ಉಡುಪಿ: ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಅತ್ಯಂತ ಸುಲಭ ಮತ್ತು ಸಂಶಯಾತೀತವಾದ ಭಾಷ್ಯಗಳನ್ನು ರಚಿಸಿದವರು ಜಗದ್ಗುರು ಮಧ್ವಾಚಾರ್ಯರು. ಜಗತ್ತಿನ ಅಸ್ತಿತ್ವ ಮತ್ತು ಭಗವಂತನ ಸರ್ವೋತ್ತಮತ್ವದ ಬಗ್ಗೆ ಸಾಮಾನ್ಯರಲ್ಲಿರಬಹುದಾದ ಗೊಂದಲಗಳಿಗೆ ಮಧ್ವಾಚಾರ್ಯರು ನೀಡಿದ ಅತ್ಯಂತ ಸುಲಭ ಗ್ರಾಹ್ಯವಾದ ತತ್ವ ಮತ್ತು ಭಕ್ತಿ ಸಂದೇಶಗಳು ಸರ್ವರಿಗೂ ಅನುಕರಣೀಯವಾಗಿವೆ ಎಂದು ವಿದ್ವಾಂಸ ಡಾ| ಕಡಂದಲೆ ಗಣಪತಿಭಟ್ ತಿಳಿಸಿದರು.
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಮಧ್ವಜಯಂತೀ ಉತ್ಸವದಲ್ಲಿ ಅವರು ಮಧ್ವ ಜಯಂತಿ ಸಂದೇಶ ಉಪನ್ಯಾಸ ನೀಡಿದರು. ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸ ಬಲ್ಲಾಳ ವಿದ್ವಾಂಸರನ್ನು ಸಮ್ಮಾನಿಸಿದರು. ಸಂಘಟನಾ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಮಹಿಳೆಯರಿಂದ ಸಾಮೂಹಿಕ ಮಧ್ವನಾಮಗಾಯನ, ಭಕ್ತರಿಂದ ಮಧ್ವ ಗುರುಗಳಿಗೆ ದೀಪ ನಮನ, ಮಧ್ವಾರತಿ ನಡೆದವು.