ಮಹಾನಗರ: ವಿಟ್ಲ ಪಿಲಿಪ್ಪೆಯ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ- ಬ್ರಹ್ಮಕಲ ಶೋತ್ಸವ ಫೆ. 5ರಿಂದ ಆರಂಭವಾಗಿ 23ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಒಟ್ಟು ಯೋಜನೆಯ ಅನುಷ್ಠಾನದ ಪೂರ್ವಭಾವಿ ಸಭೆ ಮಂಗಳೂರಿನ ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆಯಿತು.
ಶರವು ಶ್ರೀ ರಾಘವೇಂದ್ರ ಶಾಸ್ತ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರು ಹಾಗೂ ಸಪರಿವಾರ ದೇವ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸರ್ವ ಭಕ್ತರು ಶ್ರೀ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಮಾತನಾಡಿ, ಶ್ರೀ ದೇವರು, ದೈವಗಳ ಸಾನಿಧ್ಯಗಳ ವೃದ್ಧಿಗಾಗಿ ಹಾಗೂ ಸಮಸ್ತ ಲೋಕಕಲ್ಯಾಣಕ್ಕಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನೆರವೇರಲಿದ್ದು, ಈ ಸಂದರ್ಭ ಸಂಕಲ್ಪ ಸಹಿತ ಸೇವೆಗೆ ಸರ್ವರೂ ಕೈಜೋಡಿಸೋಣ ಎಂದು ಕರೆ ನೀಡಿದರು. ಫೆ.5ರಿಂದ ಆರಂಭವಾಗಿ 23ರವರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಕಾರ್ಯಗಳು ನಡೆಯಲಿದ್ದು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದೇವಸ್ಥಾನದ ಆಡಳಿತ ಮನೆತನದ ಸದಸ್ಯ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಕರ್ಗಲ್ಲು, ಪ್ರಮುಖರಾದ ಕೆ.ಪಿ.ಶೆಟ್ಟಿ, ಮನೆತನದ ಸದಸ್ಯರಾದ ಯೋಗೀಶ್ ಕುಡ್ವ, ದಯಾನಂದ ಶೆಟ್ಟಿ ಉಜಿರೆಮಾರ್ ಉಪಸ್ಥಿತರಿದ್ದರು.