Home ನಂಬಿಕೆ ಸುತ್ತಮುತ್ತ ಲೂನ್ ಷೂ ಮತ್ತು ಸ್ಯಾನ್ ಟೇ ; ಒಂದು ಕುಂಗ್ ಫೂ ಕಥೆ

ಲೂನ್ ಷೂ ಮತ್ತು ಸ್ಯಾನ್ ಟೇ ; ಒಂದು ಕುಂಗ್ ಫೂ ಕಥೆ

1088
0
SHARE

ಲೂನ್ ಷೂ ಮತ್ತು ಸ್ಯಾನ್ ಟೇ ಇವರಿಬ್ಬರೂ ಕುಂಗ್ ಫೂ ಅಭ್ಯಾಸ ಮಾಡುತ್ತಿದ್ದ ಗೆಳೆಯರು. ಹಲವು ವರ್ಷಗಳಾದ ಮೇಲೆ ಇಬ್ಬರ ಅಭ್ಯಾಸವೂ ಮುಗಿಯಿತು. ಅವರ ಗುರುವು ಅವರ ವಿದ್ಯೆಯು ಸಮಾಪ್ತಿಯಾಯಿತೆಂದು ಹೇಳಿ, ಅವರುಗಳಿಬ್ಬರೂ ತಮ್ಮ ತಮ್ಮ ಸ್ವಗ್ರಾಮಗಳಲ್ಲಿ ಕುಂಗ್ ಫೂ ಗುರುಕುಲವನ್ನು ತೆರೆದು ಶಿಷ್ಯರಿಗೆ ಕುಂಗ್ ಫೂ ಪಾಠವನ್ನು ಹೇಳಿಕೊಡಬಹುದೆಂದು ಅನುಮತಿ ನೀಡಿದ.

ಇಬ್ಬರೂ ಗುರುವಿಗೆ ನಮಸ್ಕರಿಸಿ ತಮ್ಮ ಊರುಗಳಿಗೆ ಹಿಂತಿರುಗಿ ಹೋಗಿ ಕುಂಗ್ ಫೂ ಶಾಲೆಯನ್ನು ತೆರೆದು ಅನೇಕ ಶಿಷ್ಯರಿಗೆ ಕುಂಗ್ ಫೂ ಕಲಿಸಿದರು. ಹಲವು ವರ್ಷಗಳು ಕಳೆದವು. ಲೂನ್ ಷೂನಿಗೆ ತನ್ನ ಗೆಳೆಯನನ್ನು ನೋಡಿ ಮಾತಾಡಬೇಕೆನ್ನಿಸಿ ಸ್ಯಾನ್ ಟೇ ನ ಗ್ರಾಮಕ್ಕೆ ಹೋದ. ಬಹಳ ಕಾಲದ ಮೇಲೆ ತನ್ನ ಮಿತ್ರ ತನ್ನನ್ನು ನೋಡಲು ಬಂದಿದ್ದನ್ನು ನೋಡಿ ಸ್ಯಾನ್ ಟೇಗೆ ಖುಷಿಯೋ ಖುಷಿ. ಗೆಳೆಯರಿಬ್ಬರೂ ತಮ್ಮ ಗುರುಕುಲದ ದಿವಸಗಳನ್ನು ನೆನೆಸಿಕೊಂಡು ಹರಟೆ ಹೊಡೆದದ್ದೇ ಹೊಡೆದಿದ್ದು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ.

ಲೂನ್ ಷೂ ಕೇಳಿದ: ಅಂದ ಹಾಗೆ, ಸ್ಯಾನ್ ಟೇ!ನಿನಗೆಷ್ಟು ಮಕ್ಕಳು? ಸ್ಯಾನ್ ಟೇ: ನನಗೆ ಮೂರು ಜನ ಮಕ್ಕಳು. “ಹೌದಾ, ಅವರು ಮೂವರನ್ನೂ ಕರೆ.ಅವರನ್ನು ನೋಡಬೇಕೆಂಬ ಆಸೆ ನನಗೆ.“ಸರಿ. ಕರೆಯುತ್ತೇನೆ.

ಹೀಗೆಂದು ಹೇಳಿದ ಸ್ಯಾನ್ ಟೇ, ಕೂಡಲೇ ಮಕ್ಕಳನ್ನು ಕರೆಯಲಿಲ್ಲ. ಅವನು ಮಾಡಿದ್ದೇ ಬೇರೆ. ತಾನು ಹಾಗೂ ಲೂನ್ ಷೂ ಕುಳಿತಿದ್ದ ಕೋಣೆಯ ಬಾಗಿಲನ್ನು ಅವನು ಅರ್ಧ ತೆಗೆದ. ಹರಿತವಾದ ಅಲಗು ಇರುವ ಒಂದು ಕತ್ತಿ ತೆಗೆದುಕೊಂಡು ಬಾಗಿಲ ಮೇಲೆ ಆ ಕತ್ತಿಯನ್ನು ಅಡ್ಡಲಾಗಿ ಇಟ್ಟ.”ಈಗ ನನ್ನ ಮೂರನೆಯ ಮಗನನ್ನು ಕರೆಯುತ್ತೇನೆ ಎಂದು ಹೇಳಿ ಮೂರನೆಯ ಮಗನನ್ನು ಕರೆದ.

