ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರು ಬರುವಂತಿಲ್ಲ. ಹೀಗಾಗಿ ಮಂಗಳೂರಿನ ಕೆಲವು ದೇವಸ್ಥಾನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೇ ಪ್ರತಿನಿತ್ಯ ಭಕ್ತರು ದೇವರ ದರ್ಶನ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಗಳ ಸಾಮಾಜಿಕ ಜಾಲತಾಣಗಳಲ್ಲಿ ದೇವರ ಪೂಜೆ ಮತ್ತು ದರ್ಶನ ಕಲ್ಪಿಸುವ ವ್ಯವಸ್ಥೆಯನ್ನು ಭಕ್ತರಿಗೆ ಮಾಡಿಕೊಡಲಾಗಿದೆ. ಆ ಮೂಲಕ ಭಕ್ತರು ಮನೆಯಲ್ಲಿದ್ದರೂ ತಮ್ಮ ಸ್ಮಾರ್ಟ್ಫೋನ್ಗಳ ಮೂಲಕ ದೇವರನ್ನು ನೋಡುವ ಅವಕಾಶ ಪಡೆದುಕೊಂಡಿದ್ದಾರೆ.
ಫೇಸ್ಬುಕ್ ಲೈವ್ನಲ್ಲೇ ಪೂಜೆ
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಮಂಗಳಾದೇವಿ ಟೆಂಪಲ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಪೂಜೆಯನ್ನು ಫೇಸ್ಬುಕ್ ಲೈವ್ ಮಾಡಿ ಭಕ್ತರಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ನಿತ್ಯ ಪೂಜೆಯ ಬಳಿಕ ದೇವರ ಫೋಟೊವನ್ನು ಶ್ರೀ ದುರ್ಗಾಪರಮೇಶ್ವರೀ ಟೆಂಪಲ್ ಕಟೀಲು ಎಂಬ ಫೇಸುºಕ್ ಪೇಜ್ನಲ್ಲಿ ಮತ್ತು ದೇಗುಲದ ವಾಟ್ಸಾಪ್ ಸ್ಟೇಟಸ್ಗಳಲ್ಲಿಯೂ ಹಾಕಲಾಗುತ್ತಿದೆ.
ಭಕ್ತರಿಗೆ ಪ್ರಸ್ತುತ ಲಾಕ್ಡೌನ್ ಇರುವ ಕಾರಣ ದೇವಸ್ಥಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆ ಯಲ್ಲೇ ಕುಳಿತು ದೇವರ ಪೂಜೆ ನೋಡು ವಂತಾಗಲು ಪೂಜೆಯನ್ನು ಫೇಸ್ಬುಕ್ ಲೈವ್ನಲ್ಲಿ ತೋರಿಸಲಾಗುತ್ತದೆ. ಸಿಬಂದಿಯೇ ಇದನ್ನು ನಿರ್ವಹಿಸುತ್ತಾರೆ ಎನ್ನುತ್ತಾರೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ಅವರು.