Home ನಂಬಿಕೆ ಸುತ್ತಮುತ್ತ ಲಕ್ಷ್ಮೀದೇವಿ ಎಲ್ಲಿ ನೆಲೆಸುತ್ತಾಳೆ?!

ಲಕ್ಷ್ಮೀದೇವಿ ಎಲ್ಲಿ ನೆಲೆಸುತ್ತಾಳೆ?!

4056
0
SHARE

ಎಲ್ಲಿ ಧರ್ಮವು ರಕ್ಷಿಸಲ್ಪಡುತ್ತದೋ ಅಲ್ಲಿ ದೇವರು ನೆಲೆಗೊಳ್ಳುತ್ತಾನೆ ಮತ್ತು ನಮ್ಮನ್ನು ರಕ್ಷಿಸುತ್ತಾನೆ. ದೇವರು ಎಂಬುದು ಸನ್ಮಾರ್ಗದ ನಂಬಿಕೆ ಮತ್ತು ನಡವಳಿಕೆ. ಧರ್ಮದ ಹಾದಿಯಲ್ಲಿ ದೇವರು ಎಂಬ ಶಕ್ತಿಯು ಸದಾ ಉಚ್ಚರಿಸಲ್ಪಡುತ್ತಲೇ ಇರುತ್ತದೆ. ಕಾರಣ ನಾವು ಏನನ್ನು ನಂಬುವುದಕ್ಕೂ ನಮಗೆ ಕಾರಣಗಳು ಬೇಕು. ಹಾಗೆಂದು ಸಕಾರಣವನ್ನು ಹುಡುಕುತ್ತಲೇ ಬದುಕಿನ ಸಮಯವನ್ನು ವ್ಯರ್ಥಮಾಡುವುದರಲ್ಲೂ ಅರ್ಥವಿಲ್ಲ. ಈ ಆಧ್ಯಾತ್ಮದ ಅಥವಾ ಧರ್ಮದ ವಿಶೇಷವೆಂದರೆ ಕಾರಣವನ್ನು ಹುಡುಕದೇ ಧರ್ಮವನ್ನು ನಂಬುತ್ತ ಹೋದರೆ ಕಾರಣಗಳು ಕಣ್ಣೆದುರಿಗೇ ಬಂದು ನಿಲ್ಲುತ್ತವೆ! ಇದನ್ನು ಮೊದಲು ಅರಿಯಬೇಕು.

ಕಾಲ ಬದಲಾದಂತೆ ಬದುಕಿನ ರೀತಿಗಳೂ ಬದಲಾಗಿವೆ. ಕಾಡಿನ ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಮಾನವ ಆಮೇಲೆ ಪರಸ್ಪರ ವಸ್ತುಗಳನ್ನು ಬದಲಾಯಿಸಿಕೊಂಡು ಬದುಕುವಲ್ಲಿಯ ತನಕ ಬೆಳವಣಿಗೆ ಹೊಂದಿ, ಈಗ ಪರಸ್ಪರ ಬದಲಾಯಿಸಲ್ಪಡುತ್ತಿದ್ದ ವಸ್ತುಗಳು ಈಗ ಹಣದ ರೂಪಕ್ಕೆ ರೂಪಾಂತರ ಹೊಂದಿದೆ. ಈ ರೂಪಾಂತರದಿಂದ ಪರಾವಲಂಬಿತನವು ಗೋಚರದಿಂದ ಅಗೋಚರ ರೂಪಕ್ಕೆ ಪರಿವರ್ತಿತವಾಗಿದೆ. ಹೀಗೆ ಪರಿವರ್ತಿತವಾದ ಬಳಿಕ ಮನುಷ್ಯ ಮನುಷ್ಯನ ನಡುವಿನ ಬಾಂಧವ್ಯದ ಅಗತ್ಯತೆಯ ಅಗೋಚರವಾದುದಲ್ಲದೆ, ಈ ಬಾಂಧವ್ಯವೂ ಮಾಯವಾಗುತ್ತಿದೆ. ಹಿಂದೆಲ್ಲ ಸಂಪತ್ತು ಎಂದು ಕರೆಸಿಕೊಳ್ಳುತ್ತಿದ್ದ ವಸ್ತುಗಳೆಲ್ಲವೂ ಕಾಣದಾಗಿ ಈಗ ಕೇವಲ ಧನ ಅಥವಾ ಹಣ ಮಾತ್ರ ಸಂಪತ್ತೆನಿಸಿದೆ. ಹಣವಿದ್ದರೆ ಮಾತ್ರ ಬದುಕು; ಇಲ್ಲವೆಂದರೆ ಭೂಲೋಕವೂ ನರಕವೇ!