ಮೂರನೆಯ ಮಗ ಬಂದ. ಅವನು ಆತುರಾತುರವಾಗಿ ಬಾಗಿಲನ್ನು ತಳ್ಳಿಕೊಂಡು ನುಗ್ಗಿಬರುವಾಗ ಬಾಗಿಲ ಮೇಲೆ ಅಡ್ಡಲಾಗಿ ಇಟ್ಟಿದ್ದ ಕತ್ತಿ ನೇರವಾಗಿ ಅವನ ತಲೆಯ ಮೇಲೆ ಬೀಳುವಷ್ಟರಲ್ಲಿ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕತ್ತಿಯನ್ನು ಸರ್ರನೆ ಹೊರಗೆಳೆದು ಜೋರಾಗಿ ಬೀಸಿ, ಮೇಲಿಂದ ಬೀಳುತ್ತಿದ್ದ ಆ ಕತ್ತಿಯನ್ನು ಎರಡು ತುಂಡಾಗಿ ಕತ್ತರಿಸಿದ. ಅನಂತರ ಅವನು ಮುಂದೆ ಬಂದು ವಿನಯದಿಂದ ಲೂನ್ ಷೂ ಮತ್ತು ಸ್ಯಾನ್ ಟೇ ಇವರಿಬ್ಬರಿಗೂ ತಲೆ ಬಾಗಿಸಿ ನಮಸ್ಕರಿಸಿದ.

“ಲೂನ್ ಷೂ, ಇವನು ನನ್ನ ಕೊನೆಯ ಮಗ. ಪ್ರತಿದಿನವೂ ಶ್ರದ್ಧೆಯಿಂದ ಕುಂಗ್ ಫೂ ಅಭ್ಯಾಸ ಮಾಡುವುದೇ ಇಲ್ಲ. ಮಹಾ ಸೋಮಾರಿ ಬೇರೆ. ನಾನು ಎಷ್ಟೇ ಬೈದರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನೀನಾದರೂ ಸ್ವಲ್ಪ ಹೇಳು. ಲೂನ್ ಷೂಗೆ ಇದನ್ನು ಕೇಳಿ ಬೇಸರವಾಯಿತು.

ಅವನು ಸ್ಯಾನ್ ಟೇನ ಮಗನಿಗೆ, “ಯಾಕಪ್ಪ ನೀನು ಹೀಗೆ ಮಾಡುತ್ತೀ? ಗುರುಕುಲದಲ್ಲಿ ನಿಮ್ಮ ತಂದೆ ಎಷ್ಟೊಂದು ಶ್ರದ್ಧೆಯಿಂದ ಕುಂಗ್ ಫೂ ಅಭ್ಯಾಸ ಮಾಡುತ್ತಿದ್ದರು ಗೊತ್ತಾ! ನೀನೂ ನಿಮ್ಮ ತಂದೆಯ ತರಹ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು.

“ಸರಿ, ಮಹಾಸ್ವಾಮಿ, ತಾವು ಹೇಳಿದಂತೆಯೇ ಮಾಡುತ್ತೇನೆ. ಮೂರನೆಯ ಮಗ ಒಳಗೆ ಹೊರಟು ಹೋದ. ಸ್ಯಾನ್ ಟೇ, ಇನ್ನೊಂದು ಕತ್ತಿಯನ್ನು ತಂದು ಹಿಂದಿನಂತೆಯೇ ಬಾಗಿಲ ಮೇಲಿಟ್ಟು “ಈಗ ನಾನು ಎರಡನೆಯ ಮಗನನ್ನು ಕರೆಯುತ್ತೇನೆ; ಎಂದು ಹೇಳಿ, ಎರಡನೆಯ ಮಗನನ್ನು ಕರೆದ. ಎರಡನೆಯ ಮಗ ಬಂದ. ಅವನ ಕೈ ಬಾಗಿಲಿಗೆ ತಾಕಿದ ಕೂಡಲೇ ಕತ್ತಿ ಜೋರಾಗಿ ಅಲುಗಾಡಿ ಬಿದ್ದಿತು. ಅದು ತನ್ನ ನೆತ್ತಿಯ ಮೇಲೆ ಬೀಳುವ ಮೊದಲೇ ಅವನು ಅದನ್ನು ಕೈಯಿಂದ ಹಿಡಿದುಕೊಂಡು ಅದು ಬಾಗಿಲ ಮೇಲೆ ಮೊದಲು ಹೇಗಿದ್ದಿತೋ ಹಾಗೆಯೇ ಇಟ್ಟು, ಮುಂದೆ ಬಂದು ಲೂನ್ ಷೂ ಹಾಗೂ ಸ್ಯಾನ್ ಟೇ ಇಬ್ಬರಿಗೂ
ನಮ್ರತೆಯಿಂದ ವಂದಿಸಿದ.

