Home ಧಾರ್ಮಿಕ ಕಾರ್ಯಕ್ರಮ ಮೇ 7 – 9: ಬಂಟ್ವಾಡಿ – ಕೆಳಾಕಳಿ ಮಾರಿಕಾಂಬ ದೇವಿ ಜಾತ್ರೋತ್ಸವ

ಮೇ 7 – 9: ಬಂಟ್ವಾಡಿ – ಕೆಳಾಕಳಿ ಮಾರಿಕಾಂಬ ದೇವಿ ಜಾತ್ರೋತ್ಸವ

ಎರಡು ವರ್ಷಕ್ಕೊಮ್ಮೆ ಜಾತ್ರೆ | ಮನೆ - ಮನೆಗೆ ಬರುವ ಕೋಣಕ್ಕೆ ರಾಜ ಮರ್ಯಾದೆ

1676
0
SHARE

ಕುಂದಾಪುರ : ಹಕ್ಲಾಡಿ ಗ್ರಾಮದ ಕೆಳಾಕಳಿ – ಬಂಟ್ವಾಡಿಯಲ್ಲಿರುವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಈ ಬಾರಿ ಮೇ 7 ರಿಂದ ಮೇ 9 ವರೆಗೆ ವಿಜೃಂಭಣೆಯಿಂದ ಜರಗಲಿದೆ. ಒಂದು ವರ್ಷ ಇತಿಹಾಸ ಪ್ರಸಿದ್ಧ ಶಿರಸಿ ಮಾರಿಕಾಂಬೆಗೆ ಜಾತ್ರೆಯಾದರೆ, ಅದರ ಮರು ವರ್ಷ ಇಲ್ಲಿ ಜಾತ್ರೆ ನಡೆಯುವುದು ವಿಶೇಷ.

ಮೇ 6 ರಂದು ರಾತ್ರಿ ಶ್ರೀ ದೇವಿಯ ವೈಭವದ ಬೀಡಿಗೆ ಮೆರವಣಿಗೆ, ಮೇ 7 ರಂದು ಬಲಿಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಆ ಬಳಿಕ ಭಕ್ತಿ ಲಹರಿ, ಸಂಜೆ 5 ಕ್ಕೆ ಭಜನಾ ಕಾರ್ಯಕ್ರಮ, ಬಂಟ್ವಾಡಿ ಶಾಲೆಯ ‘ಯಕ್ಷ ದೀವಿ’ಗೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇ 8 ರಂದು ಬೆಳಗ್ಗೆ ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಆ ಬಳಿಕ ಗಾನ ಲಹರಿ, ಸಂಜೆ ಭಜನೆ, ರಾತ್ರಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಮೇ 9 ರಂದು ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ 3 ರಿಂದ ಬಲಿ ಕಾರ್ಯಕ್ರಮ, ಸಂಜೆ 7ಕ್ಕೆ ಭಜನೆ, ರಾತ್ರಿ 12 ಕ್ಕೆ ಮಾರಿ ಹೊಡೆಯುವುದು, ರಾತ್ರಿ 1 ಕ್ಕೆ ದೇವಿಯ ವೈಭವದ ಪುರ ಪ್ರವೇಶ ನೆರವೇರಲಿದೆ.

ಕೆಳಾಕಳಿ ಮಾರಿಕಾಂಬಾ ದೇವರು ಅತ್ಯಂತ ಶಕ್ತಿ ಸ್ಥಳವಾಗಿದ್ದು, ನಂಬಿದವರ ತಾಯಿ ಕೈ ಬಿಡುವುದಿಲ್ಲ ಎನ್ನುವ ಅಚಲವಾದ ನಂಬಿಕೆ ಭಕ್ತರದ್ದು. ಸಿಡುಬು, ದಡಾರ ಇತ್ಯಾದಿ ಕಾಯಿಲೆಗೆ ಜನ ಹರಕೆ ಹೊರಲಿದ್ದು, ಮೇ 9ರಂದು ಹರಿಕೆ ಹೊತ್ತವರು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ, ಅದರ ಮೇಲೆ ಸೊಪ್ಪಿನ ಅಟ್ಟೆ ಕಟ್ಟಿ ಗದ್ದುಗೆ ಪ್ರದಕ್ಷಿಣೆ ಬರುತ್ತಾರೆ.

ಏನಿದರ ವೈಶಿಷ್ಟ್ಯ ?
ಸಿರಸಿಯ ಮಾರಿಕಾಂಬೆಯಂತೆಯೇ ಇಲ್ಲಿನ ದೇವಿಯ ಮಹಿಮೆ ಅಗಾಧವಾದುದು. ತಿಂಗಳ ಮೊದಲೇ ಜಾತ್ರೆಯ ಸಿದ್ಧತೆ ಆರಂಭವಾಗುತ್ತದೆ. 21 ದಿನ ಮೊದಲು ಮರಕ್ಕೆ ಮಚ್ಚು ಹಾಕಲಾಗುತ್ತೆ. ವಾರದ ಬಳಿಕದ ಮಂಗಳವಾರ ಕೋಣಕ್ಕೆ ಧಾರೆ ಎರೆಯಲಾಗುತ್ತದೆ. ಮರುದಿನದಿಂದ ಗ್ರಾಮದ ಪ್ರತಿ ಮನೆಗೂ ಮೆರವಣಿಗೆ ಮೂಲಕ ಕೋಣ ಹೋಗುತ್ತೆ. ಸಿರಸಿ ಬಿಟ್ಟರೆ ಕರಾವಳಿ ಜಿಲ್ಲೆಗಳಲ್ಲಿ ಇಲ್ಲಿ ಮಾತ್ರ ಕೋಣದ ಮೆರವಣಿಗೆಯಿರುವುದು. ಕೋಣ ಬರುವ ದಿನ ಮನೆಯವರು ರಂಗೋಲಿ ಹಾಕಿ, ತಳಿರು ತೋರಣಗಳಿಂದ ಮನೆ ಪರಿಸರವನ್ನು ಸಿಂಗರಿಸುತ್ತಾರೆ. ಪುರಾತನ ಸಂಪ್ರದಾಯದಂತೆ ಪುರುಷರು ಡೋಲು, ಕೊಳಲು ವಾದನದ ಮೂಲಕ ಮುಂದೆ ಸಾಗಿದರೆ, ಮಹಿಳೆಯರು ಹೂ-ಕಾಯಿಯಿರುವ ಬುಟ್ಟಿ ಹೊತ್ತು ಸಾಗುತ್ತಾರೆ. ಮನೆಯಂಗಳಕ್ಕೆ ಬರುವ ಕೋಣನ ಕಾಲಿಗೆ ನೀರು ಹೊಯ್ದು, ಕೊರಳಿಗೆ ಹೂ – ಹಾರ ಹಾಕಿ, ತಲೆಗೆ ಎಣ್ಣೆ ಹಾಕಿ, ಕಣ್ಣಿನ ಕೆಳ, ಮೇಲ್ಭಾಗಕ್ಕೆ ಕಾಡಿಗೆ ಹಚ್ಚಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳುವುದಲ್ಲದೇ ಅಕ್ಕಿ, ಬಾಳೆಹಣ್ಣನ್ನು ನೀಡಲಾಗುತ್ತದೆ. ಊರಿನ ಅನಿಷ್ಟಗಳನ್ನು ಈ ಕೋಣ ನಿವಾರಿಸುತ್ತೆ ಅನ್ನುವ ಪ್ರತೀತಿಯಿದೆ.

LEAVE A REPLY

Please enter your comment!
Please enter your name here