ಕುಂದಾಪುರ: ಎರಡು ತಿಂಗಳ ಶಬರಿಮಲೆ ಯಾತ್ರಾ ಋತು ನ. 15ರಂದು ಆರಂಭ ಗೊಂಡಿದ್ದು, ಕರುನಾಡಿನ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಭೋಜನಾಲಯ ಸಹಿತ ಕೆಲವೊಂದು ಸೌಲಭ್ಯಗಳನ್ನು ಕೇರಳ ಸರಕಾರ ಒದಗಿಸಿದೆ. ಕಳೆದ ವರ್ಷ ಇದ್ದ ಗೊಂದಲ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿರುವುದು ಮತ್ತು ವಿಶೇಷ ಸೌಲಭ್ಯ ಗಳಿಂದಾಗಿ ಈ ವರ್ಷ ರಾಜ್ಯದ ಭಕ್ತರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಕನ್ನಡಿಗ ಭಕ್ತರ ಮಾಹಿತಿಗಾಗಿ ಅಲ್ಲಲ್ಲಿ ಮಾರ್ಗ ಸೂಚಿಗಳು, ನಾಮಫಲಕಗಳು ಇದ್ದರೂ ಅಪಭ್ರಂಶ ಎದ್ದು ಕಾಣುತ್ತಿತ್ತು; ಓದಿ ಅರ್ಥೈಸಿಕೊಳ್ಳಲು ಅಸಾಧ್ಯ ವಾಗಿತ್ತು. ಆದರೆ ಈ ಬಾರಿ ಎಲ್ಲೆಡೆ ಶುದ್ಧ ಕನ್ನಡದಲ್ಲಿ, ಅಕ್ಷರ ತಪ್ಪಿಲ್ಲದಂತೆ ಮಾಹಿತಿಗಳನ್ನು ಪ್ರಕಟಿಸಲಾಗಿದೆ.
ಪಂಪೆಯಲ್ಲಿ ಭೋಜನಾಲಯ
ಪಂಪಾ ನದಿಯ ತಟದಲ್ಲಿರುವ ಗಣಪತಿ ದೇವಸ್ಥಾನದ ಸಮೀಪ ಬೃಹತ್ ಭೋಜನಾಲಯವನ್ನು ನಿರ್ಮಿಸಲಾಗಿದೆ. ಕರ್ನಾಟಕದಿಂದ ತೆರಳುವ ಸಾವಿರಾರು ಮಾಲಾಧಾರಿ ಗಳಿಗೆ ಇದು ಸಹಕಾರಿಯಾಗಲಿದೆ. ಇಲ್ಲಿ ಕನ್ನಡದಲ್ಲಿಯೇ ಅಗತ್ಯ ಸೂಚನೆ, ಮಾರ್ಗದರ್ಶನ ನೀಡಲಾಗುತ್ತಿದೆ.
ರೈಲಿನಲ್ಲಿ ರಗಳೆ ತಪ್ಪಿಸಿ
ಕುಂದಾಪುರ, ಉಡುಪಿ, ಮಂಗಳೂರು ಕಡೆಗಳಿಂದ ಶಬರಿಮಲೆಗೆ ತೆರಳಲು ಚೆಂಗನೂರು ಅಥವಾ ಕೊಟ್ಟಾಯಂ ವರೆಗೆ ರೈಲಿನ ವ್ಯವಸ್ಥೆಯಿದೆ. ಆದರೆ ವ್ರತಧಾರಿಗಳು ತಮಗೆ ಬೇರೆ ಪ್ರಯಾಣಿಕರಿದ್ದರೆ ತೊಂದರೆಯಾಗುತ್ತದೆ ಎಂದು ಒಂದು ಬೋಗಿಯಿಡೀ ಕಾದಿರಿಸಿದರೂ ಕಾಸರಗೋಡು ಬಳಿಕ ಸಾಮಾನ್ಯ ಟಿಕೇಟ್ ಮಾಡಿರುವ ಪ್ರಯಾಣಿಕರು ಕೂಡ ಭಕ್ತರು ಕಾದಿರಿಸಿದ ಬೋಗಿಗೆ ನುಗ್ಗುವುದಲ್ಲದೆ ಜಾಗ ಬಿಡುವಂತೆ ದರ್ಪ ತೋರುತ್ತಾರೆ. ಇದರಿಂದ ನಮಗೆ ಕಿರಿಕಿರಿಯಾಗುತ್ತದೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವರಿಗೂ ಇ-ಮೇಲ್ ಮೂಲಕ ಮನವಿ ಸಲ್ಲಿಸಿದ್ದೇವೆ. ಈ ಕಿರಿಕಿರಿಯನ್ನು ತಪ್ಪಿಸಬೇಕು ಎಂದು ಉಡುಪಿ ವಲಯದ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ರಾಘವೇಂದ್ರ ಕಿಣಿ ಆಗ್ರಹಿಸಿದ್ದಾರೆ.
