ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನ. 23ರಂದು ಅಪರೂಪದ “ಲಕ್ಷ ಗಾಯತ್ರೀ ಮಂತ್ರ ಜಪ ಯಜ್ಞ’ ನಡೆಯಲಿದೆ. 14 ವಯಸ್ಸಿನಿಂದಲೇ ಗಾಯತ್ರೀ ಮಂತ್ರದ ಉಪಾಸಕರಾಗಿದ್ದ ರಮಾನಂದರ ಮನೆಯ ಪರಿಸರ, ಹಿರಿಯರ ಧಾರ್ಮಿಕತೆ, ಸಾತ್ವಿಕ ಬದುಕು ಅವರಿಗೆ ಸ್ಫೂರ್ತಿಯಾಗಿದೆ. ದೈವ – ದೇವರೆನ್ನುವ ನಂಬಿಕೆಯೇ ಪ್ರಧಾನವಾಗಿದ್ದ ಆಸ್ತಿಕತೆ ಅವರ ಮನೆಯಲ್ಲಿತ್ತು. ಅಂತೆಯೇ ಗಾಯತ್ರೀ ಉಪಾಸನೆ ಆರಂಭಿಸಿದ ಅವರಿಗೆ ಇದೀಗ 53 ವರ್ಷ. ಈ ಸುದೀರ್ಘ ಅವಧಿಯಲ್ಲಿ ಸುಮಾರು 26 ಲಕ್ಷ ಸಂಖ್ಯೆ ಜಪ ಮಾಡಿದ್ದಾರೆ. ಗಾಯತ್ರೀ ಮಂತ್ರವನ್ನು 38 ವರ್ಷ ಗಳಲ್ಲಿ ಯಾವುದೇ ಚ್ಯುತಿಯಿಲ್ಲದೆ ಮಾಡಿ ಪೂರೈಸಿದ್ದಾರೆ.
ಮಂತ್ರ ಪ್ರೇರಣೆಯಾದಂತೆಯೇ 4 ಬಾರಿ ಸಹಸ್ರ ಸಂಖ್ಯೆಯಲ್ಲಿ ಪಾಯಸ ದ್ರವ್ಯದಲ್ಲಿ ಗಾಯತ್ರೀ ಯಜ್ಞ ಮಾಡಿಸಿದ್ದಾರೆ. ಇದೀಗ ಮತ್ತೆ ಜೀವನದುದ್ದಕ್ಕೂ ಮಾಡಿದ ಸಮಗ್ರ ಗಾಯತ್ರೀ ಜಪಕ್ಕಾಗಿ ಗಾಯತ್ರೀ ಜಪ ಯಜ್ಞ ಸಂಘಟಿಸಿದ್ದಾರೆ. ದಿನಕ್ಕೆ 30 ಸಾವಿರ ಗಾಯತ್ರೀ ಜಪ ದೊಂದಿಗೆ ಉತ್ಥಾನ ದ್ವಾದಶಿಯಿಂದ ಹುಣ್ಣಿಮೆವರೆಗೆ ಈ ಜಪ ನಡೆದು ಆದಿಶಕ್ತಿಯ ಪ್ರೇರಣೆಯಂತೆ ಕಾರ್ತಿಕ ಹುಣ್ಣಿಮೆಯ ಪರ್ವ ದಿನ ಲಕ್ಷ ಗಾಯತ್ರೀ ಮಂತ್ರ ಜಪಮಹಾಯಜ್ಞ ಸಂಪನ್ನಗೊಳ್ಳುತ್ತಿದೆ.
ಗಾಯತ್ರೀ ಮಂತ್ರ ಶ್ರೇಷ್ಠ
ಗಾಯತ್ರೀ ಮಂತ್ರ ಶ್ರೇಷ್ಠವಾದುದು. ಇದರ ಜ್ಞಾನಶಕ್ತಿ ನೀಡುವವಳು ಗಾಯತ್ರಿ ದೇವಿ. ಧೀಶಕ್ತಿಯನ್ನು ಕರುಣಿಸುವ ಆಕೆ “ವೇದಮಾತೆ’ಯೆಂತಲೂ ಕರೆಯಿಸಿಕೊಳ್ಳುತ್ತಾಳೆ. ಶಕ್ತಿಯುತ ಗಾಯಿತ್ರೀ ಜಪಕ್ಕೆ ಅಪಹಾಸ್ಯ ಮಾಡಿದವರಿಗೆ ಮತಿಭ್ರಮಣೆ ಉಂಟಾಗುತ್ತ ದೆಂದು ಶಾಸ್ತ್ರ ಹೇಳುತ್ತದೆ. ಯಜ್ಞದಿಂದ ಮೋಕ್ಷ ಪಡೆಯಬೇಕಾದರೆ ಸರ್ವ ದುರಿತ ದೂರೀಕರಿಸುವ ಮಹಿಮಾನ್ವಿತೆ ಗಾಯತ್ರೀ ದೇವಿ ದಾರಿ ತೋರಿಸುತ್ತಾಳೆ. ಆಕೆಯ ಪ್ರೀತ್ಯರ್ಥ ಕ್ಷೇತ್ರದಲ್ಲಿ ನಡೆಯಲಿರುವ ಯಾಗದಲ್ಲಿ ಭಕ್ತರು ಭಾಗವಹಿಸಿ.
- ಶ್ರೀ ರಮಾನಂದ ಗುರೂಜಿ