ಮಹಾನಗರ: ಮನುಷ್ಯನ ಹುಟ್ಟಿನ ಉದ್ದೇಶ ಮತ್ತು ನಿರ್ದಿಷ್ಟ ಗುರಿಯನ್ನು ಧರ್ಮಾಧಾರಿತವಾಗಿ ಅರಿಯುವುದೇ ಮುಖ್ಯವಾಗಿರುತ್ತದೆ. ಅಧರ್ಮಿಗಳಾಗಿ ತನ್ನಾಂತರ್ಯದಲ್ಲಿ ದ್ವೇಷಭಾವನೆಗಳನ್ನು ತುಂಬಿಕೊಂಡು ಬದುಕುವವರಿಗೆ ಧರ್ಮಾಧಾರಿತ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು.
ಅವರು ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನುಷ್ಯನ ಜೀವನ ಆಚಾರ, ವಿಚಾರ, ನಡೆ, ನುಡಿ, ನಡಾವಳಿಗಳು ಹೀಗೆ ಇರಬೇಕೆಂಬ ಧಾರ್ಮಿಕ ಚೌಕಟ್ಟನ್ನು ವೇದಾದಿ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಶಾಸ್ತ್ರವಿರುದ್ಧವಾದ ನಿಷಿದ್ಧ ಕರ್ಮಾದಿಗಳನ್ನು ಮಾಡುತ್ತಾ ಅಧರ್ಮಿಯಾಗಿ ಬದುಕಬಾರದು. ಶಾಸ್ತ್ರಸಮ್ಮತವಾದ ವಿಹಿತಕರ್ಮದಿಗಳನ್ನು ಮಾಡುತ್ತಾ ಧರ್ಮ ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಒಳ್ಳೆಯ ಚಿಂತನೆ ಬೆಳೆಸಿ ಅರಿವಿನ ಜ್ಞಾನವುಳ್ಳ ಮಾನವರು ಧರ್ಮಯುತ ಜೀವನ ನಡೆಸಲು ಸಾಧ್ಯ. ಶರೀರ ಹೊಂದಿರುವುದೇ ಧರ್ಮಸಾಧನೆಗೋಸ್ಕರ. ಧರ್ಮದ ಅನುಸಂದಾನ ಯಾರಲ್ಲಿ ಆಗುವುದೋ ಅವನೇ ಪರಮ ಶ್ರೇಷ್ಠ ಜ್ಞಾನಿ ಯಾಗುವನು. ಸಂಚಿತ ಮತ್ತು ಪ್ರಾರಬ್ಧಕರ್ಮದ ಫಲವಾಗಿ ಶರೀರ ಬಂದಿದೆ. ಈ ಜನ್ಮದಲ್ಲಿ ಒಳ್ಳೆಯ ಬದುಕನ್ನು ಧರ್ಮದ ನೆಲೆಗಟ್ಟಿನಲ್ಲಿ ಕಂಡುಕೊಳ್ಳಬೇಕು. ಒಬ್ಬ ವ್ಯಕ್ತಿ ಧರ್ಮಿಯೂ ಅಧರ್ಮಿಯೂ ಆಗಬಹುದು. ಅವರವರ ದೃಷ್ಟಿಕೋನ ಚಿಂತನೆಯ ಮೇಲೆ ಅವಲಂಬಿತವಾಗುತ್ತದೆ. ಪರಿಪೂರ್ಣವ್ಯಕ್ತಿ ಶಕ್ತಿಯಾಗಲು ಧರ್ಮದ ಮಾರ್ಗ ಆವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಸಾಗಬೇಕಾಗಿವೆ ಎಂದರು.
ನೇತ್ರಾವತಿ ಯೋಗವಲಯದ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು. ಬಿಜಿಎಸ್ ಸೇವಾ ಸಮಿತಿಯ ನರಸಿಂಹ ಕುಲಕರ್ಣಿ ಸ್ವಾಗತಿಸಿದರು. ಬಿಜಿಎಸ್ನ ಆಡಳಿತಾಧಿಕಾರಿ ಸುಬ್ಬ ಕಾರಡ್ಕ ವಂದಿಸಿದರು.