Home ಧಾರ್ಮಿಕ ಕಾರ್ಯಕ್ರಮ ನಗರಾದ್ಯಂತ ಮಹಾ ಶಿವರಾತ್ರಿ ಸಂಭ್ರಮ

ನಗರಾದ್ಯಂತ ಮಹಾ ಶಿವರಾತ್ರಿ ಸಂಭ್ರಮ

514
0
SHARE
ಪಾಂಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗೆ ಸೇರಿದ ಭಕ್ತರು ವಿಶೇಷ ಬಲಿ ಜರಗಿತು.

ಮಹಾನಗರ: ಮಂಗಳೂರು ನಗರಾದ್ಯಂತ ಮಂಗಳವಾರ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ಸಹಿತ ವಿಶೇಷ ಪೂಜೆಗಳು ನೆರವೇರಿದವು. ಭಜನೆ, ವಿಶೇಷ ಜಾಗರಣೆ, ಉಪವಾಸ ವ್ರತಾಚರಣೆ ಮೂಲಕ ಜನ ಭಕ್ತಿಭಾವದಿಂದ ಶಿವರಾತ್ರಿ ಆಚರಿಸಿದರು.

ದೇವರಿಗೆ ಸೀಯಾಳಾಭಿಷೇಕ, ಹಾಲಿನ ಅಭಿಷೇಕಗಳನ್ನು ಅರ್ಪಿಸಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹೋಮ, ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ,
ಮಹಾಪೂಜೆ, ಬೆಳ್ಳಿ ರಥೋತ್ಸವ, ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ, ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಿತು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ರುದ್ರಾಭಿಷೇಕ, ಶಿವಪೂಜೆ ಮತ್ತು ರಾತ್ರಿ ರಂಗಪೂಜೆ, ಉತ್ಸವ, ಬಂಡಿ ಉತ್ಸವ, ಬೆಳ್ಳಿ ರಥೋತ್ಸವ ಜರಗಿತು. ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಭಕ್ತರು ನೀರಿನ ಅಭಿಷೇಕ ಮಾಡಿದರು.

ಬೆಳಗ್ಗಿನ ಪೂಜೆಗೆ ಸುಮಾರು 10,000ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಕೆರೆಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು. ರಾತ್ರಿ ಕದ್ರಿ ಹವ್ಯಾಸಿ ಬಳಗದಿಂದ ‘ಶಿವಲೀಲಾಮೃತ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ವಿಶೇಷ ಪೂಜೆ
ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ಅರ್ಧ ನಾರೀಶ್ವರ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಪಾಂಡೇಶ್ವರ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜೆ ಜರಗಿತು.

ನಗರದ ಗೂಡ್ಸ್‌ಶೆಡ್‌ ರಸ್ತೆಯ ನಿರೇಶ್ವಾಲ್ಯ ಶ್ರೀ ಸೋಮನಾಥ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಪರಿವಾರ ದೇವರುಗಳ ಪೂಜೆ ನಡೆಯಿತು. ನಗರದ ಇತರ ದೇವಸ್ಥಾನಗಳಲ್ಲಿಯೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. ಶರವು ದೇವಸ್ಥಾನದಲ್ಲಿ ಶತರುದ್ರಾಭಿಷೇಕ ಸಹಿತ ವಿವಿಧ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಮನೆಗಳಲ್ಲೂ ಶಿವರಾತ್ರಿ
ನಗರದ ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂಡಳಿಗಳಿಂದ ಏಕಾಹ ಭಜನೆ, ಶಿವ ನಾಮಸ್ಮರಣೆ ಮೂಲಕ ರಾತ್ರಿಯಿಡೀ ಜಾಗರಣೆ ಆಚರಿಸಲಾಯಿತು. ಕೊಂಚಾಡಿ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಏಕಾಹ ಭಜನೆ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ ಸೂರ್ಯೋದಯದಿಂದ ಆರಂಭವಾಗಿ ಬುಧವಾರ ಬೆಳಗ್ಗೆ ಸೂರ್ಯೋದಯದವರೆಗೆ ಭಜನೆ ನಡೆಯಲಿದೆ.

ಕುಲಶೇಖರ ಅಭಿಮನ್ಯು ಯುವಕ ಮಂಡಲ ಮತ್ತು ಮಹಿಳಾ ಮಂಡಳಿ ವತಿಯಿಂದ ಗಣಹೋಮ, ಭಜನೆ, ಮಹಾ ಅನ್ನಸಂತರ್ಪಣೆ, ಧಾರ್ಮಿಕ ಸಭೆಗಳು ನಡೆದವು. ವಿವಿಧ ಭಜನಾ ಮಂಡಳಿಗಳು, ಸಂಘಟನೆಗಳು ಶಿವರಾತ್ರಿ ಅಂಗವಾಗಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದವು.

ಅಲ್ಲದೆ ನಗರದ ವಿವಿಧ ಮನೆಗಳಲ್ಲಿ ಭಜನೆ, ಜಾಗರಣೆ, ವಿವಿಧ ಪೂಜೆ-ಪುನಸ್ಕಾರ, ಶಿವ ನಾಮ ಸ್ಮರಣೆಗಳನ್ನು ನಡೆಸಲಾಯಿತು. ಶಿವರಾತ್ರಿ ಅಂಗವಾಗಿ ಮನೆಮನೆಗಳಲ್ಲಿ ಉಪವಾಸ ವ್ರತಾಚರಣೆ ನಡೆಸಿ ಶಿವರಾತ್ರಿ ಆಚರಿಸಿದರು.

LEAVE A REPLY

Please enter your comment!
Please enter your name here