ಈ ಸಂಪತ್ತಿನ ಪ್ರತಿರೂಪವೇ ಲಕ್ಷ್ಮೀದೇವಿ. ಹಾಗಾಗಿಯೇ “ಲಕ್ಷ್ಮಿಯ ಕೃಪಾಕಟಾಕ್ಷವೊಂದಿದ್ದರೆ ಸಾಕು” ಎಂಬುದು ಎಲ್ಲರ ಅಭಿಲಾಷೆ; ಪ್ರಾರ್ಥನೆ ಕೂಡ. ಎಲ್ಲಿ ಲಕ್ಷ್ಮಿ ನೆಲೆಸಿದ್ದಾಳೋ ಅಲ್ಲಿ ದಾರಿದ್ರ್ಯ ಉಂಟಾಗುವುದಿಲ್ಲ. ವಿದ್ಯೆ, ಧನ, ಧಾನ್ಯ, ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಗೆ ಲಕ್ಷ್ಮಿ ಕಾರಣಳು. ಲಕ್ಷ್ಮಿಯು ಬ್ರಹ್ಮನ ಮಾನಸಪುತ್ರ ಭೃಗುಮಹರ್ಷಿ ಮತ್ತು ಖ್ಯಾತಿ ದಂಪತಿಗಳ ಸುಪುತ್ರಿ. ಮುಂದೆ ತನಗೆ ಯೋಗ್ಯವಾದ ವರನಾರು ಎಂದು ಹುಡುಕುತ್ತ, ವಿಷ್ಣುವೇ ಯೋಗ್ಯ ಎಂದು ತಿಳಿದು ಆತನ ಪತ್ನಿಯಾದಳು. ವಿಷ್ಣುವಿನ ವಕ್ಷಸ್ಥಲದಲ್ಲಿ ಕಮಲಾಸನಳಾಗಿ, ಪದ್ಮನೇತ್ರೆಯಾಗಿ, ಪದ್ಮಹಸ್ತೆಯಾಗಿ, ಕಮಲಮುಖಿಯಾಗಿ, ಸಂಪತ್ತು, ವಿದ್ಯೆ, ಯಜ್ಞ, ಮಂತ್ರ ಮತ್ತು ಶ್ರದ್ಧೆಗಳಿಗೆ ಸಾಕಾರರೂಪಳಾಗಿ ಇರುವವಳೇ ಈ ಲಕ್ಷ್ಮಿ.

ಈ ಲಕ್ಷ್ಮಿ ಎಲ್ಲಿ ನೆಲೆಸುತ್ತಾಳೆ? ಯಾರಿಗೆ ಸಂಪತ್ತನ್ನು ಕರುಣಿಸುತ್ತಾಳೆ?
ಧರ್ಮಃ ಸತ್ಯಂ ತಥಾ ವೃತ್ತಂ ಬಲಂ ಚೈವ ತಪಾಪ್ಯಹಮ್ |
ಶೀಲಮೂಲಾ ಮಹಾಪ್ರಾಜ್ಞ ಸದಾ ನಾಸ್ತ್ಯತ್ರ ಸಂಶಯಃ ||