ಸ್ಯಾನ್ ಟೇ ಹೇಳಿದ:“ಇವನು ನನ್ನ ಎರಡನೇ ಮಗ. ಕುಂಗ್ ಫೂ ಅಭ್ಯಾಸವನ್ನೇನೋ ಚೆನ್ನಾಗಿ ಮಾಡುತ್ತಾನೆ.ಆದರೆ ಒಮ್ಮೊಮ್ಮೆ ಅಡ್ಡಜ್ಞಾನ ಮಾಡಿಕೊಂಡು ತಪ್ಪು ತಪ್ಪಾಗಿ ಕೈ ಬೀಸುತ್ತಾನೆ. ಅದೇ ನನಗೆ ಚಿಂತೆಯಾಗಿದೆ.

ಲೂನ್ ಷೂ “ನೋಡು ಮಗು, ಗುರುಕುಲದಲ್ಲಿ ನಾವಿಬ್ಬರೂ ಕುಂಗ್ ಫೂ ಅಭ್ಯಾಸ ಮಾಡುತ್ತಿದ್ದಾಗ ನಿಮ್ಮ ತಂದೆಗೆ ಸ್ವಲ್ಪವಾದರೂ ಅಡ್ಡ ಜ್ಞಾನವಾದದ್ದನ್ನು ನಾನು ನೋಡಿಯೇ ಇಲ್ಲ. ನೀನು ಅಭ್ಯಾಸ ಮಾಡುವಾಗ ನಿನ್ನ ಗಮನ ಕುಂಗ್
ಫೂ ವಿನಲ್ಲಿ ಮಾತ್ರ ಇರಬೇಕು. ಮತ್ತೆಲ್ಲೂ ಇರಬಾರದು. ತಿಳಿಯಿತೇ? ಎಂದ.

“ತಿಳಿಯಿತು ಮಹಾಸ್ವಾಮಿ. ಇನ್ನುಮುಂದೆ ಕುಂಗ್ ಫೂ ಅಭ್ಯಾಸ ಮಾಡುವಾಗ ಎಚ್ಚರಿಕೆಯಿಂದ ಅಭ್ಯಾಸ ಮಾಡುತ್ತೇನೆ; ಎರಡನೆಯ ಮಗ ಮನೆಯೊಳಗೆ ಹೊರಟುಹೋದ ಮೇಲೆ ಸ್ಯಾನ್ ಟೇ,` ಈಗ ನಾನು ಮೊದಲನೇ ಮಗನನ್ನು ಕರೆಯುತ್ತೇನೆ; ಎಂದು ಹೇಳಿ ಮೊದಲನೇ ಮಗನನ್ನು ಕರೆದ.

ಮೊದಲನೇ ಮಗ ಬರುತ್ತಿದ್ದಂತೆಯೇ ಬಾಗಿಲ ಮೇಲೆ ಕತ್ತಿಯಿದ್ದುದನ್ನು ಗಮನಿಸಿದ. ಅದು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಬಾಗಿಲನ್ನು ನಿದಾನವಾಗಿ ತೆಗೆದು, ಮುಂದೆ ಬಂದು ಲೂನ್ ಷೂ ಹಾಗೂ ಸ್ಯಾನ್ ಟೇ ಅವರಿಗೆ ಗೌರವದಿಂದ ವಂದಿಸಿದ.

ಸ್ಯಾನ್ ಟೇ“ಇವನು ನನ್ನ ಮೊದಲನೇ ಮಗ. ಇವನಿಗೆ ಕುಂಗ್ ಫೂ ಅಭ್ಯಾಸದಲ್ಲಿ ಇರುವ ಆಸಕ್ತಿಯನ್ನು ನೋಡಿದರೆ ಸಂತೋಷವಾಗುತ್ತದೆ.ಇವನಿಗೆ ಚುರುಕುತನದ ಜೊತೆಗೆ ತಾಳ್ಮೆಯೂ ಇದೆ. ಲೂನ್ ಷೂಗೆ ಆನಂದವಾಯಿತು. ಹರ್ಷದಿಂದ ಸ್ಯಾನ್ ಟೇನ ಮೊದಲನೇ ಮಗನಿಗೆ ಆಶೀರ್ವಾದ ಮಾಡಿದ.

*ಎಸ್.ಜಗನ್ನಾಥ. ಮೈಸೂರು

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here