ಮಾಣಿಲ: ನಮ್ಮ ಹಿರಿಯರು ಸಂಸ್ಕಾರ, ಕೂಡು ಕುಟುಂಬ, ಶಿಷ್ಟ ಜೀವನ ಪದ್ಧತಿಯಿಂದ, ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಸುಸಂಸ್ಕೃತ ಸಮಾಜವನ್ನು ಕಟ್ಟಿ ಮಾದರಿಯಾಗಿದ್ದರು. ಅದೇ ರೀತಿ ನಾವು ಮುಂದಿನ ಜನಾಂಗಕ್ಕೆ ಒಳಿತನ್ನು ನೀಡಿ, ಸಾವಿನ ಅನಂತರವೂ ಅಮರರಾಗುವಂತಹ ಸಾಧನೆ ಮಾಡಬೇಕು. ದ್ವೇಷ ಬಿಟ್ಟು ಪ್ರೀತಿ, ಸಹಬಾಳ್ವೆಯಿಂದ ಇದ್ದಾಗ ಸಂತೃಪ್ತಿ ಪಡೆಯಬಹುದು ಎಂದು ಮಾಣಿಲ ಶ್ರೀ ಧಾಮ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಅವರು ರವಿವಾರ ಶ್ರೀಕ್ಷೇತ್ರದಲ್ಲಿ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ವ್ರತಾಚರಣೆ ಧಾರ್ಮಿಕ ಕಾರ್ಯಕ್ರಮದ 36ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಲಕ್ಷ್ಮೀನರಸಿಂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಕೇಶವ ರೆಡ್ಡಿ, ಉಮೇಶ್ ಕುಲಾಲ್ ನಾವೂರು, ದೇವಪ್ಪ ಕುಲಾಲ್ ಪಂಜಿಕಲ್ಲು, ಅಳಿಕೆ ನೆಕ್ಕಿತ್ತಪುಣಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಯಶೋಧರ ಬಂಗೇರ, ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ್ ತುಂಬೆ, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಶ್ರೀಧಾಮ ಮಿತ್ರವೃಂದದ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ, ಮಹಿಳಾ ಸೇವಾ ಸಮಿತಿ ಕಾರ್ಯದರ್ಶಿ ಗೀತಾ ಪುರುಷೋತ್ತಮ ನಿರೂಪಿಸಿದರು.
ಶ್ರೀಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಬಾಲಭೋಜನ ನಡೆಯಿತು. ಬಳಿಕ ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಯಾಗ ಪೂರ್ಣಾಹುತಿ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠನ, ಶ್ರೀ ದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೊಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನ ಸಂಕೀರ್ತನೆ, ಶ್ರೀಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.