ಉಪ್ಪಿನಂಗಡಿ : ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಫೆ. 17ರಂದು ಧ್ವಜಾರೋಹಣದೊಂದಿಗೆ ಕಾಲಾವಧಿ ಜಾತ್ರೆ
ಮತ್ತು ಮಖೆ ಜಾತ್ರೆ ಆರಂಭವಾಗಲಿದ್ದು, ಫೆ. 18ರಂದು ನಡೆಯುವ ಹುಣ್ಣಿಮೆ ಮಖೆ ಕೂಟ ಜಾತ್ರೆಗೆ ಶ್ರೀ ದೇವರ ಬ್ರಹ್ಮರಥೋತ್ಸವ ಸರ್ವಾಲಂಕಾರಗೊಂಡು ಸಿದ್ಧವಾಗಿದೆ.
ಫೆ. 18ರಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ರಾತ್ರಿ ದೇವರು ಬಲಿ ಹೊರಟು ಬ್ರಹ್ಮರಥಾರೋಹಣ ಮಾಡಲಿದ್ದಾರೆ. ರಾತ್ರಿ ಉಪ್ಪಿನಂಗಡಿ ರಥ ಬೀದಿಯಲ್ಲಿ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬ್ರಹ್ಮರಥವನ್ನು ಎಳೆಯಲಾಗುತ್ತದೆ. ದಾರಿಯುದ್ದಕ್ಕೂ ಭಕ್ತರಿಂದ ದೇವರಿಗೆ ಹಣ್ಣು-ಕಾಯಿ ಸೇವೆ ಸಮರ್ಪಣೆಯಾಗುತ್ತದೆ.
ಬ್ರಹ್ಮರಥ ಕಟ್ಟುವವರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬ್ರಹ್ಮರಥವನ್ನು ಕಟ್ಟುವ ಕೆಲಸವನ್ನು ಕೋಟೇಶ್ವರದ ಕುಶಲ ಕರ್ಮಿಗಳು ನಿರ್ವಹಿಸುತ್ತಿದ್ದಾರೆ. ಬ್ರಹ್ಮರಥ ಶೃಂಗಾರಗೊಳಿಸಲು ಉಡುಪಿ ಜಿಲ್ಲೆಯ ಪದ್ಧತಿಯನ್ನು ಅನುಸರಿಸುತ್ತಾರೆ. ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಬ್ರಹ್ಮರಥ ಕಟ್ಟಲು ಸುಬ್ರಹ್ಮಣ್ಯದ ಕುಶಲ ಕರ್ಮಿಗಳು ಸುಬ್ರಹ್ಮಣ್ಯದ ರಥ ಕಟ್ಟುವ ಪದ್ಧತಿಯನ್ನು ಅನುಸರಿಸುತ್ತಾರೆ. ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ ಮಾತ್ರ ಉಡುಪಿ ಜಿಲ್ಲೆಯ ಪದ್ಧತಿಯಲ್ಲಿ ಬ್ರಹ್ಮರಥವನ್ನು ಶೃಂಗಾರಗೊಳಿಸುತ್ತದೆ.