Home ಧಾರ್ಮಿಕ ಸುದ್ದಿ “ಮಾನವೀಯ ಮೌಲ್ಯ ತಿಳಿಸುವ ಕೆಲಸವಾಗಲಿ’

“ಮಾನವೀಯ ಮೌಲ್ಯ ತಿಳಿಸುವ ಕೆಲಸವಾಗಲಿ’

516
0
SHARE

ವೇಣೂರು : ಯುವ ಸಮುದಾಯಕ್ಕೆ ಮಾನವೀಯ ಮೌಲ್ಯಗಳನ್ನು ಅರ್ಥ ಮಾಡಿಸುವ ಕೆಲಸ ವಾಗಬೇಕು. ಸಂಸ್ಕೃತಿ, ಆಚಾರ-ವಿಚಾರಗಳನ್ನು ಅವರುಮೈಗೂಡಿಸಿಕೊಂಡು ಭಾರತದ ಸತಪ್ರಜೆಗಳಾಗುವಲ್ಲಿ ಹಿರಿಯರಾದ ನಾವು ಶ್ರಮಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ಮೇಲ್ವಿಚಾರಕಿ ಮಲ್ಲಿಕಾ ಹೇಳಿದರು.

ಇಲ್ಲಿನ ಕುದ್ಯಾಡಿಯ ಸದ್ಧರ್ಮ ಯುವಕ ಮಂಡಲ ಮತ್ತು ಶ್ರೀಕ್ಷೇತ್ರ ಧ.ಗ್ರಾ. ಯೋಜನೆ, ಪ್ರಗತಿ ಬಂಧು ಒಕ್ಕೂಟ ಕುದ್ಯಾಡಿ ಇವುಗಳ ಸಹಯೋಗದಲ್ಲಿ ಯುವಕ ಮಂಡಲದ ವಠಾರದಲ್ಲಿ ಜರಗಿದ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂದರ್ಭ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಯಶೋದಾ ಎಲ್‌. ಬಂಗೇರ ಮಾತನಾಡಿ, ಯುವಕ ಮಂಡಲದ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.

ಸಮ್ಮಾನ ಪಿ.ಎಚ್‌.ಡಿ. ಪದವಿ ಪಡೆದ ದೈಹಿಕ ಶಿಕ್ಷಣ ಉಪನ್ಯಾಸಕ ಡಾ| ಮನೋಜ್‌ ಎಂ. ಸುಲ್ಕೇರಿ ಅವರನ್ನು ಸಮ್ಮಾನಿಸಲಾಯಿತು. ಅವರು ಮಾತನಾಡಿ, ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಕೊಡಿಸಿದರೆ ಅವರು ಜೀವನ ಪರ್ಯಂತ ಸುಖವಾಗಿರುತ್ತಾರೆ. ಒಬ್ಬ ವ್ಯಕ್ತಿಯ ಹಿಂದೆ ಗುರು, ಮುಂದೆ ಗುರಿ ಇರಬೇಕು. ಜತೆಗೆ ಸಾಧಿಸುವ ಛಲ ಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಮಗೆ ಆಸಕ್ತಿ ಇರುವ ಯಾವುದೇ ಕ್ಷೇತ್ರದಲ್ಲಿ ಮುನ್ನಡೆದರೆ ಅದರಲ್ಲಿ ಯಶಸ್ಸು ದೊರೆಯುತ್ತದೆ ಎಂದರು.

ಹುತಾತ್ಮ ಯೋಧರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸದ್ಧರ್ಮ ಯುವಕ ಮಂಡಲದ ಅಚ್ಯುತ ಪೂಜಾರಿ ಕೊಡಿಬಾಳೆ ಅವರು ದಾನಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು. ಸದಾನಂದ ಬಿ. ಸ್ವಾಗತಿಸಿದರು. ಸದ್ಧರ್ಮ ಯುವಕ ಮಂಡಲ ಕುದ್ಯಾಡಿ ಇದರ ಕಾರ್ಯದರ್ಶಿ ದಿನೇಶ್‌ ಎಚ್‌. ವರದಿ ವಾಚಿಸಿದರು. ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ದಿನೇಶ್‌ ಸುವರ್ಣ ವಂದಿಸಿದರು. ಪ್ರಶಾಂತ್‌ ಎಚ್‌. ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ರಸ್ತೆ ಡಾಮರು ಕಾಮಗಾರಿ: 80 ಲಕ್ಷ ರೂ. ಬಿಡುಗಡೆ ಶಾಸಕ ಹರೀಶ್‌ ಪೂಂಜ ಅವರು ಕಾರ್ಯಕ್ರಮಕ್ಕೆ ಭೇಟಿ ನೀಡಿ, ಕುದ್ಯಾಡಿ ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಡಾಮರು ಕಾಮಗಾರಿ ಶೀಘ್ರದಲ್ಲಿ ಮಾಡಲಾಗುವುದು. ಅದಕ್ಕಾಗಿ ನಬಾರ್ಡ್‌ ಯೋಜನೆಯಲ್ಲಿ 80 ಲಕ್ಷ ರೂ. ಮೊತ್ತ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸದ್ಧರ್ಮ ಯುವಕ ಮಂಡಲದ ಮೂಲಕ ಕುದ್ಯಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here