ಕುಂದಾಪುರ: ಪ್ರಕೃತಿಯ ಒಡಲೊಳಗೆ ನೂರೆಂಟು ವಿಸ್ಮಯಗಳಿವೆ. ಅದು ಊಹೆಗೂ ನಿಲುಕ ದಂತದ್ದು. ಇಂತಹದ್ದೇ ಒಂದು ಪ್ರಾಕೃತಿಕ ವಿಸ್ಮಯ ತಾಣ ಕೆರಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಗಲ್ಲು ಎಂಬ ಪುಟ್ಟ ಊರಿನಲ್ಲಿ ಶ್ರೀ ಕೇಶವನಾಥೇಶ್ವರ ದೇವರ ಗುಹಾಲಯ. ಸುಮಾರು 50 ಅಡಿಗಳಷ್ಟು ದೂರದ ಕಲ್ಲಿನ ಗುಹೆ. ಅಲ್ಲಿ ಶತ -ಶತಮಾನಗಳಿಗೂ ಮೊದಲೇ ಈ ಉದ್ಭವ ಲಿಂಗವೇ ಇಲ್ಲಿನ ಕುತೂಹಲ, ಆಕರ್ಷಣೆಯ ಕೇಂದ್ರ.
ಸಮುದ್ರ ಮಟ್ಟಕ್ಕೆ ಸಮನಾಗಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಾನನದ ನಡುವೆ ಕಾಣುವ ಈ ಸ್ಥಳ ಜನಮಾನಸದಿಂದ ಬಹು ದೂರವೇ ಇದೆ. ಇಂತಹ ಒಂದು ಅದ್ಭುತವಾದ, ಸೃಷ್ಟಿದತ್ತವಾದ ಕ್ಷೇತ್ರವಿದೆ ಎನ್ನುವುದರ ಅರಿವು ಬಹುತೇಕರಿಗೆ ಗೊತ್ತಿಲ್ಲ. ಗುಹೆಯೊಳಗೆ ಸುಮಾರು 50 ಅಡಿಗಳಷ್ಟು ವಿಶಾಲ ಜಾಗದಲ್ಲಿ ಹರಡಿರುವ ನೀರು, ಆ ನೀರಿನಲ್ಲಿ ಹಲವು ಬಗೆಯ ಮೀನುಗಳು, ಕತ್ತಲು ತುಂಬಿದ ಗುಹೆಯೊಳಗೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ನೀರಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆಯುವುದೇ ಅದ್ಭುತ, ಅನೂಹ್ಯ, ಅನುಪಮ ಅನುಭವ ನೀಡುತ್ತದೆ.
ಇಲ್ಲಿ 12 ವರ್ಷಗಳಿಂದ ರಾಘವೇಂದ್ರ ಕುಂಜತ್ತಾಯ ಅವರು ಪೂಜಾ – ಕೈಂಕರ್ಯವನ್ನು ಮಾಡುತ್ತಿದ್ದು, ಅದಕ್ಕೂ 100 ವರ್ಷಗಳ ಹಿಂದೆ ಮಂಜುನಾಥ ಉಡುಪ ಹಾಗೂ ಅವರ ಪೂರ್ವಜರು ಪೂಜೆ ಮಾಡುತ್ತಿದ್ದರು.
ಎಳ್ಳಮಾವಾಸ್ಯೆ ಜಾತ್ರೆ
ಕೇಶವನಾಥೇಶ್ವರ ದೇಗುಲಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು, ಈ ಕೆರೆಯಲ್ಲಿ ಎಳ್ಳಮಾವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಕದಂಬರ ಕಾಲದಿಂದ ಎಳ್ಳಮಾವಾಸ್ಯೆ ಆಚರಣೆ ಆರಂಭಗೊಂಡಿದ್ದು, ಆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ. ಸೂರ್ಯಗ್ರಹಣವಿರುವುದರಿಂದ ಈ ಬಾರಿ ಬೆಳಗ್ಗೆ 4 ರಿಂದ 8 ಗಂಟೆಯವರೆಗೆ ತೀರ್ಥಸ್ನಾನ, ಪೂಜೆ ಇರುತ್ತದೆ. ಆ ಬಳಿಕ ಮತ್ತೆ ಬೆಳಗ್ಗೆ 11.04 ಕ್ಕೆ ಪುಣ್ಯಾಹಃ ಸಂಪ್ರೋಕ್ಷಣೆ ಪೂಜೆ ನೆರವೇರಲಿದ್ದು, ಆ ಬಳಿಕ ಸಂಜೆಯವರೆಗೆ ಶತರುದ್ರಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ದೀಪೋತ್ಸವ, ಕೆಂಡಸೇವೆ ನಡೆಯಲಿದೆ.
ಪುರಾಣ ಕತೆಯೇನು?