ಎಲ್ಲಿ ಧರ್ಮ, ಸತ್ಯ, ಸದಾಚಾರ ಮತ್ತು ಬಲವಿರುತ್ತದೆಯೋ ಅಲ್ಲಿ ಅರ್ಥಾತ್ ಶೀಲವಿರುವಲ್ಲಿ ಲಕ್ಷ್ಮಿ ನೆಲೆನಿಲ್ಲುತ್ತಾಳೆ. ಇದಕ್ಕೆ ಪೂರಕವಾದ ಪುರಾಣ ಕಥೆಯೊಂದಿದೆ. ಒಮ್ಮೆ ಪ್ರಹ್ಲಾದನು ಸ್ವರ್ಗದ ಒಡೆತನವನ್ನು ಪಡೆದಾಗ ಇಂದ್ರನು ಈತನಿಂದ ಸ್ವರ್ಗವನ್ನು ಹಿಂಪಡೆಯಲು ಬ್ರಾಹ್ಮಣ ರೂಪದಿಂದ ಪ್ರಹ್ಲಾದನ ಶಕ್ತಿಗೆ, ಶ್ರೇಯಸ್ಸಿಗೆ, ಸತ್ಯಕ್ಕೆ ಕಾರಣವಾದ ಧರ್ಮಮೂಲವನ್ನು ಪ್ರಹ್ಲಾದನಲ್ಲಿ ಬೇಡಿದ. ಪ್ರಹ್ಲಾದ ಇದನ್ನು ಆತನಿಗೆ ನೀಡಿದ ತಕ್ಷಣವೇ ಲಕ್ಷ್ಮಿ ಆತನನ್ನು ಬಿಟ್ಟು ಇಂದ್ರನನ್ನು ಸೇರಿಕೊಂಡಳು. ಯಾಕೆಂದರೆ ಧರ್ಮದ ಮೂಲ ಶೀಲವು ಇಂದ್ರನ ಬಳಿ ಬಂದಿತ್ತು. ಇದರಿಂದ ಸತ್ಯ, ಶಕ್ತಿ, ಸದಾಚಾರ, ಧರ್ಮಗಳೆಲ್ಲವೂ ಇಂದ್ರನ ಬಳಿಗೇ ಬಂದುದರಿಂದ ಲಕ್ಷ್ಮಿಯು ಇಂದ್ರನಲ್ಲಿ ನೆಲೆಯಾದಳು.

ಎಲ್ಲಿ ಶೀಲ ಸಂಪನ್ನತೆಯಿರುತ್ತದೋ ಅಲ್ಲಿ ಲಕ್ಷ್ಮಿ ಇರುತ್ತಾಳೆ. ಸಂಪತ್ತನ್ನು ಕರುಣಿಸುತ್ತಾಳೆ. ದೇವರು ಎಂಬ ಭಾವ ಹುಲುಮಾನವನ ಜೀವನವನ್ನು ಪಾವನವಾಗಿಸುವ ಮಾರ್ಗಗಳನ್ನೇ ಹೇಳಿವೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ. ಮನುಷ್ಯನು ಶೀಲ ಕಳಕೊಂಡ ಮೇಲೆ ಶಿಲೆಗಿಂತಲೂ ಕಡೆ ಎಂಬ ಗಾದೆ ಮಾತಿದೆ. ಶೀಲ ಎಂಬುದು ಶುದ್ಧತೆಯ ಸಂಕೇತ. ಮನಸ್ಸು ಮೊದಲು ಶುದ್ಧವಾಗಬೇಕು. ದೇಹಶುದ್ಧಿ ಎಂಬುದು ಲೌಕಿಕವಾದುದು. ಮನೋಶುದ್ಧಿಯ ಆಧ್ಯಾತ್ಮಿಕ. ಮನಸ್ಸು ಶುದ್ಧವಾಗಿದ್ದರೆ ಮಾತ್ರ ಧರ್ಮದ ಸದಾಚರಣೆ ಸಾಧ್ಯ, ಧರ್ಮದ ಸದಾಚರಣೆಯಿಂದ ದೇಹವು ಸದ್ವಿವಿನಿಯೋಗವಾಗುತ್ತದೆ. ಆಗ ನಾವು ಗಳಿಸುವ ಸಂಪತ್ತುಗಳೂ ಸನ್ಮಾರ್ಗದಿಂದಲೇ ಬರುತ್ತವೆ. ಹಾಗಾದಾಗ ಮಾತ್ರ ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲೆ ಉಂಟಾಗಿ ಗಳಿಸಿದ್ದು ಉಳಿಯುತ್ತದೆ; ಉಳಿಸಿದ್ದು ದುಪ್ಪಟ್ಟಾಗುತ್ತದೆ.

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here