ಉಡುಪಿ: ಶ್ರೀಕೃಷ್ಣಮಠದಲ್ಲಿ ಮಂಗಳವಾರ ಉತ್ಥಾನದ್ವಾದಶಿಯಂದು ಲಕ್ಷದೀಪೋತ್ಸವ ಶುಭಾರಂಭಗೊಂಡಿತು. ನಾಲ್ಕು ದಿನಗಳ ಲಕ್ಷ ದೀಪೋತ್ಸವದ ಆರಂಭದ ದಿನ ಹಲವು ಆಯಾಮಗಳ ಕಾರ್ಯಕ್ರಮ ಸಂಪನ್ನಗೊಂಡಿತು. ದ್ವಾದಶಿಯಾದ ಕಾರಣ ಬೆಳಗ್ಗೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದೇವರಿಗೆ ಮಹಾ ಪೂಜೆಯನ್ನು ನಡೆಸಿದರು. ತುಳಸೀ ಪೂಜೆ, ಕೀರ್ತನೆಗಳು ನಡೆದವು. ಅನ್ನಸಂತರ್ಪಣೆ ನಡೆದ ಬಳಿಕ ಅಪರಾಹ್ನ ರಥಬೀದಿಯಲ್ಲಿ ಲಕ್ಷ ಹಣತೆಗಳನ್ನು ಸ್ಥಾಪಿಸಲು ಶ್ರೀಪಲಿಮಾರು ಮಠಾಧೀಶರು, ಶ್ರೀಪೇಜಾವರ ಮತ್ತು ಶ್ರೀಅದಮಾರು ಕಿರಿಯ ಶ್ರೀಪಾದರು ಮುಹೂರ್ತ ಮಾಡಿದರು.
ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಬಳಿ ಗೋಷ್ಠಿ ಗಾನದ ‘ಏಳು ನಾರಾಯಣನೇ’, ‘ಪ್ರಬೋಧೋತ್ಸವ’ ಸಮಾರಂಭ ನಡೆಯಿತು. ಮಧ್ವಸರೋವರದ ಸುತ್ತ ಕುಳಿತು ಜಿಲ್ಲೆಯ ವಿವಿಧ ಭಜನ ಮಂಡಳಿಗಳಿಂದ ಮತ್ತು ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಬಂದ ಸಾವಿರಾರು ಭಜನ ಕಲಾವಿದರು ಗೋಷ್ಠಿ ಗಾನವನ್ನು ನಡೆಸಿಕೊಟ್ಟರು. ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ, ಕೆ. ಅಪ್ಪಣ್ಣಾಚಾರ್ಯ, ವಿದ್ವಾನ್ ಸದಾನಂದ ಶಾಸ್ತ್ರಿಯವರು ಸಾಮೂಹಿಕ ಗೋಷ್ಠಿ ಗಾನದ ಸಾರಥ್ಯ ವಹಿಸಿ ಭಜನೆಯ ಮಹತ್ವವನ್ನು ಸಾರಿದರು.
ನಿರಂತರ ಭಜನೆಯ ಸಂಚಾಲಕ ಗುರುರಾಜ್ ಆಚಾರ್ಯ ಕಂಪ್ಲಿ, ಸಹ ಸಂಚಾಲಕಿ ಕಮಲಾವತಿ ವಾಸುದೇವ, ಗೀತಾ ಗುರುರಾಜ್ ಆಚಾರ್ಯ, ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ, ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್ ತೆಂಕನಿಡಿಯೂರು, ಉಡುಪಿ ತಾಲೂಕು ಅಧ್ಯಕ್ಷ ಧನಂಜಯ ಕಾಂಚನ್ ಮಲ್ಪೆ, ಉಡುಪಿ ನಗರ ವಲಯಾಧ್ಯಕ್ಷ ಕಿಶೋರ್ ಕುಮಾರ್ ಕನ್ನರ್ಪಾಡಿ, ಉಡುಪಿ ಕರಾವಳಿ ವಲಯಾಧ್ಯಕ್ಷ ಕಿರಣ್ ಕುಂದರ್ ಮಲ್ಪೆ, ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಭಜನ ಕಲಾವಿದರು ರಥಬೀದಿಯಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಸಿಕೊಟ್ಟರು. ಕಲಾವಿದರು ಅರಸಿನ ಕುಂಕುಮದ ಪ್ರತೀಕವಾದ ಸಮವಸ್ತ್ರಗಳನ್ನು ಧರಿಸಿದ್ದರು.