ಭೂಮಿಯಲ್ಲಿ ಸೃಷ್ಟಿ ಮಾಡಲು ಪುರುಷನ ಸಮಸ್ಯೆ ಎದುರಾದಾಗ ದೇವತೆಗಳು ಸೃಷ್ಟಿಕರ್ತನಾದ ಶಿವನನ್ನು ಭೂಮಿಗೆ ಬರುವಂತೆ ಮಾಡುತ್ತಾರೆ. ಆಗ ಪಾರ್ವತಿ, ನಂದಿಯೊಂದಿಗೆ ಬರುವ ಶಿವನು ಮೂಡುಗಲ್ಲು ಪರಿಸರವನ್ನು ಮೆಚ್ಚಿದ್ದಲ್ಲದೆ, ಇಲ್ಲಿನ ಕಲ್ಲಿನ ಗುಹೆಯೊಳಗೆ ತಪಸ್ಸಿಗೆ ಕೂರುತ್ತಾನೆ. ಬಳಿಕ ಅಲ್ಲೇ ಕೇಶವನಾಥನಾಗಿ ನೆಲೆ ನಿಲ್ಲುತ್ತಾನೆ. ಇನ್ನು ಕಲಿಯುಗದಲ್ಲಿ ಶಿವನ ಲಿಂಗವನ್ನು ಮುಟ್ಟಿ ಪೂಜೆ ಮಾಡಿದರೆ ಅಪವಿತ್ರವಾಗುವುದು ಎನ್ನುವುದನ್ನು ಅರಿತ ದೇವತೆಗಳು ಇಲ್ಲಿನ ಗುಹೆಯೊಳಗೆ ನಿಜವಾದ ಲಿಂಗವನ್ನು ಮರೆಮಾಚಿ, ಉದ್ಭವ ಲಿಂಗವನ್ನು ಸೃಷ್ಟಿಸುತ್ತಾರೆ. ಅದಕ್ಕೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಉದ್ಭವ ಲಿಂಗಕ್ಕೆ ಪೂಜೆ ಮಾಡಿದರೆ ಗುಹೆಯೊಳಗೆ ಅಂತರ್ಗತವಾದ ಲಿಂಗಕ್ಕೆ ಪೂಜೆ ಸಲ್ಲಿಸಿದಂತೆ ಎನ್ನುವ ಪ್ರತೀತಿಯಿದೆ. ಆ ಗುಹೆಯೊಳಗಿನ ಲಿಂಗಕ್ಕೆ ಅಭಿಷೇಕವಾದ ನೀರು ಸಪ್ತ ನದಿಗಳಾಗಿ ಹೊರ ಹೋಗುತ್ತದೆ ಎನ್ನುವ ಐತಿಹ್ಯವಿದೆ.
ಲಿಂಗಕ್ಕೆ ಸೂರ್ಯನ ಕಿರಣ
ಸುತ್ತಲೂ ಕಲ್ಲು ಬಂಡೆಗಳಿಂದ ಕೂಡಿರುವ ಪ್ರದೇಶವಾಗಿರುವ ಇಲ್ಲಿ ನೀರು ಬತ್ತಿ ಹೋದ ನಿದರ್ಶನಗಳೇ ಇಲ್ಲವಂತೆ. ಬೇಸಗೆಯಲ್ಲೂ ಕೂಡ ಒಂದು ಅಡಿಯಷ್ಟು ನೀರು ಇರುವುದು ಇಲ್ಲಿನ ವೈಶಿಷ್ಟé. ಇಲ್ಲಿ ಸಂಜೆ 5 ಗಂಟೆಗೆ ಪ್ರತಿ ದಿನ ದೇವರ ಲಿಂಗಕ್ಕೆ ಸೂರ್ಯನ ಕಿರಣ ಬೀಳುವುದು ವಿಶೇಷ.
ಮೂಲಸೌಕರ್ಯ ವಂಚಿತ
ಕುಂದಾಪುರದಿಂದ 40 ಕಿ.ಮೀ. ದೂರದ, ಕೆರಾಡಿಯಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಈ ಮೂಡುಗಲ್ಲು ಗುಹಾಲಯವಿದೆ. ಕೆರಾಡಿಯಿಂದ ಅಥವಾ ಹಳ್ಳಿಹೊಳೆಯಿಂದ ವಾಟೆಬಚ್ಚಲು ಮೂಲಕವಾಗಿ ಇಲ್ಲಿಗೆ ತೆರಳಬಹುದು. ಆದರೆ ಕಾಡಿನೊಳಗಿನ ಈ ರಸ್ತೆಯಲ್ಲಿ ಸಂಚರಿಸುವುದು ಸಾಹಸಮಯ ಕಾರ್ಯ. ಅದರಲ್ಲೂ ಸುಮಾರು ಮೂರು ಕಿ.ಮೀ. ದೂರ ಕ್ರಮಿಸಬೇಕಿದ್ದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕು. ರಸ್ತೆ ಅಭಿವೃದ್ಧಿಯ ಜತೆಗೆ ವಿದ್ಯುತ್ ಸಂಪರ್ಕಕ್ಕೂ ಇದು ಮೀಸಲು ಅರಣ್ಯ ಪ್ರದೇಶ ಅಡ್ಡಿಯಾಗಿದೆ.
-ಪ್ರಶಾಂತ್ ಪಾದೆ