Home ಧಾರ್ಮಿಕ ಸುದ್ದಿ ತೀರ್ಥರೂಪಿಣಿ ಕಾವೇರಿ : ಭಕ್ತರ ಸಂಭ್ರಮ

ತೀರ್ಥರೂಪಿಣಿ ಕಾವೇರಿ : ಭಕ್ತರ ಸಂಭ್ರಮ

224
0
SHARE

ಮಡಿಕೇರಿ: ಅರ್ಚಕ ಸಮೂಹದ ಮಂತ್ರಘೋಷ ಸಹಿತ ನಿರಂತರ ಅರ್ಚನೆಯೊಂದಿಗೆ ನೆರೆದಿದ್ದ ಭಕ್ತರ ಉದ್ಘೋಷದ ನಡುವೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಮುಂಚಿತವಾಗಿ (ಮಧ್ಯರಾತ್ರಿ 12.57) ತೀರ್ಥರೂಪಿಣಿಯಾಗಿ ಕಾವೇರಿಮಾತೆ ಕಾಣಿಸಿಕೊಂಡಳು.

ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಅರ್ಚಕ ಗಣದ ವೇದಘೋಷ, ಮಂತ್ರಪಠಣ, ಕುಂಕುಮಾರ್ಚನೆ ನಡುವೆ 12.57ಕ್ಕೆ ಸಲ್ಲುವ ರೋಹಿಣಿ ನಕ್ಷತ್ರದ ಕರ್ಕಾಟಕ ಲಗ್ನದಲ್ಲಿ ದಕ್ಷಿಣ ಗಂಗೆ ಕಾವೇರಿಯು ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.

ತಲಕಾವೇರಿ ಮಾತ್ರವಲ್ಲದೆ ಕೊಡಗಿನ ಬಹುತೇಕ ಕಡೆಗಳಲ್ಲಿ ಗುರುವಾರ ಅಪರಾಹ್ನ ಸುರಿದ ಮಳೆ, ಭಕ್ತಾದಿಗಳ ಉತ್ಸಾಹಕ್ಕೆ ಅಡ್ಡಿಪಡಿಸಿತಾದರೂ, ಮಳೆಯ ನಡುವೆಯೂ ರಾಜ್ಯ, ಹೊರ ರಾಜ್ಯದ ಭಕ್ತರು ಪವಿತ್ರ ಕ್ಷೇತ್ರದಲ್ಲಿ ಅಪರೂಪದ ಕ್ಷಣಕ್ಕಾಗಿ ಕಾದು ನಿಂತರು.

ಕುಂಡಿಕೆಯ ಸುತ್ತ ನೆರೆದಿದ್ದ ಭಕ್ತಾದಿಗಳ ಜೈಜೈಮಾತಾ, ಕಾವೇರಿ ಮಾತಾ, ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ, ಗೋವಿಂದಾ, ಕಾವೇರಮ್ಮನಿಗೆ ಜೈ ಮುಂತಾದ ಘೋಷಣೆಗಳು ಮುಗಿಲು ಮುಟ್ಟಿತ್ತು. ತೀರ್ಥಕುಂಡಿಕೆಯ ಬಳಿ ಅರ್ಚಕ ಸಮೂಹದ ವೇದಘೋಷ, ಮಂತ್ರಪಠಣ ಅನುರಣಿಸುತ್ತಿತ್ತು. ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಕುಂಕುಮಾರ್ಚನೆ ಸೇರಿದಂತೆ ಪೂಜಾ ಕಾರ್ಯಗಳು ನಡೆದವು.

ಮಹಾಆರತಿ ಜರುಗುತ್ತಿದ್ದಂತೆಯೇ ಪವಿತ್ರ ಕುಂಡಿಕೆಯಲ್ಲಿ 12.57ಕ್ಕೆ ತೀರ್ಥೋದ್ಭವವಾಯಿತು.. ಈ ಬಾರಿ ಮುಂಜಾನೆ 12.59ರ ವೇಳೆಗೆ ತೀರ್ಥೋದ್ಭವವಾಗಲಿದೆ ಎಂದು ಪಂಡಿತರು ಸಮಯ ನಿಗಧಿ ಮಾಡಿದ್ದರು. ಅವಧಿಗೆ ಎರಡು ನಿಮಿಷ ಮುಂಚಿತವಾಗಿಯೇ ಕಾವೇರಿಯು ಬ್ರಹ್ಮಕುಂಡಿಕೆಯಲ್ಲಿ ಕಾಣಿಸಿಕೊಂಡಳು.

ತೀರ್ಥ ಕೊಂಡೊಯ್ಯಲು ಬಂದಿದ್ದವರು ಚಳಿಯ ನಡುವೆಯೂ ಸ್ನಾನಕೊಳಕ್ಕೆ ಧುಮ್ಮಿಕ್ಕಿ ತೀರ್ಥ ಪಡೆದರು. ಈ ವರ್ಷ ಕಾವೇರಿ ಜಾತ್ರೆ ರಾತ್ರಿ ನಡೆದ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆಯಿತ್ತು. ತಮಿಳುನಾಡಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ. ಸ್ನಾನಕೊಳ ಹಾಗೂ ತೀರ್ಥ ಕುಂಡಿಕೆಯ ಸುತ್ತಲೂ ನಿಂತ ಭಕ್ತರು ಕಾವೇರಿ ಉಕ್ಕುವ ದೃಶ್ಯವನ್ನು ವೀಕ್ಷಿಸಿದರು. ಮಳೆ, ಚಳಿಯನ್ನೂ ಲೆಕ್ಕಿಸದೇ ಭಕ್ತರು ನೆರೆದಿದ್ದರು.

LEAVE A REPLY

Please enter your comment!
Please enter your name here