ಕುಂಜೂರು ದುರ್ಗಾಪರಮೇಶ್ವರಿ ದೇವಿಯ ದರ್ಶನ ಬಲಿ ನಡೆಯಿತು. ಬಳಿಕ ಹುಲಿ ಭೂತದ ನೇಮ ನಡೆಯಿತು.
ಕುಂಜೂರು ಮೇ 4: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಶುಕ್ರವಾರ ಬೆಳಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಹುಲಿ ಭೂತದ ನೇಮದೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ಆರ್ಲಪದವು ಸಿಂಧೂರ ಮಹಿಳಾ ಭಜನ ಮಂಡಳಿ, ಮುಕ್ರಂಪಾಡಿ ಸುಭದ್ರಾ ಮಹಿಳಾ ಭಜನ ಮಂಡಳಿ ಹಾಗೂ ಸಂಜೆ ಪುತ್ತೂರು ವೆಂಕಟ್ರಮಣ ಭಜನ ಮಂಡಳಿ ಯವರಿಂದ ಭಜನ ಸೇವೆ ನಡೆಯಿತು.
ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಸಂಜೆ ರಂಗ ಪೂಜೆ, ದೈವಗಳಿಗೆ ತಂಬಿಲ ಸೇವೆ ನಡೆಯಿತು. ಕುಂಜೂರು ವಿಶ್ವ ಯುವಕ ವೃಂದದ ವತಿಯಿಂದ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ. ಮಹಾಬಲ ರೈ ಮತ್ತು ಸದಸ್ಯರು, ಭಕ್ತರು ಪಾಲ್ಗೊಂಡರು.