲಾ -ಕಾಲೇಜುಗಳು, ಸರಕಾರಿ ಕಾರ್ಯಕ್ರಮಗಳಿಗೆ ವಿನಂತಿಸಿದರೆ ಭೋಜನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ದೇವಾಲಯದಲ್ಲಿ ಅನ್ನಪ್ರಸಾದದ ಯೋಜನೆ ಆರಂಭಗೊಂಡ ಬಳಿಕ ಹಂತ ಹಂತವಾಗಿ ಅಭಿವೃದ್ಧಿಗೊಂಡಿದೆ. ಎರಡು ವರ್ಷಗಳಿಂದ ಅನ್ನಛತ್ರದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅಂತಿಮ ಹಂತಕ್ಕೆ ತಲುಪಿದೆ. ಹಾಲಿ ಅನ್ನಛತ್ರದಲ್ಲಿ ಸರಕಾರದ ಸುತ್ತೋಲೆಯಂತೆ ಸಿ.ಸಿ. ಕೆಮರಾ ಅಳವಡಿಸಲಾಗುವುದು ಎಂದರು.

ವ್ಯವಸ್ಥಾಪನ ಸಮಿತಿ ತಾಂಬೂಲ ಪ್ರಶ್ನೆಯ ಮೂಲಕ ದೇವತಾ ಕಾರ್ಯಗಳನ್ನು ನಡೆಸಿ ದೇವಾಲಯದ ತಂತ್ರಿಗಳು, ವಾಸ್ತುತಜ್ಞರು, ಭಕ್ತರ ಅಭಿಪ್ರಾಯಗಳನ್ನು ಪಡೆದುಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಹಲವು ಅಭಿವೃದ್ಧಿ
ದೇವಾಲಯದ ಹೊರಾಂಗಣಕ್ಕೆ 34.16 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, 3.97 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿದೆ.

ರಾಜೇಶ್‌ ಪಟ್ಟೆ

LEAVE A REPLY

Please enter your comment!
Please enter your name here