900ಕ್ಕೂ ಮಿಕ್ಕಿ ಶಿಬಿರ
ಈವರೆಗೆ ಉಡುಪಿಯಲ್ಲಿ 470 ಶಿಬಿರ ಮತ್ತು ದ.ಕ.ದಲ್ಲಿ 500 ಅಯ್ಯಪ್ಪ ವ್ರತಧಾರಿಗಳ ಶಿಬಿರಗಳು ನೋಂದಣಿಯಾಗಿವೆ. ಪ್ರತಿ ಶಿಬಿರದಲ್ಲಿ 40-50 ಮಂದಿ ಮಂದಿ ಇದ್ದು, ಈ ಶಿಬಿರಗಳ ಮೂಲಕ 35ರಿಂದ 40 ಸಾವಿರ ಮಾಲಾಧಾರಿಗಳು ಈ ವರ್ಷ ಯಾತ್ರೆ ಕೈಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನೇರವಾಗಿ ತೆರಳುವ ಭಕ್ತರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿರಬಹುದು. ಕಳೆದ ವರ್ಷ ಮಹಿಳಾ ಪ್ರವೇಶದ ಗೊಂದಲದ ಕಾರಣ ಕೆಲವು ಶಿಬಿರಗಳ ಮೂಲಕ 100 ಮಂದಿ ಹೋಗುವವರಿದ್ದರೂ 30-40 ಮಂದಿ ಮಾತ್ರ ತೆರಳಿದ್ದರು.
ಮಹಿಳೆಯರ ಪ್ರವೇಶ ಗೊಂದಲ ಈ ಬಾರಿ ಅಷ್ಟಾಗಿ ಇಲ್ಲದ ಕಾರಣ ಭಕ್ತರ ಸಂಖ್ಯೆ ಶೇ.70ರಷ್ಟು ಹೆಚ್ಚುವ ನಿರೀಕ್ಷೆಯಿದೆ. ಡಿ. 15ರಿಂದ ಜ. 15ರ ವರೆಗೆ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಗಳು ನಿತ್ಯ 2 ಸಾವಿರಕ್ಕೂ ಮಿಕ್ಕಿ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಉಡುಪಿ ಬ್ರಹ್ಮಗಿರಿಯಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ.
– ರಾಧಾಕೃಷ್ಣ ಮೆಂಡನ್ ಮಲ್ಪೆ ಜಿಲ್ಲಾಧ್ಯಕ್ಷರು, ಅಯ್ಯಪ್ಪ ಸೇವಾ ಸಮಾಜಂ ಉಡುಪಿ
ಕಳೆದ ಬಾರಿಯ ಗೊಂದಲ ಈ ಬಾರಿ ಇಲ್ಲ. ಅಲ್ಲಿನ ಸರಕಾರವೂ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮಹಿಳೆಯರಿಗೆ ಪ್ರತ್ಯೇಕ ರಕ್ಷಣೆ ಕೊಡುವುದಿಲ್ಲ ಎಂದಿದೆ. ಹಿಂದೂ ಸಂಘಟನೆಗಳು ಮಾಡುತ್ತಿದ್ದ ಕಾರ್ಯವನ್ನು ಈ ಬಾರಿ ಅಲ್ಲಿನ ಪೊಲೀಸರು ಮಾಡು ತ್ತಿದ್ದಾರೆ. ಎಲ್ಲವೂ ಸುಗಮ ವಾಗಿ ನಡೆಯುವ ವಿಶ್ವಾಸವಿದೆ.
– ಗಣೇಶ್ ಪೊದುವಾಳ್ ಜಿಲ್ಲಾಧ್ಯಕ್ಷರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ.
-ಪ್ರಶಾಂತ್ ಪಾದೆ