ವಿಟ್ಲ: ಕುಂಡಡ್ಕ ವಿಷ್ಣುನಗರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಕುಳ – ವಿಟ್ಲ ಮುಟ್ನೂರು ಗ್ರಾಮದಿಂದ ಹೊರಟ ಗ್ರಾಮ ಜ್ಯೋತಿಯು ವಾಹನ ಜಾಥಾದೊಂದಿಗೆ ಗುರುವಾರ 5 ಮನೆತನಗಳಿಗೆ ಸಾಗಿತು.
82 ತಂಡ
ಆಮಂತ್ರಣ ಬಿಡುಗಡೆಯ ದಿನ ಅಂದರೆ ನ.23ರಂದು ಸುಮಾರು 82 ತಂಡಗಳಲ್ಲಿ ಹೊರಟ ಗ್ರಾಮಜ್ಯೋತಿ ಮತ್ತು ಆಮಂತ್ರಣವು ಗ್ರಾಮದ 1,260 ಮನೆಗಳಿಗೆ ತಲುಪಿದ ಬಳಿಕ, ಗುರುವಾರ ಕುಂಡಡ್ಕ ಮನೆತನ, ಕುಡ್ವ ಮನೆತನ, ಕುಳ ಮನೆತನ, ಕರ್ಗಲ್ಲು ನೂಜಿ ಮನೆತನದವರನ್ನು ಆಮಂತ್ರಿಸಿತು. ಬಳಿಕ ಸುಮಾರು 200ಕ್ಕೂ ಅಧಿಕ ವಾಹನಗಳೊಂದಿಗೆ ನೂರಾರು ಮಂದಿ ಭಕ್ತರು ಶೋಭಾಯಾತ್ರೆಯೊಂದಿಗೆ ವಿಟ್ಲ ಅರಮನೆಯ ಅರಸು ಮನೆತನದವರನ್ನು ಆಮಂತ್ರಿಸಿದರು.
ಬಳಿಕ ವಿಟ್ಲ ಸೀಮೆ ದೇಗುಲವಾಗಿರುವ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ, ಆಮಂತ್ರಣದೊಂದಿಗೆ ಜ್ಯೋತಿಯನ್ನು ಸೇರಿಸಲಾಯಿತು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ವರ ನೂಜಿ, ಕೋಶಾಧಿಕಾರಿ ಗೋವಿಂದರಾಜ್ ಪೆರುವಾಜೆ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಮತ್ತು ಜಯರಾಮ್ ವಿಟ್ಲ ಭವ್ಯ ಶೋಭಾಯಾತ್ರೆಯನ್ನು ಸ್ವಾಗತಿಸಿದರು.